ಅರಸೀಕೆರೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗಿನ ಕಾಯಿ, ಕೊಬ್ಬರಿ ಧಾರಣೆಯಲ್ಲಿ ಸ್ಪಲ್ಪ ಚೇತರಿಕೆ ಕಂಡಿದ್ದು ತೆಂಗು ಬೆಳೆಗಾರರ ಮೊಗದಲ್ಲಿ ಕೊಂಚ ಮಂದಹಾಸ ಮೂಡುವಂತೆ ಮಾಡಿದೆ.
ಇತ್ತೀಚೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಯ ಬೆಲೆ 12.000 ರೂ.ಗಳಿಗೆ ಕುಸಿತ ಉಂಟಾದ ಹಿನ್ನೆಲೆ ತೆಂಗು ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಳೆದ ಎರಡು ವಾರದಲ್ಲಿ 14000ಕ್ಕೆ ಬಂದ ಕಾರಣ ಸ್ಪಲ್ಪ ಧಾರಣೆ ಏರಿಕೆ ಉಂಟಾಗುತ್ತಿರುವ ಕಾರಣ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾದ ಮೂಡಿದಂತಾಗಿದೆ.
ಶಿಥಲೀಕರಣ ಘಟಕಕ್ಕೆ ಬೇಡಿಕೆ: ಕೇಂದ್ರ ಸರ್ಕಾರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿ ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಬ್ಬರಿ ಸಂಗ್ರಹಣೆಗಾಗಿ ಉತ್ತಮ ಸುವ್ಯವ ಸ್ಥೆಯ ಶಿಥಲೀಕರಣ ಘಟಕವನ್ನು ಸ್ಥಾಪಿಸುವ ಮೂಲಕ, ಬೆಲೆ ಏರಿಕೆಯ ಹಾವು ಏಣಿಯಾಟಕ್ಕೆ ಕಡಿವಾಣ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬುದು ರೈತರ ಬಹುದಿನಗಳ ಹೋರಾಟದ ಒತ್ತಾಸೆಯಾಗಿದೆ.
46 ಸಾವಿರ ಹೆಕ್ಟೇರ್ ಜಮೀನಿನಲ್ಲಿ ತೆಂಗು ಬೆಳೆ: ತಾಲೂಕಿನಲ್ಲಿ ಸುಮಾರು 46 ಸಾವಿರ ಹೆಕ್ಟೇರ್ ಜಮೀನಿನಲ್ಲಿ ತೆಂಗು ಬೆಳೆಯಲಾಗಿದ್ದು, ಇದರಲ್ಲಿ ಶೇ.50ರಷ್ಟು ಭಾಗವನ್ನು ಕೊಬ್ಬರಿಗೆ ಮೀಸಲಾಗಿಟ್ಟಿದ್ದಾರೆ. ಉತ್ತರ ಭಾರತದಲ್ಲಿ ಆಗಸ್ಟ್ನಿಂದ ಡಿಸೆಂಬರ್ ತಿಂಗಳವರೆಗೂ ಬಹುಬೇಡಿಕೆ ಇರುವ ಕೊಬ್ಬರಿಗೆ ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿಯಂತಹ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಉತ್ತಮ ಬೆಲೆ ದೊರೆಯುತ್ತದೆ. ತದ ನಂತರದಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಬೆಲೆ ತೀವ್ರ ಕುಸಿತ ಉಂಟಾಗಿ ತೆಂಗು ಬೆಳೆಗಾರರಿಗೆ ನಷ್ಟ ಉಂಟಾಗುವ ಕಾರಣ, ಕೊಬ್ಬರಿ ಸಂಗ್ರಹಣೆಗಾಗಿ ಶಿಥಲೀಕರಣ ಘಟಕ ಸ್ಥಾಪಿಸಬೇಕು ಎಂಬುವುದು ರೈತರ ಒತ್ತಾಸೆಯಾಗಿದೆ.
Related Articles
ತೆಂಗು ಬೆಳೆಗಾರರ ಚೇತರಿಕೆ: ಕಳೆದ ಜನವರಿ-ಫೆಬ್ರವರಿ ತಿಂಗಳಿನಲ್ಲಿ 12 ಸಾವಿರ ರೂ. ಆಸುಪಾಸಿನಲ್ಲಿದ್ದ ಬೆಲೆ ನಂತರ ನಡೆದ ಕೆಲವು ಹರಾಜುಗಳಲ್ಲಿ 13,200 ರೂ.ಗಳಿಗೆ ಸೀಮಿತವಾಗಿತ್ತು. ಜೂನ್ ತಿಂಗಳ ಮೊದಲ ವಾರ ನಡೆದ ಕೆಲವು ಹರಾಜಿನಲ್ಲಿ 13.900 ರೂ. ತಲುಪುವ ಮೂಲಕ ಸ್ಪಲ್ಪ ಪ್ರಾಮಾಣದಲ್ಲಿ ಬೆಲೆಯಲ್ಲಿ ಚೇತರಿಕೆಯ ಹಾದಿಯನ್ನು ರೈತರು ಕಂಡಂತಾಗಿದೆ.
ತಾಲೂಕಿನ ಬಾಣಾವರ, ಕಣಕಟ್ಟೆ, ಕಸಬಾ, ಜಾವಗಲ್ ಹಾಗೂ ಗಂಡಸಿ ಹೋಬಳಿ ವ್ಯಾಪ್ತಿಯಲ್ಲಿನ ತೋಟಗಳಿಂದ ಅಪಾರ ಪ್ರಮಾಣದ ತೆಂಗಿನ ಕಾಯಿ ಲಭ್ಯವಾಗುತಿತ್ತು. ಜೊತೆಗೆ ಕಡೂರು, ತರೀಕೆರೆ, ಭದ್ರಾವತಿ, ಬೇಲೂರು, ಹೊಸದುರ್ಗ, ಕೆ.ಆರ್.ನಗರ ಸೇರಿದಂತೆ ವಿವಿಧೆಡೆಗಳಿಂದ ನಿರೀಕ್ಷೆಗೂ ಮೀರಿದ ಪ್ರಮಾ ಣದಲ್ಲಿ ತೆಂಗಿನ ಕಾಯಿ-ಕೊಬ್ಬರಿ ರಾಶಿ ಅಧಿಕವಾಗಿತ್ತು.
ಇಳುವರಿ ಕುಸಿತಕ್ಕೆ ಕಾರಣ: ಬರಗಾಲ, ಮಳೆಯ ಅಭಾವ, ತೇವಾಂಶ ಕೊರತೆಯಿಂದ ಬಳಲಿದ್ದ ತೆಂಗಿನ ಮರಗಳಿಗೆ ಮಹಾ ಮಾರಿಯಂತೆ ಕಾಡಿದ ನುಸಿರೋಗ, ಬೆಂಕಿರೋಗ ಹಾಗೂ ಕಪ್ಪುತಲೆ ಹುಳು ಬಾಧೆಯಿಂದ ತೆಂಗಿನ ಮರಗಳು ಸುಳಿಬಿದ್ದು ನಾಶವಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ 15 ಲಕ್ಷಕ್ಕೂ ಹೆಚ್ಚು ತೆಂಗು ಬೆಳೆ ಸಂಪೂರ್ಣ ನಾಶವಾಗಿದ್ದು, ಅಳಿದುಳಿದ ಮರಗಳಲ್ಲಿ ಸಹ ಇಳುವರಿ ಕಡಿಮೆಯಾಗಿದ್ದು, ರೈತರಿಗೆ ನಷ್ಟ ಉಂಟುಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಇದರ ನಡುವೆಯೂ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಬೆಲೆಯಲ್ಲಿ ಹಾವು ಏಣಿ ಏರಿಳಿತದ ಆಟ ನಡೆಯುತ್ತಿರುವುದು ನೋಡಿದರೇ ಸಹಜವಾಗಿಯೇ ತೆಂಗು ಬೆಳೆಗಾರರಲ್ಲಿ ನಿರಾಸೆಯ ಭಾವನೆಗಳು ಮೂಡಿಸುವಂತೆ ಮಾಡುತ್ತಿರುವುದು ವಿಪರ್ಯಾಸವಾಗಿದೆ.
ಕಳೆದ ವರ್ಷ ಕೊಬ್ಬರಿ ಬೆಲೆ 17 ಸಾವಿರವಿದ್ದು ಈಗ 13.900 ಎರಿಕೆಯಾಗಿದೆ. ಉತ್ತರ ಭಾರತದಲ್ಲಿನ ಹಬ್ಬ-ಹರಿದಿನಗಳಲ್ಲಿ ರಾಜ್ಯದ ಕೊಬ್ಬರಿಗೆ ಬೇಡಿಕೆ ಹೆಚ್ಚು ಇರುವ ಕಾರಣ ಕೊಬ್ಬರಿ ಬೆಲೆ ಏರಿಕೆ ಕಾರಣವಾಗುತ್ತದೆ. ಉಳಿದಂತೆ ಕೊಬ್ಬರಿ ಬೆಳೆಯಲ್ಲಿ ಏರಿಳಿತಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ.
●ಸಿದ್ಧ ರಂಗಸ್ವಾಮಿ, ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿ ಕಾರ್ಯದರ್ಶಿ
ಸತತ ಐದು ವರ್ಷಗಳ ಕಾಲ ನೀರು ಗೊಬ್ಬರ ಹಾಕಿ ಬೆಳೆದ ತೆಂಗಿನ ಮರವು ನಮಗೆ ಜೀವನ ನಿರ್ವಹಣೆಗೆ ಸಹಕಾ ರಿಯಾಗಿದೆ. ಆದರೆ ಬೆಲೆ ಕುಸಿತ ಸಂದರ್ಭದಲ್ಲಿ ಅನಿವಾರ್ಯತೆಯಿಂದ ಕೊಬ್ಬರಿ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂಬುದು ಕೃಷಿಕರ ಸಂಕಷ್ಟವಾಗಿದೆ.
●ಕನಕೆಂಚೇನಹಳ್ಳಿ ಪ್ರಸನ್ನಕುಮಾರ್
ರೈತ ಮುಖಂಡ
ಉತ್ತರ ಭಾರತದ ರಾಜ್ಯಗಳಲ್ಲಿ ಆಗಸ್ಟ್ ತಿಂಗಳಿಂದ ನವಂಬರ್ ತಿಂಗಳಲ್ಲಿ ಕರ್ನಾಟಕದ ಕೊಬ್ಬರಿಗೆ ಬೇಡಿಕೆ ಹೆಚ್ಚಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮುಂಬರುವ ಹರಾ ಜುಗಳಲ್ಲಿ ತೆಂಗಿನ ಕಾಯಿ ಧಾರಣೆ ಜತೆಗೆ ಕೊಬ್ಬರಿ ಬೆಲೆಯೂ ಏರಿಕೆಯಾಗುವ ಬಹು ನಿರೀಕ್ಷೆಯಿದೆ.
●ರಾಜು, ಕೊಬ್ಬರಿ ವ್ಯಾಪಾರಿ
●ರಾಮಚಂದ್ರ, ಅರಸೀಕೆರೆ