ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಕಳೆದ ಐದು ವರ್ಷಗಳಲ್ಲಿ 30ಕೋಟಿ ರೂ.
ಗಳನ್ನು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಮಂಜೂರಿಗೊಳಿಸಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್ ಹೇಳಿದರು.
ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಶುಕ್ರವಾರ 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮೈಸೂರು ಭಾಗದ ಕೃಷ್ಣರಾಜ ಸಾಗರ ಮತ್ತು ತುಂಗಭದ್ರಾ ಯೋಜನೆಗಳಿಗೆ ಸರಕಾರ ಹಣ ನೀಡಿ ನಮ್ಮ ಭಾಗದ ಯೋಜನೆಗಳಿಗೆ ತಾರತಮ್ಯ ಮಾಡುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನಮ್ಮ ಭಾಗದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಸಾಕಷ್ಟು ಹಣವನ್ನು ನೀಡಿ ಪೂರ್ಣಗೊಳಿಸಲಾಗಿದೆ. ರೈತರು ಇನ್ನು ಮುಂದೆ ನೀರಾವರಿ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿ ಆಗಿದೆ. 1.20ಲಕ್ಷರೂ ಆದಾಯವುಳ್ಳ ಎಲ್ಲ ಬಡವರಿಗೆ ಬಿಪಿಎಲ್ ಕಾರ್ಡು ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೂ 7ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಕೋಡ್ಲಿ ಗ್ರಾಮದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ 9.50ಕೋಟಿ ರೂ. ನೀಡಿ ಕಾಮಗಾರಿ ಪೂರ್ಣಗೊಳಿಸಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಅಣವೀರಯ್ಯ ಸ್ವಾಮಿ ಕೋಡ್ಲಿ, ರವಿರಾಜ ಕೊರವಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಮಲ್ಲಿಕಾರ್ಜುನ ಚಿಂತಕುಂಟಿ, ಶಿವಶರಣಪ್ಪ
ಸಜ್ಜನ, ಬಸವರಾಜ ಕೊಲಕುಂದಿ, ಶಬ್ಬೀರಮಿಯ್ಯ ಸೌದಾಗರ, ಭರತ ಬುಳ್ಳ, ಅರಳಿ ಅಣ್ಣರಾವ್, ಜೆಇ ಲಕ್ಷ್ಮೀನಾರಾಯಣರೆಡ್ಡಿ, ಬಿ.ಸಿ.ರಾಠೊಡ, ಖಾಜಾ ಪಟೇಲ್, ಮಾರುತಿ ಜಮಾದಾರ ಇದ್ದರು. ಅಲೀಮ ನಾಕೋಡಿ ಸ್ವಾಗತಿಸಿದರು, ಪಿಡಿಒ ಬಂಡೆಪ್ಪ ವಂದಿಸಿದರು.