Advertisement

ಬುಕ್ಕಿಗಳಿಗೆ ಕೋಡ್‌ ವರ್ಡ್‌ ಸಂದೇಶ ರವಾನೆ!

10:08 AM Dec 21, 2019 | Sriram |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ ( ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ, ಆಟಗಾರರು ಮತ್ತು ಬುಕ್ಕಿಗಳು ನಡೆಸಿದ ಕಳ್ಳಾಟದ ರಹಸ್ಯಗಳು ಬಗೆದಷ್ಟೂ ಬಯಲಾಗುತ್ತಿವೆ.

Advertisement

ಬುಕ್ಕಿಗಳು ನೀಡಿದ ಹಣದ ಥೈಲಿ, ಐಶಾರಾಮಿ ಪಾರ್ಟಿಗಳಿಗೆ ಮನಸೋತು ಕಳ್ಳಾಟ ಆಡಲು ಒಪ್ಪಿಕೊಂಡಿದ್ದ ಆಟಗಾರರು, ಕೋಡ್‌ ವರ್ಡ್‌ಗಳ ಮೂಲಕ ನಿರಂತರವಾಗಿ ಬುಕ್ಕಿಗಳಿಗೆ ಸಂದೇಶ ರವಾನಿಸುತ್ತಿದ್ದರು. ಕಳ್ಳಾಟದ ಆಟಗಾರ, ನಿಧಾನವಾಗಿ ಜೆರ್ಸಿಯ ತೋಳು ಮಡಚುವಂತೆ ಮಾಡುವುದು, ಬ್ಯಾಟ್‌ ಬದಲಾಯಿಸುವುದನ್ನು ಮಾಡುತ್ತಿದ್ದ. ಇದನ್ನು ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದ ಬುಕ್ಕಿಗಳು, ಭಾರೀ ಬೆಟ್ಟಿಂಗ್‌ ನಡೆಸಿ ಹಣ ದೋಚುತ್ತಿದ್ದರು.

ಧರಿಸಿದ ಜೆರ್ಸಿ ಮಡಚುವಂತೆ ನಟಿಸಿದರೆ ಬೌಲರ್‌ ಹಾಕುವ ಎಸೆತವನ್ನು ಡ್ರಾಪ್‌ ಮಾಡುತ್ತೇನೆ ಎಂದೂ, ಎರಡು ಮೂರು ಬಾರಿ ಮಡಚಿದರೆ ಇಂತಿಷ್ಟೇ ರನ್‌ ತೆಗೆದುಕೊಳ್ಳುತ್ತೇನೆ ಎಂಬಂತಹ ಸಂದೇಶ ಬುಕ್ಕಿಗಳಿಗೆ ರವಾನೆಯಾಗುತ್ತಿತ್ತು. ಬ್ಯಾಟ್‌ ಬದಲಾಯಿಸುವ ಮೂಲಕವೂ ಬುಕ್ಕಿಗಳಿಗೆ ಸಂದೇಶ ರವಾನೆಯಾಗುತ್ತಿತ್ತು ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.ಪ್ರಮುಖ ಬುಕ್ಕಿಗಳು ಇನ್ನೂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ.

20 ಎಸೆತಕ್ಕೆ 10 ರನ್‌…
2018ರ ಕೆಪಿಎಲ್‌ ಟೂರ್ನಿಯ ಆ. 31ರಂದು ಮೈಸೂರಿನಲ್ಲಿ ಹುಬ್ಬಳ್ಳಿ ಟೈಗರ್-ಬೆಂಗಳೂರು ಬ್ಲಾಸ್ಟ್‌ರ್‌ ತಂಡಗಳ ನಡುವಿನ ಪಂದ್ಯದಲ್ಲಿ ಬುಕ್ಕಿ ಹಾಗೂ ಕೋಚ್‌ ವಿನೂಪ್ರಸಾದ್‌ ಹೇಳಿದಂತೆ ಮಾಡಲು ಬ್ಲಾಸ್ಟರ್ಸ್‌ ತಂಡದ ಬ್ಯಾಟ್ಸ್‌ಮನ್‌ ಎಂ. ವಿಶ್ವನಾಥ್‌ ಒಪ್ಪಿಕೊಂಡಿದ್ದರು. ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ಮಾಡಲು ಐದು ಲಕ್ಷ ರೂ. ಗಳಿಗೆ ಒಪ್ಪಂದ ನಡೆದಿತ್ತು.

ಪಂದ್ಯದ ಹಿಂದಿನ ದಿನ ಅಭ್ಯಾಸ ನಡೆಸುತ್ತಿದ್ದ ವಿಶ್ವನಾಥ್‌ ಬಳಿ ತೆರಳಿದ್ದ ಕೋಚ್‌ ವಿನೂಪ್ರಸಾದ್‌, ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿ 20 ಎಸೆತಗಳಿಂದ 10ಕ್ಕಿಂತ ಕಡಿಮೆ ರನ್‌ ದಾಖಲಿಸಬೇಕು. ಜತೆಗೆ, ಕ್ರೀಸ್‌ನಲ್ಲಿದ್ದಾಗ ಮೈದಾನದ ಹೊರಗೆ ಬೆಟ್ಟಿಂಗ್‌ ನಡೆಸಲು ಬುಕ್ಕಿಗಳಿಗೆ ಅನುಕೂಲವಾಗಲು, ಜೆರ್ಸಿಯ ತೋಳು ಮಡಚಬೇಕು, ಬ್ಯಾಟ್‌ ಬದಲಾಯಿಸಬೇಕು ಎಂದು ಸೂಚನೆ ನೀಡಿದ್ದರು. ವಿಶ್ವನಾಥನ್‌ 17 ಎಸೆತಗಳಿಂದ 9 ರನ್‌ ಗಳಿಸಿ ಔಟಾಗಿದ್ದರು ಎಂದು ತನಿಖಾ ತಂಡದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

ಸಿಕ್ಕಿಬಿದ್ದವರೆಲ್ಲ ಬ್ಯಾಟ್ಸ್‌ಮನ್‌ಗಳು!
ಈವರೆಗಿನ ತನಿಖೆಯಲ್ಲಿ ಬುಕ್ಕಿಗಳಿಂದ ಫಿಕ್ಸ್‌ ಆದವರೆಲ್ಲ ಬ್ಯಾಟ್ಸ್‌ಮನ್‌ಗಳೇ ಆಗಿದ್ದಾರೆ. ಇವರೆಂದರೆ ಎಂ. ವಿಶ್ವನಾಥನ್‌, ನಿಶಾಂತ್‌ ಸಿಂಗ್‌ ಶೆಖಾವತ್‌, ಸಿ.ಎಂ. ಗೌತಮ್‌, ಅಬ್ರಾರ್‌ ಖಾಜಿ. ಬೌಲರ್‌ಗಳ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next