Advertisement

ಮರಗಣತಿಗೆ ನೀತಿ ಸಂಹಿತೆ ಅಡ್ಡಿ

12:22 PM Mar 26, 2019 | Team Udayavani |

ಬೆಂಗಳೂರು: ಶಿಥಿಲಗೊಂಡಿರುವ ಮರಗಳು ಉರುಳಿ ಆಗುವ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ “ಮರಗಣತಿ’ ಕಾರ್ಯಕ್ಕೆ ಲೋಕಸಭಾ ಚುನಾವಣೆ ಅಡ್ಡಿಯಾಗಿದೆ. ಪರಿಣಾಮ ಮಳೆಗಾಲದಲ್ಲಿ ದುರ್ಬಲ ಮರಗಳ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ.

Advertisement

ವಯೋ ಸಹಜವಾಗಿ ಕೆಲವು ಮರಗಳು ಶಿಥಿಲಗೊಂಡರೆ, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ವಿವಿವಧ ಸ್ಥಳೀಯ ಸಂಸ್ಥೆಗಳು ಕೈಗೆತ್ತಿಕೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಬೇರುಗಳಿಗೆ ಪೆಟ್ಟು ಬಿದ್ದು ಮರಗಳು ಬೀಳುತ್ತಿವೆ. ಆ ಹಿನ್ನೆಲೆಯಲ್ಲಿ ಮರಗಣತಿ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಪಾಲಿಕೆ ಯೋಜನೆ ರೂಪಿಸಿತ್ತು.

ಮರಗಣತಿ ನಡೆಸಲು ಯೋಜನೆ ರೂಪಿಸಿ ಮೂರು ವರ್ಷಗಳು ಕಳೆದರೂ, ನಾನಾ ಕಾರಣಗಳಿಂದಾಗಿ ಯೋಜನೆ ಅನುಷ್ಠಾನಗೊಂಡಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯೋಜನೆ ಘೋಷನೆ ಮಾಡಲಾಗಿದೆ. ಆದರೆ, ಬಜೆಟ್‌ಗೆ ಸರ್ಕಾರ ಅನುಮೋದನೆ ನೀಡುವ ವೇಳೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಯೋಜನೆಗೆ ಬರದಂತಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಮರಗಳು ನೆಲಕ್ಕುರುಳಿ ಜನರ ಜೀವಕ್ಕೆ, ಆಸ್ತಿ ಪಾಸ್ತಿಗೆ ನಷ್ಟವುಂಟಾಗುವುದನ್ನು ತಡೆಯಲು ಬಿಬಿಎಂಪಿ ಮರಗಣತಿ ಯೋಜನೆ ರೂಪಿಸಿತ್ತು. ಆ ಮೂಲಕ ನಗರದಲ್ಲಿನ ಮರಗಳ ಸಂಖ್ಯೆ, ಅವುಗಳ ವಯಸ್ಸಿನ ಲೆಕ್ಕದ ಜತೆಗೆ ದುರ್ಬಲ ಮರಗಳ ಪತ್ತೆಗೂ ನಿರ್ಧರಿಸಲಾಗಿತ್ತು. ಈ ಬಾರಿಯ ಮಳೆಗಾಲಕ್ಕೂ ಮುನ್ನ ಮರಗಣತಿ ಕಾರ್ಯ ಮಾಡುವುದಾಗಿಯೂ ಬಿಬಿಎಂಪಿ ತಿಳಿಸಿತ್ತು.ಹೀಗಾಗಿ ಮಳೆಗಾಲದಲ್ಲಿ ಮರಗಳು ಬಿದ್ದು ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

ಬಿಬಿಎಂಪಿ ಬಜೆಟ್‌ನಲ್ಲಿ 2016-17ನೇ ಸಾಲಿನಲ್ಲಿ ಮರ ಗಣತಿ ಸೇರಿ ಇತರೆ ಕೆಲಸಗಳಿಗೆ 4 ಕೋಟಿ ರೂ. ಮತ್ತು 2017-18ನೇ ಸಾಲಿಗೆ 1 ಕೋಟಿ ರೂ. ಮೀಸಲಿರಿಸಿತ್ತು. ಆದರೆ, ಆ ಕಾರ್ಯ ಮಾಡದ ಕಾರಣ ಆ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲಾಗಿತ್ತು. ಇದೀಗ 2019-20ನೇ ಸಾಲಿನ ಬಜೆಟ್‌ನಲ್ಲಿ ಮತ್ತೆ ಹಣ ಮೀಸಲಿರಿಸಿದ್ದರೂ ಅನುಮೋದನೆ ದೊರೆಯದ ಪರಿಣಾಮ ಮರಗಣತಿ ಮಳೆಗಾಲದೊಳಗೆ ನಡೆಯುವುದು ಅನುಮಾನ ಎಂದು ಹೇಳಲಾಗಿದೆ.

Advertisement

ಪ್ರತಿ ರಸ್ತೆಯ ಮರಗಳ ದಾಖಲೆ: ಮರ ಗಣತಿಯಯಲ್ಲಿ ವಾರ್ಡ್‌ನಲ್ಲಿನ ಪ್ರತಿಯೊಂದು ರಸ್ತೆಯ ಎರಡೂ ಬದಿಗಳಲ್ಲಿರುವ ಮರಗಳನ್ನು ಲೆಕ್ಕ ಹಾಕಲಾಗುತ್ತದೆ. ಜತೆಗೆ ಪ್ರತಿಯೊಂದು ಮರಕ್ಕೆ ವಿಶೇಷ ಸಂಖ್ಯೆಯನ್ನು ನೀಡಲಾಗುತ್ತದೆ. ಜತೆಗೆ ಮರದ ವಯಸ್ಸು, ಅವುಗಳ ಸದೃಢತೆ ಹಾಗೂ ಕಾಯಿಲೆಯ ವಿವರವನ್ನು ದಾಖಲಿಸಲಾಗುತ್ತದೆ.

ದುರ್ಬಲ ಮರಗಳ ತೆರವು: ಗಣತಿ ವೇಳೆ ಮರಗಳು ದುರ್ಬಲವಾಗಿರುವುದು ಕಂಡುಬಂದರೆ, ಅವುಗಳನ್ನು ತೆರವು ಮಾಡಲು ಬಿಬಿಎಂಪಿ ಅರಣ್ಯ ಘಟಕ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಸಾರ್ವಜನಿಕರಿಂದ ದೂರುಗಳು ಬರದಿದ್ದರೂ ಮರಗಳನ್ನು ತೆರವುಗೊಳಿಸುತ್ತದೆ.

ನಗರದಲ್ಲಿರುವ ಮರಗಳ ಸದೃಢತೆ ತಿಳಿಯುವ ಉದ್ದೇಶದಿಂದ ಮರಗಣತಿ ನಡೆಸಲು ಯೋಜನೆ ರೂಪಿಸಿದರೂ, ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರೂ ಸರ್ಕಾರದ ಅನುಮೋದನೆ ದೊರೆಯದ ಕಾರಣ ಗಣತಿ ಆರಂಭಿಸಲು ಸಾಧ್ಯವಾಗುತ್ತಿಲ್ಲ.
-ಚೋಳರಾಜಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಬಿಬಿಎಂಪಿ ಅರಣ್ಯ ಘಟಕ)

Advertisement

Udayavani is now on Telegram. Click here to join our channel and stay updated with the latest news.

Next