Advertisement

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

04:33 PM Jun 29, 2022 | Team Udayavani |

ಚನ್ನಪಟ್ಟಣ: ಸಂಕಷ್ಟದಲ್ಲಿ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ತೆಂಗು ಬೆಳೆಗಾರರು. ನುಸಿಪೀಡೆ ರೋಗದಿಂದ ಸಾವಿರಾರು ತೆಂಗಿನ ಮರಗಳ ಸುಳಿಗಳು ಒಣಗಿ ಹೋಗುತ್ತಿದೆ. ಬೃಹತ್ತಾಗಿ ತೆಂಗಿನ ಮರಗಳು ಬೆಳೆದರೂ, ಕಾಯಿ ಇಲ್ಲದೆ ನುಸಿರೋಗಕ್ಕೆ ತುತ್ತಾಗಿ ಬಳಲುತ್ತಿವೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ.

Advertisement

ಒಂದು ತೆಂಗಿನ ಸಸಿ ಬೆಳೆಸಿದ್ರೆ 70 ವರ್ಷದ ತರುವಾಯ ಅದು ನಮ್ಮನ್ನು ಸಾಕುತ್ತದೆ ಎಂಬ ನಾನ್ಮುಡಿ ಇದೆ. ಆದರೆ, ಇತ್ತೀಚಿಗೆ ಈ ನಾನ್ಮುಡಿ ಕೇವಲ ನಾನ್ಮುಡಿಯಾಗಿಯೇ ಉಳಿದುಕೊಂಡಿದೆ. ಪ್ರಕೃತಿಯೇ ಮಾನವನ ಮೇಲೆ ಮುನಿಸಿಕೊಂಡಿದ್ದು, ಒಂದೆಡೆ ಸರಿಯಾದ ಸಮಯದಲ್ಲಿ ಮಳೆಯಾಗದೆ ಕುಡಿಯಲು ನೀರಿಲ್ಲದೆ ಬರಗಾಲ ತಾಂಡವವಾಡುತ್ತಿದೆ. ಮತ್ತೂಂದೆಡೆ ತೆಂಗಿಗೆ ನುಸಿರೋಗ ಬಂದು ಇದನ್ನ ನಂಬಿಕೊಂಡು ಬಂದಿದ್ದ ರೈತ ಸಂಕುಲವನ್ನ ನಾಶ ಮಾಡಲು ಹೊರಟಿದೆ. ಇದಕ್ಕೆ ಚನ್ನಪಟ್ಟಣ ಕೂಡ ಹೊರತಾಗಿಲ್ಲ. ಜಿಲ್ಲೆಯ ರೈತರ ಜೀವನಾಡಿ ಬೆಳೆ ಎಂದ್ರೆ ಅದು ತೆಂಗು.

ಶೇ.40ರಷ್ಟು ಕುಟುಂಬ ತೆಂಗು ಬೆಳೆ ಅವಲಂಬನೆ: ಜಿಲ್ಲೆಯ ಶೇ. 35ರಿಂದ 40ರಷ್ಟು ಕುಟುಂಬ ಈ ತೆಂಗು ಬೆಳೆಯನ್ನ ಆಶ್ರಯಿಸಿಕೊಂಡಿದೆ. ಜಿಲ್ಲೆಯಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಮೊದ ಮೊದಲು ತೆಂಗು ಬೆಳೆಯಿಂದ ಅಧಿಕ ಲಾಭ ಪಡೆಯುತ್ತಿದ್ದ ರೈತನಿಗೆ, ಇತ್ತೀಚಿನ ದಿನಗಳಲ್ಲಿ ತೆಂಗಿನ ಬೆಳೆ ಎಂದ್ರೆ ಬೆಚ್ಚಿ ಬೀಳುತ್ತಾನೆ. ಕಾರಣ ತೆಂಗಿಗೆ ಮುಕ್ತವಾಗದ ನುಸಿ ಪೀಡೆ ರೋಗ. ಈ ರೋಗದಿಂದ ತೆಂಗಿನ ಸುಳಿಯೇ ಸಂಪೂರ್ಣವಾಗಿ ಒಣಗಲಾರಂಭಿಸಿದೆ. ಸುಮಾರು 50 ರಿಂದ 60 ಅಡಿ ಎತ್ತರವಾಗಿ ಬೆಳೆದ ತೆಂಗು ಕಾಯಿ ಇಲ್ಲದೆ ಬೆಳೆಯೆಲ್ಲಾ ಸಂಪೂರ್ಣವಾಗಿ ಒಣಗಿ ಯಾವುದೇ ಉಪಯೋಗಕ್ಕೆ ಬಾರದೆ ನಿಂತಿದೆ.

ತಾಲೂಕಿನ ಹೊಂಗನೂರು, ಬಿ..ಹಳ್ಳಿ, ಸಿಂಗರಾಜೀಪುರ, ಹನುಮಂತಪುರ, ಹನಿಯೂರು, ಕೂಡ್ಲುರು ಸೇರಿದಂತೆ ಹಲವು ಗ್ರಾಮದಲ್ಲಿ ತೆಂಗಿನ ಬೆಳೆಗೆ ನುಸಿರೋಗ ಬಂದಿದೆ. ಸಾವಿರಾರು ತೆಂಗಿನ ಮರಗಳಿಗೆ ನೀರಿಲ್ಲದೆ ಸುಳಿಯೇ ಒಣಗಲಾರಂಭಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸುವಂತೆ ತೆಂಗ ಬೆಳೆಗಾರರು ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರ ಅಗತ್ಯ: ಒಟ್ಟಾರೆ ನುಸಿ ರೋಗ ದಿಂದಾಗಿ ತೆಂಗು ಗಿಡವೇ ಸಂಪೂರ್ಣವಾಗಿ ಹಾನಿಗೊಳ ಗಾಗಿದೆ. ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಗೊತ್ತಿಲ್ಲ. ತೆಂಗಿನ ಬೆಳೆ ರೈತರ ಸಂಕಷ್ಟವನ್ನ ಕೇಳುವವರೇ ಇಲ್ಲ ದಾಗಿದೆ. ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನುಸಿ ರೋಗಕ್ಕೆ ಶಾಶ್ವತ ಪರಿಹಾರ ಹುಡುಕಿ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.

Advertisement

ನುಸಿರೋಗ ಬಂದರೆ ತೆಂಗು ಸಂಪೂರ್ಣ ನಾಶ : ತೆಂಗಿಗೆ ನುಸಿರೋಗ ಅಂಟಿಕೊಂಡ್ರೆ ಸಾಕು ತೆಂಗಿನ ಮರವನ್ನೆ ಸಂಪೂರ್ಣ ಹಾನಿಗೊಳಿಸಲಿದೆ. ಕೆಲವು ತೆಂಗಿನ ಮರಗಳು ನುಸಿರೋಗದಿಂದ ತೆಂಗಿನ ಗರಿಯೆಲ್ಲಾ ಒಣಗಿ ಬೀಳುತ್ತಿದ್ದು, ಮರದಲ್ಲಿ ಕಾಯಿ ಸಂಖ್ಯೆ ಕೂಡ ಕಡಿಮೆಯಾಗಿದೆ. ಎಷ್ಟೋ ಹಳ್ಳಿಗಳಲ್ಲಿ ಕಾಯಿ ಬಾರದ ಹಿನ್ನೆಲೆ ತೆಂಗಿನ ಮರಗಳನ್ನು ಕಡಿದು ಕಟ್ಟಿಗೆಗೆ ಬಳಸಿಕೊಂಡಿದ್ದಾರೆ. ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಎಷ್ಟೋ ಕುಟುಂಬಗಳು ಇಂದೂ ಬೀದಿಗೆ ಬಂದಿದ್ದು, ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.

ತೆಂಗು ಬೆಳೆಯನ್ನೆ ಆಶ್ರಯಿಸಿಕೊಂಡಿದ್ದೇವೆ. ಮಕ್ಕಳ ರೀತಿಯಲ್ಲಿ ನಾವು ಮರಗಳನ್ನ ನೋಡಿಕೊಂಡಿದ್ದೇವೆ. ಆದರೆ, ಈ ನುಸಿ ರೋಗದಿಂದ ತೆಂಗಿನ ಗಿಡದ ಗರಿಯೇ ಒಣ ಹೋಗುತ್ತಿದ್ದು, ನಂತರ ಕೆಳಭಾಗದ ಗರಿಗಳು ಒಣಗಿ ಸುಳಿಯವರೆಗೂ ಈ ರೋಗ ಹರಡಿ ಕೊಂಡರೆ ಮರ ಸಂಪೂರ್ಣ ಹಾನಿಯಾಗುತ್ತದೆ. ನಂತರ ಈ ತೆಂಗಿನ ಗಿಡಗಳು ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ನುಸಿರೋಗ ಹೊಸ ರೋಗವಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಬೇಕಿದೆ. ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡ

ನುಸಿರೋಗ ನಿವಾರಣೆಗೆ ತಾಲೂಕಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನುಸಿರೋಗಕ್ಕೆ ಪರಾವಲಂಬಿ ಜೀಗಳನ್ನ ಬಿಟ್ಟು ರೋಗವನ್ನ ಕಂಟ್ರೋಲ್‌ ಮಾಡುವ ವಿಧಾನವನ್ನ ಅನುಸರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಹಳ ಹಿಂದೆ ಕೂಡ್ಲೂರು, ಮಳೂರು ಸೇರಿದಂತೆ ಹಲವು ಕಡೆಗಳಲ್ಲಿ ನುಸಿರೋಗ ಕಾಣಿಸಿಕೊಂಡಿತ್ತು. ಅಂದು ಆ ಭಾಗದಲ್ಲಿ ನಿಯಂತ್ರಣ ಮಾಡಲಾಗಿತ್ತು. ಈಗ ಮತ್ತೂಮ್ಮೆ ಅಲ್ಲಲ್ಲಿ ನುಸಿರೋಗ ಕಾಣಿಕೊಂಡಿದೆ. ರೈತರು ನಮ್ಮ ಕಚೇರಿಗೆ ಬಂದ್ರೆ ನಿಯಂತ್ರಣ ಹೇಗೆ ಮಾಡುವುದು ಎಂಬುದರ ಬಗ್ಗೆ ಜಾಗೃತಿ ಮಾಡಲಾಗುತ್ತದೆ. ವಿವೇಕ್‌, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ

 

ಎಂ ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next