ಕೊಯಮತ್ತೂರು: ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಸಂಖ್ಯೆ ಆರಕ್ಕೇರಿದೆ.
ಬಂಧಿತ ಸ್ಥಳೀಯ ನಿವಾಸಿ ಅಫ್ಸರ್ ಖಾನ್ ಎನ್ನುವವನಾಗಿದ್ದು, ಅಕ್ಟೋಬರ್ 23 ರಂದು ದೀಪಾವಳಿಯ ಮುನ್ನಾದಿನದಂದು ಇಲ್ಲಿ ಕಾರ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಜಮೇಶಾ ಮುಬಿನ್ ಮನೆಯಿಂದ ವಶಪಡಿಸಿಕೊಂಡ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ವರದಿಯಾಗಿದೆ.
28 ವರ್ಷದ ಅಫ್ಸರ್ ಖಾನ್ ಮುಬಿನ್‌ನ ಸಂಬಂಧಿಯಾಗಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಖರೀದಿಸಲು ಸಹಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿದ ನಂತರ ಖಾನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ಮನೆಯಲ್ಲಿ ಹುಡುಕಾಟ ನಡೆಸುವ ವೇಳೆ ಬುಧವಾರ ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದ್ದು ಅದನ್ನು ಸೈಬರ್ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ಭಾನುವಾರದ ನಡೆದ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಶಿಫಾರಸು ಮಾಡಿದ್ದರು.