ಬೆಂಗಳೂರು: ಅಗ್ಗದ ದರದಲ್ಲಿ ತಿಂಡಿ ಮತ್ತು ಊಟಕಷ್ಟೇ ಸಮೀತವಾಗಿದ್ದ ಇಂದಿರಾ ಕ್ಯಾಂಟಿನಲ್ಲಿ ಇದೀಗ ಕಾಫಿ ಹಾಗೂ ಟೀ ಕೊಡಲು ಬಿಬಿಎಂಪಿ ನಿರ್ಧರಿಸಿದೆ. ಪ್ರಸ್ತುತ ಪ್ರತಿನಿತ್ಯ ಇಂದಿರಾ ಕ್ಯಾಂಟಿನ್‌ನ ಗ್ರಾಹಕರು 5 ರೂ.ಗೆ ತಿಂಡಿ ತಿಂದು, ಅಕ್ಕ-ಪಕ್ಕದ ಹೋಟೆಲ್‌ಗಳಲ್ಲಿ 10 ರೂ. ಗೆ ಟೀ ಅಥವಾ ಕಾಫಿ ಕುಡಿಯುತ್ತಿದ್ದರು.
ಹೀಗಾಗಿ ಕೆಲ ಸಾರ್ವಜನಿಕರು ಕಾಫಿ ಅಥವಾ ಟೀ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ತಿಂಡಿ ಜತೆಯಲ್ಲಿ 5 ರೂ.ಗೆ ಕಾಫಿ ಅಥವಾ ಟೀ ಜತೆಗೆ ಒಂದು ವಡೆ ನೀಡಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಶುಕ್ರವಾರ ನಗರದ ಬಿಎಂಆರ್‌ಡಿಎ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರೈಕೆದಾರರಿಗೆ ತಿಂಡಿ ಮತ್ತು ಊಟಕ್ಕೆ ಸಬ್ಸಿಡಿ ನೀಡಲಾಗುತ್ತಿದ್ದು, ಕಾಫಿ ಅಥವಾ ಟೀಗೆ ಯಾವುದೇ ಸಬ್ಸಿಡಿ ಇರುವುದಿಲ್ಲ. ಭಾಗಶಃ ಜನವರಿ ಮೊದಲ ವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಹೊಸ ಮತದಾರರ ಪಟ್ಟಿ: ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಲೋಕಸಭೆಗೆ ಆಯ್ಕೆ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ನಿಧನ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸ್ಥಾಯಿ ಸಮಿತಿ ಹಾಗೂ ಉಪ ಮೇಯರ್ ಚುನಾವಣೆಗೆ ಹೊಸ ಮತದಾರರ ಪಟ್ಟಿ ಸಿದ್ಧಪಡಿಸುವಂತೆ ಪ್ರಾದೇಶಿಕ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ವಿ.ಎಸ್.ಉಗ್ರಪ್ಪ ಅವರ ಹೆಸರು ಇರಬೇಕೋ? ಬೇಡವೋ? ಎಂಬ ಬಗ್ಗೆ ಸೂಚನೆ ನೀಡುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ(ಡಿಪಿಎಆರ್)ಗೆ ಪತ್ರ ಬರೆಯಲಾಗಿದ್ದು, ಉತ್ತರ ಬಂದ ಬಳಿಕ ಹೊಸ ಮತದಾರರ ಪಟ್ಟಿ ಸಿದ್ದಪಡಿಸಲಾಗುವುದು ಎಂದು ಅವರು ಹೇಳಿದರು.