Advertisement

ವಿದೇಶೀ ಮರಳು ಆಮದು  ಶಾಶ್ವತ ಪರಿಹಾರಕ್ಕೆ ಚಿಂತಿಸಿ

11:16 AM Apr 06, 2017 | Team Udayavani |

ವಿದೇಶದಿಂದ ಮರಳು ಆಮದು ಹೇಗೆ ಮಿತವ್ಯಯಿ ಎಂಬುದನ್ನು ಸರಕಾರವೇ ಬಿಡಿಸಿ ಹೇಳಬೇಕು. ಇಂಥ ಯೋಜನೆ ಮರಳಿನ ಅಭಾವ, ಅಕ್ರಮ ಮರಳುಗಾರಿಕೆಗೆ ಪರಿಹಾರವಾಗಲಾರದು. ಎಲ್ಲದಕ್ಕೂ ವಿದೇಶದತ್ತ ನೋಡುವ ಬದಲು ಇಲ್ಲಿಯೇ ಸಾಧ್ಯವಿರುವ ಶಾಶ್ವತ ಪರಿಹಾರಗಳ ಬಗ್ಗೆ ಚಿಂತಿಸಬೇಕು.

Advertisement

ಉಡುಪಿಯ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ಗ್ರಾಮ ಕರಣಿಕರ ಮೇಲೆ ಮರಳು ಮಾಫಿಯಾ ಹಲ್ಲೆ ಮಾಡಿದ ಬಳಿಕ ಅಕ್ರಮ ಮರಳುಗಾರಿಕೆ ದಂಧೆಯ ಕುರಿತು ಮತ್ತೂಮ್ಮೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಕರ್ನಾಟಕ ಎಂದಲ್ಲ, ಇಡೀ ದೇಶದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಿಸಿದೆ. ಇದು ಸಾವಿರಾರು ಕೋಟಿ ರೂ.ಗಳ ವ್ಯವಹಾರ; ಅನೇಕ ರಾಜಕಾರಣಿಗಳು, ಉನ್ನತ ಸರಕಾರಿ ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹಾಗೆಂದು ನದಿಯಿಂದ ಮರಳು ಎತ್ತುವುದು ಹೊಸದೇನಲ್ಲ. ಇದಕ್ಕೆ ಶತಮಾನಗಳ ಹಿನ್ನೆಲೆಯಿದೆ. ಆದರೆ ಕಾಂಕ್ರೀಟು ನಿರ್ಮಾಣದ ಯುಗ ಆರಂಭವಾದಂದಿನಿಂದ ಮರಳಿಗೆ ಬೇಡಿಕೆ ಹೆಚ್ಚತೊಡಗಿತು. ಆದರೂ 90ರ ದಶಕದ ತನಕ ಮರಳಿನ ಬೇಡಿಕೆ ಮಿತವಾಗಿಯೇ ಇತ್ತು. 

ಮರಳಿಗೆ ಚಿನ್ನದಂತಹ ಬೆಲೆ ಬಂದದ್ದು ನಿರ್ಮಾಣ ಉದ್ಯಮ ಅಗಾಧವಾಗಿ ಬೆಳೆದ ಬಳಿಕ. ಕರ್ನಾಟಕದಲ್ಲೂ ಅಕ್ರಮ ಮರಳುಧಿಗಾರಿಕೆ ಆಳವಾಗಿ ಬೇರುಬಿಟ್ಟಿದೆ. ನಿತ್ಯ ಸರಾಸರಿ 16 ಅಕ್ರಮ ಮರಳುಗಾರಿಕೆ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವುದೇ ಈ ದಂಧೆ ಯಾವ ಪರಿ ಬೆಳೆದಿದೆ ಎನ್ನುವುದನ್ನು ತಿಳಿಸುತ್ತದೆ. ರಾಜ್ಯದ ಕರಾವಳಿಯ ಅಕ್ರಮ ಮರಳು ದಂಧೆಗೂ ಒಳನಾಡಿನ ಅಕ್ರಮ ದಂಧೆಗೂ ವ್ಯತ್ಯಾಸವಿದೆ. ಕರಾಧಿವಳಿಯಲ್ಲಿ ಸ್ಥಳೀಯ ಬೇಡಿಕೆಗೆ ತಕ್ಕಷ್ಟು ಮರಳು ಇದ್ದರೂ ಅದನ್ನು ತೆಗೆದು ಬಳಸಲು ಕಾನೂನು ಅಡ್ಡಿಯಾಗಿರುವುದರಿಂದ ಅಕ್ರಮ ದಂಧೆ ನಡೆಯುತ್ತಿದೆ. ಕರಾವಳಿಯ ಮರಳು ರಹಸ್ಯವಾಗಿ ಬೆಂಗಳೂರು, ಮೈಸೂರು, ಹಾಸನ ಮತ್ತಿತರ ಕಡೆಗಳಿಗೆ ಮಾತ್ರವಲ್ಲದೆ ಗಡಿದಾಟಿ ಕೇರಳಕ್ಕೂ ಹೋಗುತ್ತದೆ. ಇಲ್ಲಿ ಇದು ವಾರ್ಷಿಕ ಸುಮಾರು 800 ಕೋ. ರೂ.ಗಳ ಬೃಹತ್‌ ವ್ಯವಹಾರ. ಆದರೆ ಸರಕಾರಕ್ಕೆ ಸಿಗುವುದು ಕೆಲವೇ ಕೋಟಿ ರೂಪಾಯಿ ರಾಯಧನ. 

ಇದೀಗ ಸರಕಾರ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ಚಿಂತನೆ ನಡೆಸುತ್ತಿದೆ. ಸರಕಾರದ್ದು ಯಾವಾಗಲೂ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಕಾರ್ಯಶೈಲಿ. ಈ ಹಿಂದೆ ಅಕ್ರಮ ಮರಳುಗಾರಿಕೆ ವಿರುದ್ಧ ಕೂಗು ಜೋರಾದಾಗ ಕೃತಕ ಮರಳು (ಎಂ ಸ್ಯಾಂಡ್‌) ಸೃಷ್ಟಿಸುವ ಆಶ್ವಾಸನೆ ನೀಡಿತ್ತು. ಜನರ ಒತ್ತಾಯ ಕಡಿಮೆಯಾಗುತ್ತಿದ್ದಂತೆ ಈ ವಿಚಾರವನ್ನು ಮರೆತುಬಿಟ್ಟಿದೆ. ಮತ್ತೆ ಅಕ್ರಮ ಮರಳುಗಾರಿಕೆಯ ಸಮಸ್ಯೆ ನೆನಪಾಗಿರುವುದು ಜಿಲ್ಲಾಧಿಕಾರಿ ಮೇಲೆ ಹಲ್ಲೆ ನಡೆದಾಗ. 

ಇಂಡೋನೇಷ್ಯಾ, ಮಲೇಶ್ಯಾದಂತಹ ನೆರೆಯ ದೇಶಗಳಿಂದ ಮರಳು ತರಿಸುವುದು ಈ ಯೋಜನೆ. ವಿದೇಶದ ಮರಳಿಗೆ ರಾಜ್ಯದ ಮರಳಿಗಿಂತ ಕಡಿಮೆ ಬೆಲೆಯಿದೆ. 12 ಸಾವಿರ ರೂ.ಗೆ ಒಂದು ಟನ್‌ ಮರಳು ಸಿಗುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರ. ಟನ್‌ಗೆ 12 ಸಾವಿರವಾದರೆ 10 ಟನ್‌ ಹಿಡಿಸುವ ಲಾರಿಯ ಮರಳಿನ ಬೆಲೆ 1.20 ಲ. ರೂ. ಆಗುತ್ತದೆ. ಜತೆಗೆ ಅದರ ಸಾಗಣೆ ಇತ್ಯಾದಿ ಖರ್ಚುವೆಚ್ಚಗಳು ಪ್ರತ್ಯೇಕ. ಕರಾವಳಿಯಲ್ಲಿ ಪ್ರಸ್ತುತ 20,000-25,000 ರೂ.ಗೆ ಒಂದು ಲಾರಿ ಮರಳು ಸಿಗುತ್ತದೆ. ಹೀಗಿರುವಾಗ 1.20 ಲ. ರೂ. ಬೆಲೆಯ ಮರಳು ಯಾವ ಲೆಕ್ಕದಲ್ಲಿ ಅಗ್ಗವಾಗುತ್ತದೆ ಎನ್ನುವುದನ್ನು ಸರಕಾರವೇ ವಿವರಿಸಿ ಹೇಳಬೇಕು. 

Advertisement

ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವಂತಹ ಅಸಂಬದ್ಧ ಯೋಜನೆಗಿಂತ ಇರುವ ಮರಳನ್ನೇ ವಿವೇಚನೆಯಿಂದ ಬಳಸಿಕೊಳ್ಳಬಹುದಲ್ಲವೆ? ಅನ್ಯರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಿಸುವ ದಂಧೆಗೆ ಕಡಿವಾಣ ಹಾಕಿದರೆ ಸಾಕಷ್ಟು ಮರಳು ಸಿಗುತ್ತದೆ. ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೆ ವಿದೇಶದತ್ತ ನೋಡುವ ಅಭ್ಯಾಸ ಏಕೆ? 

ಇದರ ಜತೆಗೆ ಮರಳಿಗೆ ಪರ್ಯಾಯವಾಗಿ ಎಂಸ್ಯಾಂಡ್‌ನ‌ಂತಹ ವಸ್ತುಗಳನ್ನು ಉಪಯೋಗಿಸುವುದು ಸಾಧ್ಯವೇ ಎಂಬ ಬಗೆಗೂ ಚಿಂತನೆ, ಸಂಶೋಧನೆ ನಡೆಸಬೇಕಾಗಿದೆ. ಈ ದಿಶೆಯಲ್ಲಿ ಇಂಜಿನಿಯರಿಂಗ್‌ ತಜ್ಞರು ಮತ್ತು ವಿಜ್ಞಾನಿಗಳ ಸಹಕಾರವನ್ನು ಪಡೆದುಕೊಳ್ಳಬೇಕು. ರಾಜ್ಯದಲ್ಲಿರುವ ಮರಳಿನ ಅಭಾವಕ್ಕೆ ಪರಿಹಾರವಾಗಿ ವಿದೇಶದಿಂದ ಮರಳು ಆಮದು ಮಾಡಿಕೊಳ್ಳುವ ವಿಧಾನ ಮುಂದೊಂದು ದಿನ ಮರಳಿನಂತಹ ಸಂಪನ್ಮೂಲ ಸಂಪೂರ್ಣ ಖಾಲಿಯಾಗುವ ಸನ್ನಿವೇಶವನ್ನು ಮತ್ತೂಂದಷ್ಟು ಕಾಲ ಹಿಂದಕ್ಕೆ ತಳ್ಳುವ ಪ್ರಕ್ರಿಯೆಯಾದೀತೇ ಹೊರತು ಅಕ್ರಮ ಮರಳುಗಾರಿಕೆಗೆ ಅಥವಾ ಮರಳಿನ ಅಭಾವಕ್ಕೆ ಶಾಶ್ವತವಾದ ಪರಿಹಾರವಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next