Advertisement

ಚಿತ್ರ ವಿಮರ್ಶೆ: ‘ಕಾಕ್ಟೆಲ್’ ಎಂಬ ಸಮ್ಮಿಶ್ರಣಗಳ ಚಿತ್ರಣ

02:47 PM Jan 07, 2023 | Team Udayavani |

ಆತ ಸಿನಿಮಾದಲ್ಲಿ ಹೀರೋ ಆಗಿ ಮಿಂಚಬೇಕು ಎಂಬ ಕನಸನ್ನು ಇಟ್ಟುಕೊಂಡಿರುವ ಹುಡುಗ. ಹೀರೋ ಆಗಲು ಬೇಕಾದ ಎಲ್ಲ ಪ್ರತಿಭೆ ಮತ್ತು ಅರ್ಹತೆಗಳಿದ್ದರೂ, ಅವಕಾಶಗಳು ಮಾತ್ರ ಈ ಹುಡುಗನ ಕೈಗೆಟಕುತ್ತಿಲ್ಲ. ಇಂಥ ಹುಡುಗನಿಗೆ ಪ್ಯಾನ್‌ ಇಂಡಿಯಾ ನಿರ್ದೇಶಕನಾಗಬೇಕು ಎಂಬ ಕನಸು ಕಾಣುವ ಸ್ನೇಹಿತನೊಬ್ಬನ ಸಾಥ್‌.

Advertisement

ಇಬ್ಬರು ಸೇರಿ ನಿರ್ಮಾಪಕರೊಬ್ಬರನ್ನು ಹಿಡಿದು ಸಿನಿಮಾ ಮಾಡುವ ಸಾಹಸಕ್ಕೆ ಮುಂದಾಗುತ್ತಾರೆ. ಇನ್ನೇನು ಸ್ಕ್ರಿಪ್ಟ್ ಕೆಲಸಗಳು ಶುರುವಾಗಿ, ಸಿನಿಮಾ ಆಗಬೇಕು ಎನ್ನುವಷ್ಟರಲ್ಲಿ ನಿಗೂಢವಾಗಿ ನಡೆಯುವ ಒಂದಷ್ಟು ಕೊಲೆಗಳು ಸಿನಿಮಾದ ಹೀರೋ ಮತ್ತು ನಿರ್ದೇಶಕನನ್ನು ಸುತ್ತಿಕೊಳ್ಳುತ್ತವೆ. ಸಿನಿಮಾದೊಳಗೆ ಒಂದು ಸಿನಿಮಾ ಅದರ ನಡುವೆ ಒಂದು ಮರ್ಡರ್‌ ಮಿಸ್ಟರಿ ತೆರೆದುಕೊಳ್ಳುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಕಾಕ್ಟೆಲ್‌’ ಸಿನಿಮಾದ ಕಥೆಯ ಎಳೆ. ಅದು ಹೇಗಿದೆ ಎಂಬುದು ಅನುಭವಕ್ಕೆ ಬರಬೇಕಾದರೆ, “ಕಾಕ್ಟೆಲ್‌’ ಅನ್ನು ತೆರೆಮೇಲೆ ನೋಡಬೇಕು.

ಸಿನಿಮಾದ ಟೈಟಲ್ಲೇ ಹೇಳುವಂತೆ, “ಕಾಕ್ಟೆಲ್‌’ ಲವ್‌, ಕ್ರೈಂ, ಸಸ್ಪೆನ್ಸ್‌, ಥ್ರಿಲ್ಲರ್‌ ಎಲ್ಲದರ ಮಿಶ್ರಣದಂತಿರುವ ಸಿನಿಮಾ. ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂತ ಒಂದು ಎಳೆಯನ್ನು ಇಟ್ಟುಕೊಂಡು ಅದನ್ನು ತೆರೆಮೇಲೆ ತರಲಾಗಿದೆ. ನವನಟ ವೀರೇನ್‌ ಕೇಶವ್‌ ಮೊದಲ ಸಿನಿಮಾದಲ್ಲೇ ಗಮನ ಸೆಳೆಯುವ ಪಾತ್ರ ನಿಭಾಯಿಸಿದ್ದಾರೆ.

ಡ್ಯಾನ್ಸ್‌, ಆ್ಯಕ್ಷನ್‌, ಡೈಲಾಗ್ಸ್‌ ಡೆಲಿವರಿ ಹೀಗೆ ಎಲ್ಲದರಲ್ಲೂ ವೀರೇನ್‌ ಕೇಶವ್‌ ಪಾತ್ರಕ್ಕೆ ಹಾಕಿರುವ ‌ಪರಿಶ್ರಮ ಕಾಣುತ್ತದೆ. ನಾಯಕಿ ಚರಿಷ್ಮಾ ಕೂಡ ಅಂದಕ್ಕೊಪ್ಪುವ ಅಭಿನಯ=ನೀಡಿದ್ದಾರೆ. ಉಳಿದಂತೆ ಶೋಭರಾಜ್‌, ಶಿವಮಣಿ, ರಮೇಶ್‌ ಪಂಡಿತ್‌, ಚಂದ್ರಕಲಾ ಮೋಹನ್‌, ಕರಿಸುಬ್ಬು ಮತ್ತಿತರರದ್ದು ಅಚ್ಚುಕಟ್ಟು ಅಭಿನಯ. ಸಿನಿಮಾದ ಎರಡು ಹಾಡುಗಳು ಥಿಯೇಟರ್‌ ಹೊರಗೂ ಗುನುಗುವಂತಿದೆ. ಛಾಯಾಗ್ರಹಣ ಸಿನಿಮಾದ ದೃಶ್ಯಗಳನ್ನು ಅಂದವನ್ನು ಹೆಚ್ಚಿಸಿದ್ದು, ಸಂಕಲನ ಕಾರ್ಯ, ಕಲರಿಂಗ್‌ ಮತ್ತು ಹಿನ್ನೆಲೆ ಸಂಗೀತದ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ನೀಡಬಹುದಿತ್ತು.

ಜಿಎಸ್ ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next