ಚಿಕ್ಕಮಗಳೂರು: ಕಾಫಿತೋಟದಲ್ಲಿ ಕಸ ಹೊಡೆದು ಮಳೆಗಾಳಿಗೆ ಬಿದ್ದಿರೋ ಕಾಫಿಯನ್ನು ಆಯ್ದುಕೊಂಡು ಮನೆಗೆ ತರುವಂತಹಾ ದುಸ್ಥಿತಿ ಜಿಲ್ಲೆಯ ಮಲೆನಾಡು ಭಾಗಕ್ಕೆ ಬಂದೊದಗಿದೆ. ಈ ದೃಶ್ಯ ನೋಡುಗರ ಕಣ್ಣಿಗೆ ಕರುಳು ಹಿಂಡುವಂತಿದೆ.
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಕಳಸ ಭಾಗದಲ್ಲಿ ಯತೇಚ್ಛವಾಗಿ ಕಾಫಿ ಬೆಳೆಯುತ್ತಾರೆ. ಅಡಿಕೆಯನ್ನೂ ಬೆಳೆಯುತ್ತಾರೆ. ಆದರೆ, ಕಾಫಿಯೇ ಹೆಚ್ಚು. ಅದರಲ್ಲಿ 5-10 ಎಕರೆ ಕಾಫಿಯೊಂದಿಗೆ ಬದುಕು ಕಟ್ಟಿಕೊಂಡಿರೋ ಬಡ ಬೆಳೆಗಾರರೇ ಜಾಸ್ತಿ. ಆದರೆ, ಈಗ ಅವರೆಲ್ಲಾ ಕಾಫಿ ತೋಟದಲ್ಲಿ ಇಡೀ ದಿನ ಕಸ ಹೊಡೆದು ಮಳೆ-ಗಾಳಿಗೆ ಬಿದ್ದಿರೋ ಕಾಫಿ ಹಣ್ಣನ್ನ ಆಯ್ದುಕೊಂಡು ಮನೆಗೆ ತರುವಂತಹಾ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ತಿಂಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ನಿಂತಿಲ್ಲ. ಕಾಫಿ ಹಣ್ಣನ್ನ ಕುಯ್ಯೋದಕ್ಕೂ ಮಳೆರಾಯ ಬಿಟ್ಟಿಲ್ಲ. ಕೆಲವರು ಹೆಚ್ಚಿನ ಕೂಲಿ ನೀಡಿ ಮಳೆಯಲ್ಲಿ ನೆನೆದುಕೊಂಡೆ ಕಾಫಿಯನ್ನ ಕೀಳಿಸಿದ್ದರು. ಈಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಿನಗಳಿಂದ ಮಳೆ ಪ್ರಮಾಣ ಸ್ವಲ್ಪ ತಗ್ಗಿದೆ. ಈಗ ಗಿಡದಲ್ಲಿರೋ ಕಾಫಿಗಿಂತ ನೆಲದಿರೋ ಕಾಫಿಯೇ ಹೆಚ್ಚು. ಹಾಗಾಗಿ, 4-5-10 ಎಕರೆ ಕಾಫಿ ತೋಟದಲ್ಲಿ ಬದುಕು ಕಟ್ಟಿಕೊಂಡಿರುವ ಬಡ ಬೆಳೆಗಾರರು ತೋಟದಲ್ಲಿ ಕಸ ಹೊಡೆದು ಮಳೆ-ಗಾಳಿಗೆ ಕೆಳಗೆ ಬಿದ್ದಿರೋ ಕಾಫಿಯನ್ನ ಆಯ್ದುಕೊಳ್ಳುತ್ತಿದ್ದಾರೆ. ಇತಿಹಾಸದಲ್ಲಿ ಮಲೆನಾಡಿಗರಿಗೆ ಇಂತಹಾ ದುಸ್ಥಿತಿ ಬಂದಿರಲಿಲ್ಲ. ಈಗ ಇಡೀ ತೋಟದಲ್ಲಿ ಕಸ ಹೊಡೆಯುವಂತಹಾ ಸ್ಥಿತಿ ಬಂದಿದೆ. ಮಹಿಳೆಯರು ಹಾಗೂ ಒಂದಿಬ್ಬರು ಕೂಲಿ ಕಾರ್ಮಿಕರು ತೋಟದಲ್ಲಿ ಕಸ ಹೊಡೆಯಲು ಮುಂದಾಗಿದ್ದಾರೆ. ಕಸ ಹೊಡೆದು ಅಲ್ಲಲ್ಲೇ ಗುಡ್ಡೆ ಮಾಡಿ ಕಾಫಿ ಎಲೆಯನ್ನ ಒಂದೆಡೆ ತೆಗೆದು ಮಣ್ಣಲ್ಲಿ ಬಿದ್ದಿರೋ ಕಾಫಿಯನ್ನ ಆರಿಸಿ ಮನೆಗೆ ತರುತ್ತಿದ್ದಾರೆ.
2019ರಲ್ಲಿ 35 ವರ್ಷಗಳ ಹಿಂದೆ ಸುರಿದ ಮಳೆ ಸುರಿದರು ಮಲೆನಾಡಿಗರಿಗೆ ಇಂತಹಾ ಸ್ಥಿತಿ ಬಂದಿರಲಿಲ್ಲ. ಆದರೆ, ಈ ವರ್ಷ ಫಸಲನ್ನ ಕೊಯ್ಯುವ ವೇಳೆಯಲ್ಲಿ ಆರಂಭವಾದ ಮಳೆರಾಯ ಮಲೆನಾಡಿಗರ ಬದುಕನ್ನ ಮೂರಾಬಟ್ಟೆಯನ್ನಾಗಿಸಿದ್ದಾನೆ. ಹೀಗೆ ಕಸ ಹೊಡೆದು ಕಾಫಿಯನ್ನ ಆರಿಸಿ ತಂದರೂ ಅದನ್ನ ಒಣಗಿಸಲು ಬಿಸಿಲಿಲ್ಲ. ಮಲೆನಾಡಲ್ಲಿ ಮಳೆ ಸ್ವಲ್ಪ ತಗ್ಗಿದೆ. ಆದರೆ, ಮೋಡ ಹಾಗೇ ಇದೆ. ಕಾಫಿ-ಅಡಿಕೆ-ಮೆಣಸನ್ನ ಒಣಗಿಸಲು ಜಾಗವಿಲ್ಲದೆ ಬೆಳೆಗಾರರು ಗ್ಯಾಸ್, ದೊಡ್ಡ-ದೊಡ್ಡ ಸೌದೆ ಒಲೆಯಲ್ಲಿ ಕಾಫಿ-ಅಡಿಕೆಯನ್ನ ಒಣಗಿಸಿದ್ದರು. ಕೆಲವರು ತೋಟದತ್ತ ಮುಖ ಮಾಡೋದನ್ನೇ ನಿಲ್ಲಿಸಿದ್ದರು. ಆದರೀಗ, ತೋಟದಲ್ಲಿ ಕಸ ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ. ಮುಂದೆ ಇನ್ನೆಂಥಾ ಸ್ಥಿತಿ ಬರುತ್ತೋ ಎಂದು ಮಲೆನಾಡಿಗರು ಕಂಗಾಲಾಗಿದ್ದಾರೆ.