ಕೊಯಮತ್ತೂರು: ಭಾನುವಾರ ಕೊಯಮತ್ತೂರಿನ ಶಿವದೇಗುಲವೊಂದರ ಎದುರು ನಡೆದ ಕಾರು ಸ್ಫೋಟ ಪ್ರಕರಣ ಸಂಬಂಧ ತಮಿಳುನಾಡು ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ತಲ್ಕಾ, ಮೊಹಮ್ಮದ್ ಅಝರುದ್ದೀನ್, ಮೊಹಮ್ಮದ್ ನವಾಸ್ ಇಸ್ಮಾಯಿಲ್, ಮೊಹಮ್ಮದ್ ರಿಯಾಸ್, ಫಿರೋಜ್ ಇಸ್ಮಾಯಿಲ್ ಬಂಧಿತರು. ಇನ್ನೂ 25 ಮಂದಿಯ ಮೇಲೆ ನಿಗಾ ಇಡಲಾಗಿದ್ದು, ಅವರನ್ನು ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ಜಗಳ; ನಾಲ್ವರಿಂದ ಎನ್ ಎಸ್ ಜಿ ಕಮಾಂಡೋ ಮೇಲೆ ಹಲ್ಲೆ; ಓರ್ವನ ಬಂಧನ
ಸದ್ಯದ ಉನ್ನತ ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಆ ಸ್ಫೋಟ ನಿಶ್ಚಿತವಾಗಿ ಉಗ್ರಕೃತ್ಯ! ಭಾನುವಾರ ನಸುಕಿನ 4 ಗಂಟೆಗೆ ಶಿವದೇಗುಲದೆದುರು ಕಾರು ಸ್ಫೋಟಗೊಂಡಾಗ 25 ವರ್ಷದ ಎಂಜಿನಿಯರ್ ಜೆಮಿಶಾ ಮುಬೀನ್ ಮೃತಪಟ್ಟಿದ್ದರು. ಇವರನ್ನು 2019ರಲ್ಲಿ ಎನ್‌ಐಎ ಉಗ್ರಕೃತ್ಯದ ದೂರಿನಡಿ ವಿಚಾರಣೆ ಮಾಡಿತ್ತು. ಅನಂತರ ಈ ವ್ಯಕ್ತಿಯ ಮೇಲೆ ಯಾವುದೇ ಪ್ರಕರಣಗಳಿರಲಿಲ್ಲ.
ಇದೀಗ ಅದೇ ವ್ಯಕ್ತಿಯ ಕಾರಿನಲ್ಲಿ ಚಲಿಸುತ್ತಿದ್ದಾಗ, ಸಿಲಿಂಡರ್ ಸಿಡಿದಿದೆ. ಆಗ ಬಾಂಬ್ ತಯಾರಿಗೆ ಬಳಸುವ ಕೆಲವು ವಸ್ತುಗಳು ಲಭ್ಯವಾಗಿವೆ. ಜೆಮಿಶಾ ಮನೆಯಲ್ಲೂ ಬಾಂಬ್ ತಯಾರಿಕೆಗೆ ಬಳಶುವ ಪೊಟ್ಯಾಶಿಯಂ ನೈಟ್ರೇಟ್ ಸಿಕ್ಕಿತ್ತು! ಸದ್ಯ ಪೊಲೀಸರು ಜೈಲಿನಲ್ಲಿ ಅಜರುದ್ದೀನ್ ಹಾಗೂ ಎಲ್‌ಇಟಿ ನಾಯಕ ಸರ್ಫರ್ ನವಾಝ್ ನನ್ನು ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ,ಅ.21ರಂದು ಮುಬೀನ್ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಐಸಿಸ್‌ಗೆ ಹೋಲುವ ಪೋಸ್ಟನ್ನು ಹಾಕಿಕೊಂಡಿದ್ದರು. ಅ.23ರಂದು ಕಾರು ಸ್ಫೋಟಗೊಂಡು, ಮುಬೀನ್ ಸತ್ತಿರುವುದು ಆತ್ಮಹತ್ಯಾ ದಾಳಿಯೆಂದು ಪೊಲೀಸರು ಒಪ್ಪಿಕೊಳ್ಳಬೇಕು. ಈ ಬಗ್ಗೆ ನಾವು ಕೇಂದ್ರ ಗೃಹಸಚಿವ ಅಮಿತ್ ಶಾಗೂ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.