ಚೆನ್ನೈ: ಕೊಯಮತ್ತೂರಿನಲ್ಲಿ ಅ.23ರಂದು ನಡೆದಿದ್ದ ಕಾರ್ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಉಗ್ರ ಸಂಘಟನೆ ಇರುವ ವಿಚಾರ ಬೆಳಕಿಗೆ ಬಂದಿದೆ. ಅದು ಉಗ್ರ ಸಂಘಟನೆ ಐಸಿಸ್ ನಡೆಸಲು ಉದ್ದೇಶಿಸಿದ್ದ ದೊಡ್ಡ ದಾಳಿಯ ಭಾಗವೇ ಆಗಿತ್ತು ಎಂದು ಎನ್‌ಐಎ ತನಿಖೆಯಿಂದ ದೃಢಪಟ್ಟಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ಸಿಎನ್‌ಎನ್-ನ್ಯೂಸ್ 18′ ವರದಿ ಮಾಡಿದೆ.
ವಿಶೇಷವಾಗಿ ಹಿಂದೂಗಳು ಹಾಗೂ ಸಮುದಾಯದ ಮುಖಂಡರ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಕೊಯಮತ್ತೂರಿನ ಆರು ದೇಗುಲಗಳನ್ನು ಗುರಿಯಾಗಿ ಇರಿಸಿಕೊಂಡು ಕುಕೃತ್ಯ ಎಸಗಲೂ ಕೂಡ ಯೋಚನೆ ನಡೆಸಲಾಗಿತ್ತು. ಅ.23ರ ಘಟನೆಗೆ ಸಂಬಂಧಿಸಿದಂತೆ ಉಗ್ರ ಜಮೇಶಾ ಮುಬಿನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಘಾತಕ ಅಂಶಗಳು ಬೆಳಕಿಗೆ ಬಂದಿದೆ. ಆತ್ಮಹತ್ಯೆ ದಾಳಿಗೆ ಆತ ಮುಂದಾಗಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಘಾತಕ ಉದ್ದೇಶಕ್ಕಾಗಿ ಪೋಟಾಸಿಯಂ ನೈಟ್ರೇಟ್, ಮತ್ತು ಡಿಟರ್ಜೆಂಟ್‌ಗಳನ್ನು ಬಳಕೆ ಮಾಡಲು ಮುಂದಾಗಿದ್ದರು. ಜತೆಗೆ ವಿವಿಧ ಸ್ಫೋಟಕಗಳ ಮಿಶ್ರಣ ಮಾಡಿ, ಅದರಿಂದ ಉಂಟಾಗುವ ಸ್ಫೋಟದ ತೀವ್ರತೆಯನ್ನು ಅಧ್ಯಯನ ನಡೆಸಲು ಇಚ್ಛಿಸಿದ್ದರು ಎಂದು ಎನ್‌ಐಎ ಮೂಲಗಳು ಹೇಳಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿದ್ದಾರೆ.