ಎಕ್ಕೂರು: ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದ “ತೆಂಗಿನ ಮರದ ಸ್ನೇಹಿತರು: ತೆಂಗಿನ ಮರ ಹತ್ತುವ’ ತರಬೇತಿ ದ.ಕ. ಜಿಲ್ಲೆಯ ಹಲವು ನಿರುದ್ಯೋಗಿ ಯುವಕರ ಪಾಲಿಗೆ ವರವಾಗಿದೆ. ಕಳೆದ ಸುಮಾರು ಎಂಟು ವರ್ಷಗಳಲ್ಲಿ ತರಬೇತಿ ಪಡೆದಿರುವ ದ.ಕ. ಜಿಲ್ಲೆಯ ಸುಮಾರು 50 ಮಂದಿ ಯುವಕರು ಇದನ್ನೇ ತಮ್ಮ ಸ್ವಉದ್ಯೋಗವನ್ನಾಗಿಸಿ ದಿನವೊಂದಕ್ಕೆ ಕನಿಷ್ಟ 2,000 ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಹಂತದ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು. ಈ ಸಂದರ್ಭ ಮಾಹಿತಿ ನೀಡಿದ, ದ.ಕ. ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ| ರಶ್ಮಿ “ದ.ಕ. ಜಿಲ್ಲೆಯಲ್ಲಿ ತೆಂಗಿನ ಮರ ಹತ್ತುವ ತರಬೇತಿ ಪಡೆಯಲು ಸಾಕಷ್ಟು ಬೇಡಿಕೆ ಇದೆ. ಕುಂದಾಪುರದಿಂದಲೂ ತರಬೇತಿಗಾಗಿ ಅರ್ಜಿ ಬಂದಿತ್ತು. ಆದರೆ ಇಲ್ಲಿ ದ.ಕ. ಜಿಲ್ಲೆಯ ನಿರುದ್ಯೋಗಿಗಳಿಗೆ ಮಾತ್ರವೇ ತರಬೇತಿಯನ್ನು ಒದಗಿಸಲಾಗುತ್ತಿದೆ’ ಎಂದರು.
200 ಮಂದಿ ತರಬೇತಿ
2015ರಲ್ಲಿ ತೆಂಗು ಅಭಿವೃದ್ಧಿª ಮಂಡಳಿಯಿಂದ ಈ ತರಬೇತಿ ಪ್ರಾಯೋಜಿಸಲ್ಪಟ್ಟಿತ್ತು. ಆ ವರ್ಷ ಐದು ತಂಡಗಳಿಗೆ (ತಲಾ 20ರಂತೆ) ತರಬೇತಿ ನೀಡಲಾಗಿತ್ತು. ಅದಾಗಿ ಐದು ವರ್ಷಗಳ ಅನಂತರ 2020ರಲ್ಲಿ ಮತ್ತೆ ಒಂದು ತಂಡಕ್ಕೆ ತರಬೇತಿ ನೀಡಲಾಯಿತು. 2022ರಲ್ಲಿ ಎರಡು ತಂಡಕ್ಕೆ ತರಬೇತಿ ನೀಡಲಾಗಿತ್ತು. ಇದೀಗ ದ.ಕ. ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ರಾಜ್ಯದ ದ.ಕ. ಜಿಲ್ಲೆಯ ಈ ಕೇಂದ್ರಕ್ಕೆ 4 ಹಂತದ ತರಬೇತಿಗೆ ಅವಕಾಶ ದೊರಕಿದೆ. ಈವರೆಗೆ 200 ಮಂದಿ ತರಬೇತಿ ಪಡೆದಿದ್ದಾರೆ.
ದ.ಕ. ಜಿಲ್ಲೆಯಲ್ಲಿ 31 ಹೆಕ್ಟೇರ್ ಪ್ರದೇಶ ದಲ್ಲಿ ತೆಂಗು ಬೆಳೆಯಲಾಗುತ್ತದೆ. 45 ದಿನಗಳಿಗೊಮ್ಮೆ ತೆಂಗು ಕೀಳಬೇಕಾಗುತ್ತದೆ. ಕೀಳುವವರ ಸಮಸ್ಯೆಯಿಂದ ತೆಂಗು ಉತ್ಪನ್ನದಲ್ಲಿ ಕೊರತೆ ಉಂಟಾಗುತ್ತಿದ್ದು, ಸ್ವ-ಉದ್ಯೋಗ ಕಂಡುಕೊಳ್ಳುವಲ್ಲಿ ಈ ತರಬೇತಿ ಸಹಕಾರಿ ಎಂದು ಡಾ| ರಶ್ಮಿ ತಿಳಿಸಿದ್ದಾರೆ.
Related Articles
ಸ್ವ-ಉದ್ಯೋಗ
“ನಾನು ಪ್ರಥಮ ಬ್ಯಾಚ್‌ನಲ್ಲಿ ತರಬೇತಿ ಪಡೆದು ಇದನ್ನೀಗ ಸ್ವ- ಉದ್ಯೋಗವನ್ನಾಗಿಸಿಕೊಂಡಿದ್ದೇನೆ. ಮಾತ್ರ ವಲ್ಲದೆ ಸಾಕಷ್ಟು ಮಂದಿಗೆ ತರಬೇತಿ ನೀಡಿದ್ದೇನೆ.
ದಿನವೊಂದಕ್ಕೆ ಕನಿಷ್ಟ 2,000 ರೂ.ನಿಂದ 3,000 ರೂ.ವರೆಗೆ ದುಡಿಯುತ್ತೇನೆ’ ಎಂದು ಪ್ರಸ್ತುತ ಮರ ಹತ್ತುವ ಬಗ್ಗೆ ಮುಖ್ಯ ತರಬೇತುದಾರರಾಗಿರುವ ಸುರತ್ಕಲ್ ನಿವಾಸಿ ಅನುಷ್ ತಿಳಿಸಿದರು.
“ನಮ್ಮ ಮನೆಯಲ್ಲೂ ತೆಂಗಿನ ಮರಗಳಿವೆ. ತೆಂಗು ಕೀಳಲು ಜನ ಸಿಗುವುದಿಲ್ಲ. ಹಾಗಾಗಿ ತರಬೇತಿಯಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ತರಬೇತಿಯಲ್ಲಿ ಭಾಗವಹಿಸಿರುವ ಸ್ನಾತಕೋತ್ತರ ಪದವೀಧರೆ ಗಾಯತ್ರಿ ಎಂಬವರು ಅಭಿಪ್ರಾಯಿಸಿದರು. ಕಂಕನಾಡಿ ಸಂಚಾರ ನಿರೀಕ್ಷಕ ರಮೇಶ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್ ಉಪಸ್ಥಿತರಿದ್ದರು.
5 ಲಕ್ಷ ರೂ. ಅಪಘಾತ ವಿಮೆ
ಆರು ದಿನಗಳ ಕಾಲ ನಡೆಯಲಿರುವ ಪ್ರಸಕ್ತ ಸಾಲಿನ ಮೊದಲ ಹಂತದ ತರಬೇತಿಯಲ್ಲಿ ದ.ಕ. ಜಿಲ್ಲೆಯ 20 ಮಂದಿ ನೋಂದಾಯಿಸಿಕೊಂಡಿದ್ದಾರೆ. ತರಬೇತಿಯಲ್ಲಿ ಮೂರು ಮಂದಿ ಮಹಿಳೆಯರೂ ಇದ್ದಾರೆ. ಉಚಿತ ಊಟ ವಸತಿ ಸೌಲಭ್ಯದ ಜತೆಗೆ ತರಬೇತಿಗೆ ಅಗತ್ಯವಾದ ಸಲಕರಣೆಯನ್ನು ನೀಡಲಾಗುತ್ತದೆ. ಅದಲ್ಲದೆ ತರಬೇತು ಪಡೆಯುವವರಿಗೆ ಒಂದು ವರ್ಷದ ತಲಾ 5 ಲಕ್ಷ ರೂ. ಮೌಲ್ಯದ ಅಪಘಾತ ವಿಮೆಯನ್ನುಒದಗಿಸಲಾಗುತ್ತದೆ.