Advertisement

ಹೂಳೆತ್ತುವ ಕಾಮಗಾರಿಗೆ 2ನೇ ವರ್ಷವೂ ನೀತಿ ಸಂಹಿತೆ ಅಡ್ಡಿ !

09:14 AM Jun 06, 2019 | Team Udayavani |

ಉಡುಪಿ: ರಾಜಕಾಲುವೆ ಯೆನಿಸಿರುವ ಕಲ್ಸಂಕ ತೋಡು ಈ ವರ್ಷವೂ ಉಕ್ಕಿ ಹರಿದು ನೆರೆ ಉಂಟಾಗುವ ಆತಂಕ ಎದುರಾಗಿದೆ. ತೋಡಿನ ಹೂಳೆತ್ತಬೇಕು, ಗಿಡಗಂಟಿ, ಕಸಗಳನ್ನು ತೆಗೆದು ನೀರು ಹರಿವಿಗೆ ದಾರಿ ಮಾಡಿಕೊಡಬೇಕು ಎಂಬ ಬೇಡಿಕೆ ಈ ಬಾರಿಯೂ ಈಡೇರಿಲ್ಲ.

Advertisement

ಕಲ್ಸಂಕ ತೋಡು ಮಣಿಪಾಲದ ಮಣ್ಣಪಳ್ಳದಿಂದ ಮಲ್ಪೆ ಕಲ್ಮಾಡಿವರೆಗೆ ಸರಿಸುಮಾರು 10 ಕಿ.ಮೀ. ಉದ್ದಕ್ಕೆ ಹರಿಯುತ್ತದೆ. ಇಂದ್ರಾಣಿ ದೇವಸ್ಥಾನದ ಸಮೀಪ ಹಾದುಹೋಗುವ ಈ ತೋಡನ್ನು ಇಂದ್ರಾಣಿ ಹೊಳೆ ಎಂದೂ ಕರೆಯಲಾಗುತ್ತದೆ. ಪ್ರತೀ ವರ್ಷ ಇದು ತುಂಬಿ ಹರಿಯುತ್ತದೆ. ಆದರೆ ಕಳೆದ ವರ್ಷ ಹೂಳು ತೆಗೆಯದೆ ಇದ್ದುದರಿಂದ ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಗರೋಡಿ ರಸ್ತೆ ಪ್ರದೇಶಗಳಲ್ಲಿ ನೆರೆಹಾವಳಿ ಉಂಟಾಗಿತ್ತು. ಈ ಬಾರಿಯೂ ಅದೇ ಆತಂಕ ಸ್ಥಳೀಯರಲ್ಲಿದೆ.

ನೀತಿ ಸಂಹಿತೆ ಅಡ್ಡಿ
ಕಳೆದ ವರ್ಷ ವಿಧಾನಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ತೋಡಿನ ಹೂಳೆತ್ತುವ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ನೀತಿಸಂಹಿತೆ ಮುಗಿದು ಕಾಮಗಾರಿ ಆರಂಭಿಸುವಷ್ಟರಲ್ಲಿ ಮಳೆ ಬಂದು ತೋಡು ತುಂಬಿ ಹರಿದು ಹಲವು ಮನೆಗಳಿಗೆ ನೆರೆ ನುಗ್ಗಿತ್ತು. ರಸ್ತೆ ಸಂಪರ್ಕವೂ ಕಡಿದು ಹೋಗಿತ್ತು. ಈ ಬಾರಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಇದುವರೆಗೆ ಕಾಮಗಾರಿ ನಡೆದಿಲ್ಲ.

ಕಿರಿದಾಗುತ್ತಿದೆ
ವರ್ಷದಿಂದ ವರ್ಷಕ್ಕೆ ಕಲ್ಸಂಕ ತೋಡು ಕಿರಿದಾಗುತ್ತಿದೆ. ಕೆಲವೆಡೆ ಅತಿಕ್ರಮಣ ನಡೆಯುತ್ತಿದೆ. ಇನ್ನು ಕೆಲವೆಡೆ ಗಿಡಗಂಟಿಗಳು ಮುಚ್ಚಿ ಹೋಗಿವೆ. ತೋಡಿನ ಅಲ್ಲಲ್ಲಿ ಕಸದ ರಾಶಿಗಳಿದ್ದು ಅದು ಕೂಡ ಮಳೆನೀರು ಹರಿಯಲು ತಡೆಯಾಗಲಿದೆ.

ಈ ತೋಡಿಗೆ ಕೊಳಚೆ ನೀರು ಕೂಡ ಸೇರ್ಪಡೆಯಾಗುವುದರಿಂದ ಮಳೆಗಾಲದಲ್ಲಿ ನೆರೆ ಜತೆಗೆ ಕೊಳಚೆ ನೀರು ಕೂಡ ಅನೇಕ ಮನೆಯಂಗಳಗಳಿಗೆ ಪ್ರವಹಿಸುತ್ತದೆ. ಈ ಬಾರಿ ಸಾಮಾನ್ಯ ಮಳೆಗಿಂತ ತುಸು ಹೆಚ್ಚು ಮಳೆಬಂದರೂ ಕಲ್ಸಂಕ ತೋಡು ಉಕ್ಕಿ ಹರಿಯುವುದು ಖಂಡಿತ ಎಂಬ ಆತಂಕದ ಮಾತುಗಳು ತೋಡಿನ ಇಕ್ಕೆಲದ ನಿವಾಸಿಗಳಿಂದ ಕೇಳಿಬರುತ್ತಿದೆ.

Advertisement

ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ
ಕಲ್ಸಂಕ ತೋಡಿನ ಹೂಳೆತ್ತಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಚುನಾವಣೆ ನೀತಿಸಂಹಿತೆ ಇದ್ದುದರಿಂದ ಟೆಂಡರ್‌ ವಿಳಂಬವಾಗಿದೆ. ಜಿಲ್ಲಾಧಿಕಾರಿಯವರ ಒಪ್ಪಿಗೆ ದೊರೆತ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ಅಂದಾಜು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ.
– ಆನಂದ ಕಲ್ಲೋಳಿಕರ್‌, ಆಯುಕ್ತರು, ನಗರಸಭೆ

ಡಿಸಿ ಭೇಟಿಯಾಗಿ ವಾರಗಳಾಯಿತು
ಕಲ್ಸಂಕ ತೋಡಿನ ಹೂಳೆತ್ತಬೇಕೆಂದು ನಾವು ಕಳೆದ ಹಲವು ಸಮಯದಿಂದ ಜಿಲ್ಲಾಧಿಕಾರಿ, ಪೌರಾಯುಕ್ತರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೂರು ವಾರಗಳಾದರೂ ಪ್ರಯೋಜನವಾಗಿಲ್ಲ.
-ಸವಿತಾ ಹರೀಶ್‌ರಾಮ್‌, ನಗರಸಭಾ ಸದಸ್ಯರು

ತಡೆಗೋಡೆ ನಿರ್ಮಾಣ
ಬೈಲಕೆರೆ-ಕಲ್ಸಂಕ ಭಾಗದಲ್ಲಿಯೂ ಹೂಳೆತ್ತದೆ ಇರುವುದರಿಂದ ಸಮಸ್ಯೆಯಾಗಲಿದೆ. ಈ ಬಾರಿ ಇಲ್ಲಿ ಸುಮಾರು 410 ಮೀಟರ್‌ ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಮುಂದೆ ಇದನ್ನು ವಿಸ್ತರಿಸುವ ಚಿಂತನೆ ಇದೆ. ಇದು ನೆರೆಯಿಂದ ಸ್ವಲ್ಪ ಮಟ್ಟಿನ ರಕ್ಷಣೆ ನೀಡುವ ವಿಶ್ವಾಸವಿದೆ. ತೋಡಿನ ಗಿಡಗಂಟಿ ತೆಗೆದು ಹೂಳೆತ್ತಿದರೆ ನೆರೆ ಅಪಾಯವೂ ಇಲ್ಲ. ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಪೂರಕ.
-ಗಿರೀಶ್‌ ಅಂಚನ್‌, ನಗರಸಭಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next