Advertisement

ಚಳಿ, ಮೋಡ ಹೆಚ್ಚಳ: ಗೇರು, ಮಾವು ಬೆಳೆಗೆ ಹಾನಿ

05:23 PM Jan 25, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಈಗ ಚಳಿ ಮತ್ತು ಮೋಡಕವಿದ ವಾತಾವರಣ ಹೆಚ್ಚುತ್ತಿದ್ದು, ಗೇರು, ಮಾವು ಬೆಳೆಗಳ ಹಾನಿಯಾಗುವ ಆತಂಕ ಬೆಳೆಗಾರರಿಗೆ ಎದುರಾಗಿದೆ.

Advertisement

ಪ್ರಸ್ತುತ ಚಳಿಗಾಲ ಕರಾವಳಿ ಜಿಲ್ಲೆಗಳಲ್ಲಿ ಘಟ್ಟ ಪ್ರದೇಶ ಮಲೆನಾಡಿನಂತೆ ಅನುಭವವಾಗುತ್ತಿದ್ದು, ತೋಟಗಾರಿಕೆ, ಕೃಷಿ ಬೆಳೆಗೆ ಸಂಬಂಧಿಸಿ ಮಾವು, ಗೇರು ಹೂಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ. ಈಗಾಗಲೆ ಗೇರು ಬೆಳೆಗೆ ಟಿ-ಸೊಳ್ಳೆ ಕಾಟ ಆರಂಭಗೊಂಡಿದ್ದು, ಹೂಗಳು ಸೊರಗಲು ಆರಂಭಿಸಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷವೂ ಮಾವು ಮತ್ತು ಗೇರು ಬೆಳೆಗೆ ಟಿ-ಸೊಳ್ಳೆ ಕಾಟದಿಂದ ರೈತರು ತತ್ತರಿಸಿದ್ದರು. ಚಳಿ ಹೆಚ್ಚಿದ್ದು, ಮಂಜಿನ ವಾತಾವರಣವಿದ್ದರೆ ಬೆಳೆಗಳಿಗೆ ಅನುಕೂಲ. ಆದರೆ ಪ್ರಸ್ತುತ ಚಳಿಯ ಜತೆಗೆ ಮೋಡ ವಾತಾವರಣ ಇರುವುದರಿಂದ ಬೆಳೆಗಳಿಗೆ ಸಮಸ್ಯೆಯಾಗುತ್ತಿದೆ.

ಮಳೆಯಿಂದಾಗಿ ನವೆಂಬರ್ , ಡಿಸೆಂಬರ್‌ನಲ್ಲಿ ಮಾವು, ಗೇರು ಹೂ ಬಿಡಬೇಕಿತ್ತು ಆದರೆ ಮಳೆ ವಿಸ್ತರಣೆಯಿಂದ ಅದು ಸಾಧ್ಯವಾಗಿಲ್ಲ. ಇದೀಗ ಎರಡೂ ಒಟ್ಟಿಗೆ ಹೂ ಬಂದಿದೆ. ಚಳಿಯ ಪ್ರಮಾಣ ದಲ್ಲಿಯೂ ಬದಲಾವಣೆ ಯಾಗಿದ್ದು, ಮೋಡದ ವಾತಾವರಣದಿಂದ ಟಿ-ಸೊಳ್ಳೆ ಹೂವಿನ ರಸವನ್ನು ಹೀರಿ ಬೆಳೆಗಳು ಒಣಗುವಂತೆ ಮಾಡುತ್ತಿವೆ.

ಜಿಲ್ಲೆಯಲ್ಲಿ ಚಳಿ ಪ್ರಮಾಣ ಹೆಚ್ಚಳ
ಜನವರಿ ತಿಂಗಳ ಇಲ್ಲಿಯವರೆಗೆ ಗರಿಷ್ಠ 32.5 ಡಿಗ್ರಿ ಮತ್ತು ಕನಿಷ್ಠ 18.5 ಡಿಗ್ರಿ ತಾಪಮಾನ ದಾಖಲಾಗಿದ್ದು, ಕಳೆದ 5 ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ವಿಸ್ತೃತ ತಾಪಮಾನ ಮುನ್ಸೂಚನೆ ಪ್ರಕಾರ ಜ. 26ರಿಂದ ಫೆ. 1ರ ತನಕ ಗರಿಷ್ಠ 30.24, ಕನಿಷ್ಠ 16.5 ಡಿಗ್ರಿ ಉಷ್ಣಾಂಶ ಇರುವ ಸಂಭವವಿದೆ. ಇನ್ನೊಂದು ಕಾರಣ ಉತ್ತರ ಭಾರತ ಭಾಗದಲ್ಲಿ ನಾರ್ತ್‌ ವೆಸ್ಟಲೀì ವಿಂಡ್ಸ್‌ (ವಾಯವ್ಯ ಮಾರುತ) ಕೆಳಮಟ್ಟದಲ್ಲಿ ಬೀಸುತ್ತಿರುವುದರಿಂದ ಕರಾವಳಿ ತೀರ ಪ್ರದೇಶಗಳಲ್ಲಿ ಶೀತ ವಾತಾವರಣ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರವೀಣ್‌ ಕೆ.ಎಂ.

Advertisement

ಬೆಳೆಗಳಿಗೆ ಸಮಸ್ಯೆ, ಪರಿಹಾರ
ಪ್ರಸ್ತುತ ಹವಾಮಾನದಿಂದ ಮಾವು ಬೆಳೆಯಲ್ಲಿ ಹೂ ಬಿಡುವ ಪ್ರಕ್ರಿಯೆ ಮೇಲೆ ಪ್ರಭಾವ ಬೀರುತ್ತದೆ. ಜಿಗಿ ಹುಳು, ಬೂದಿ ರೋಗ ಹೆಚ್ಚುವ ಸಂಭವವಿದೆ. ಅದೇ ರೀತಿ ಗೇರು ಬೆಳೆಯಲ್ಲಿ ಕನಿಷ್ಠ ತಾಪಮಾನ 14 ರಿಂದ 20 ಡಿಗ್ರಿ ಇದ್ದಾಗ ಟಿ-ಸೊಳ್ಳೆ ವಂಶಾಭಿವೃದ್ಧಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತರಕಾರಿ ಬೆಳೆಗಳು ರಸ ಹೀರುವ ಕೀಟಗಳ ಬಾಧೆಯಿಂದ ಇಳುವರಿ ಹಾನಿಯಾಗುವ ಸಾಧ್ಯತೆ ಹೆಚ್ಚು ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದ ಹವಾಮಾನ ವಿಭಾಗದ ಪ್ರಧಾನ ವಿಜ್ಞಾನಿ ಡಾ| ಸುಧೀರ್‌ ಕಾಮತ್‌ ತಿಳಿಸಿದ್ದಾರೆ.

ಗೇರು ಬೆಳೆಯ ಟಿ-ಸೊಳ್ಳೆ ನಿಯಂತ್ರಣಕ್ಕೆ “ಲ್ಯಾಂಬ್ಡಾ ಸಿಹಲೋಥ್ರಿನ್‌’ 1 ಎಂ.ಎಲ್‌ ಅನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಮಾವು ಬೆಳೆ ಬೂದಿ ರೋಗ ನಿಯಂತ್ರಣಕ್ಕೆ “ಕಾರ್ಬೈನ್‌ಡೈಸಿಮ್‌’ ಒಂದು ಲೀ. ನೀರಿಗೆ 2 ಗ್ರಾಂ ಮಿಶ್ರಣ ಮಾಡಬೇಕು. ಮಾವು ಜಿಗಿಹುಳು ನಿಯಂತ್ರಣಕ್ಕೆ “ಇಮಿಡಾಕ್ಲೊಫ್ರಿಡ್‌’ ಒಂದು ಲೀಟರ್‌ ನೀರಿಗೆ 5 ಗ್ರಾಂ ಬೆರೆಸಿ ಸಿಂಪಡಿಸಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಉತ್ತಮ ಇಳುವರಿ ನಿರೀಕ್ಷೆ
ಮಳೆ ವಿಸ್ತರಣೆಯಿಂದಾಗಿ ಹೂ ಬಿಡುವುದು ತಡವಾಗಿದ್ದು, ಪ್ರಸ್ತುತ ಮಾವು, ಗೇರು ಎರಡು ಒಟ್ಟಿಗೆ ಹೂ ಬಿಟ್ಟಿದೆ. ತಡವಾಗಿಯಾದರೂ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೆವು. ಇದೀಗ ಚಳಿ ವಾತಾವರಣ ಜತೆಗೆ ಮೋಡವು ಇರುವುದರಿಂದ ಟಿ-ಸೊಳ್ಳೆ ಕಾಟ ಹೆಚ್ಚುತ್ತಿದೆ. ಈಗಾಗಲೆ ಗೇರು ಬೆಳೆಯ ಹೂಗಳು ಸೊರಗಲು ಆರಂಭಿಸಿವುದು ಆತಂಕಕ್ಕೆ ಕಾರಣವಾಗಿದೆ.
-ಸತ್ಯನಾರಾಯಣ ಉಡುಪ, ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್‌ ಸಂಘ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next