ಕೋಟ: ಮೆಹಂದಿ ಮನೆ ಯಲ್ಲಿ ಡಿ.ಜೆ. ಶಬ್ದಕ್ಕೆ ಸಂಬಂಧಿಸಿ ದೌರ್ಜನ್ಯ ನಡೆದ ಕೋಟ ಚಿಟ್ಟಿಕಟ್ಟೆಯ ಕೊರಗ ಕಾಲನಿಗೆ ಶನಿವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜತೆ ಭೇಟಿ ನೀಡಿ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸುವುದಾಗಿ ಘೋಷಿಸಿದರು ಹಾಗೂ ಸಂತ್ರಸ್ತ ಆರು ಮಂದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿ, 50 ಸಾವಿರ ರೂ.ಗಳ ಮುಂಗಡ ಚೆಕ್ ಸ್ಥಳದಲ್ಲೇ ಹಸ್ತಾಂತರಿಸಿದರು
ಉಪನಿರೀಕ್ಷಕರ ಅಮಾನತು
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಪನಿರೀಕ್ಷಕರನ್ನು ಅಮಾನತು ಮಾಡಲಾಗಿದೆ. ಉಳಿದವರ ವರ್ಗ ಮಾಡಲಾಗಿದ್ದು ಮುಂದಿನ ಕ್ರಮದ ಬಗ್ಗೆ ಅವಲೋಕನ ಮಾಡಲಾಗುತ್ತದೆ. ಪ್ರಕರಣದ ತನಿಖೆ ಕೂಲಂಕಷವಾಗಿ ನಡೆಯಲಿದೆ. ಘಟನೆ ನಡೆದ 2-3 ದಿನಗಳ ಬಳಿಕ ಪೊಲೀಸ್ ಸಿಬಂದಿ ಕೊರಗರು ಸಹಿತ ಇನ್ನು ಕೆಲವರ ಮೇಲೆ ಕೇಸು ದಾಖಲಿಸಿದ್ದು ಇದೊಂದು ಸುಳ್ಳು ಪ್ರಕರಣ ಎಂದು ಎಲ್ಲರಿಗೂ ತಿಳಿಯುತ್ತದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.
ಪ್ರತೀ ದಿನ ಮಾಹಿತಿ ಪಡೆದಿದ್ದೆ
ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರತೀ ದಿನ ಮಾಹಿತಿ ನೀಡುತ್ತಿದ್ದರು. ಎಸ್‌ಪಿ ಅವರೊಂದಿಗೆ ಮಾತುಕತೆ ನಡೆಸಿದ್ದೆ ಎಂದರು.
ಬಿಜೆಪಿ ಮುಖಂಡರಾದ ಕಿರಣ್ ಕುಮಾರ್ ಕೊಡ್ಗಿ, ಡಿಸಿ ಕೂರ್ಮಾ ರಾವ್ ಎಂ., ಎಸ್‌ಪಿ ವಿಷ್ಣು ವರ್ಧನ್, ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಮೊದಲಾದವರು ಉಪಸ್ಥಿತರಿದ್ದರು.
Related Articles
ಕೋಟ ಠಾಣೆ ಬಗ್ಗೆ ದೂರು
ಕೋಟ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್, ಮಟ್ಕಾ, ಮರಳುಗಾರಿಕೆ ಮುಂತಾದ ದಂಧೆಗಳು ಪೊಲೀಸರ ನೆರಳಲ್ಲೇ ನಡೆಯುತ್ತಿವೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರಿಂದ ದೌರ್ಜನ್ಯ ನಡೆದ ಈ ಹಿಂದಿನ 3 ಘಟನೆ ಗಳಲ್ಲಿ ದೂರು ನೀಡಿದರೂ ದಾಖಲಿಸಿಕೊಂಡಿಲ್ಲ ಎಂದು ಸಾಮಾಜಿಕ ಕಾರ್ಯ ಕರ್ತ ದಿನೇಶ್ ಗಾಣಿಗ ಕೋಟ ಆರೋಪಿಸಿದರು. ಠಾಣೆಯ ಬಹುತೇಕ ಎಲ್ಲ ಸಿಬಂದಿ ಬದಲಾಯಿಸಲು ತಿಳಿಸಿದ್ದೇನೆ ಎಂದು ಗೃಹ ಸಚಿವರು ಹೇಳಿದರು.
ಹತ್ತು ದಿನ ಕಾಲಾವಕಾಶ
ಪೊಲೀಸರು ದಾಖಲಿಸಿರುವ ದೂರನ್ನು ಹಿಂಪಡೆಯುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟು, ನಾವು ಉದ್ದೇಶಿತ ಪ್ರತಿಭಟನೆಯನ್ನು ಹತ್ತು ದಿನ ಮುಂದೂಡಿದ್ದೇವೆ. ಆಬಳಿಕ ಒಂದು ವೇಳೆ ಕೊರಗರ ಮೇಲಿನ ಪ್ರಕರಣಗಳನ್ನು ಹಿಂದೆ ಪಡೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಕೊರಗ ಮುಖಂಡ ವಿ. ಗಣೇಶ್ ಕುಂದಾಪುರ ತಿಳಿಸಿದ್ದಾರೆ.