ಆಳಂದ: ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆಗಳನ್ನು ಒಗ್ಗಟ್ಟಿನ ಮೂಲಕ ಹತ್ತಿಕ್ಕಲು ಸಾಧ್ಯವಿದೆ ಎಂದು ಕೊರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಮಹಾದೇವಿ ಹತ್ತಿ ಹೇಳಿದರು.
ತಾಲೂಕಿನ ಕೊರಳ್ಳಿ ಗ್ರಾಪಂದಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ದೌರ್ಜನ್ಯ ಮುಕ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರು ಒಗ್ಗಟ್ಟಾಗಿ ಸರ್ಕಾರಿ ಸೌಲಭ್ಯ ಪಡೆಯಬೇಕು. ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗದೇ ಕಾನೂನಿನ ನೆರವು ಪಡೆದು ಆರೋಗ್ಯ ಸಂರಕ್ಷಣೆ ಜೊತೆಗೆ ಕುಟುಂಬದ ಆರ್ಥಿಕ ಸದೃಢತೆ ಸಾಧಿಸಲು ಜಾಗೃತಿ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮೀನಾಕ್ಷಿ ಡಿ. ಹಿರೇಮಠ ಮಾತನಾಡಿ, ಸಮಾಜದಲ್ಲಿ ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತಿದ್ದು, ಇದನ್ನು ತಡೆಯಲು ಮಹಿಳೆಯರು ಮುಂದಾಗಿ ಸರ್ಕಾರದಿಂದ ಬರುವ ಅನೇಕ ಸೌಲಭ್ಯ ಪಡೆದು ಮುಂದೆ ಬರಬೇಕು. ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು ವೈಯಕ್ತಿಕ ಜೀವನ ರೂಪಿಸಿಕೊಳ್ಳಲು ನೀಡಿರುವ ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇಲಾಖೆ ಹಿರಿಯ ಮೇಲ್ವಿಚಾರಕಿ ಸುರೇಖಾ ವಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಹಿರಿಯ ಮೇಲ್ವಿಚಾರಕ ಬಸವರಾಜ, ಕೋರಳ್ಳಿಯ ಗ್ರಾಪಂ ಮಹಿಳಾ ಸದಸ್ಯೆಯರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಮಹಿಳೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಪ್ರಾರ್ಥನೆ ಗೀತೆ ಹಾಡಿದರು, ಮೇಲ್ವಿಚಾರಕಿ ನೇಹಾ ನಿರೂಪಿಸಿದರು. ಕವಿತಾ ಎಸ್. ಮುಚ್ಚಳಂಬಿ ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆ ಚನ್ನಮ್ಮ ವಂದಿಸಿದರು.