ಸಿರುಗುಪ್ಪ: ಕಾರಬೂಂದಿ, ಲಾಡು, ಜಿಲೇಬಿ, ಮೈಸೂರ್‌ಪಾಕ್, ಜಹಾಂಗೀರ್, ಪಲಾವ್, ಚಿತ್ರನ್ನಾ, ಮೊಸರನ್ನ, ಅನ್ನ, ಸಾಂಬಾರ್, ಸಾರು, ಮಜ್ಜಿಗೆ ತಯಾರಿಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ತಾಲೂಕಿನ 200ಕ್ಕೂ ಹೆಚ್ಚು ಬಾಣಸಿಗರು ಯಾವುದೇ ಅಡುಗೆ ಮಾಡುವ ಕೆಲಸವಿಲ್ಲದೆ, ಆದಾಯವಿಲ್ಲದೆ ಅವರ ಬದುಕು ಬೀದಿಗೆ ಬಂದಿದೆ.
ಕಳೆದ ಒಂದು ವರ್ಷದಿಂದ ಕೊರೊನಾ ಮಹಾಮಾರಿಯ ಕಾಟದಿಂದಾಗಿ ಅದ್ಧೂರಿ ಮದುವೆ ಸಮಾರಂಭಗಳು ನಡೆಯುತ್ತಿಲ್ಲ. ಅದ್ಧೂರಿ ವಿವಾಹ ಭೋಜನದ ಖಾದ್ಯಗಳನ್ನು ಸಾವಿರಾರು ಆಮಂತ್ರಿತರಿಗೆ ಸಿದ್ಧಪಡಿಸಿ ಕೂಲಿ ಹಣ ಪಡೆಯುತ್ತಿದ್ದ ಬಾಣಸಿಗರಿಗೆ ಈಗ ಕೆಲಸವಿಲ್ಲ, ಕೂಲಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮದುವೆ ಸೇರಿದಂತೆ ಇತರೆ ಎಲ್ಲ ಶುಭಸಮಾರಂಭಗಳನ್ನು ಸರ್ಕಾರ ನಿಷೇಧ ಮಾಡಿರುವುದರಿಂದ ಯಾವುದೇ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಅವರು ತಮ್ಮ ಕುಟುಂಬದ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ.
ರೈತರು, ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ವಹಿವಾಟಿನ ಮೇಲೆ ತೀವ್ರವಾದ ಪ್ರಹಾರ ಮಾಡಿರುವ ಕೊರೊನಾ ಈಗ ಬಾಣಸಿಗರ ಬದುಕಿನ ಮೇಲೆ ಸಂಕಷ್ಟದ ಛಾಯೆ ಆವರಿಸುವಂತೆ ಮಾಡಿದೆ. ತಾಲೂಕಿನಲ್ಲಿ ಮದುವೆ ಸೇರಿದಂತೆ ಇತರೆ ಶುಭಸಮಾರಂಭಗಳಲ್ಲಿ ಸಾವಿರಾರು ಮಂದಿಗೆ ಅಡುಗೆ ಮಾಡಲು 200ಕ್ಕೂ ಹೆಚ್ಚು ಜನ ಬಾಣಸಿಗರಿದ್ದು, ಕೋವಿಡ್ 19 2ನೇ ಅಲೆಯು ತೀವ್ರವಾಗಿ ಹೆಚ್ಚಾಗುತ್ತಿದ್ದು, ಹಳ್ಳಿಗಳಿಗೂ ವ್ಯಾಪಿಸುತ್ತಿದೆ, ಶುಭಸಮಾರಂಭಗಳ ಮೇಲೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಲಾಕ್‌ಡೌನ್ ಘೋಷಣೆಯಾದ ಮೇಲೆ ಇಂತಹ ಸಮಾರಂಭಗಳ ಮೇಲೆ ಸರ್ಕಾರ ಹದ್ದಿನಕಣ್ಣಿಟ್ಟಿದೆ.
ನಿಗದಿತ ಮದುವೆಗೂ ಅವಕಾಶ ಇಲ್ಲದಂತಾಗಿದ್ದು, ರುಚಿಕಟ್ಟಾಗಿ ಅಡುಗೆ ತಯಾರಿಸಿ ಉಣಬಡಿಸಲು ನೆರವಾಗುತ್ತಿದ್ದ ಬಾಣಸಿಗರ ಮೇಲೆ ಈ ನಿಯಮ ಬರೆ ಎಳೆದಂತಾಗಿದೆ. ಕೇವಲ 3 ತಿಂಗಳ ಅವ ಧಿಯಲ್ಲಿಯೇ ನಡೆಯುವ ಮದುವೆಯ ಸುಗ್ಗಿ ಕಾಲದಲ್ಲಿ ಹತ್ತಾರು ಮದುವೆಯಲ್ಲಿ ಅಡುಗೆ ಮಾಡಿ ವರ್ಷಕ್ಕೆ ಆಗುವಷ್ಟು ಕುಟುಂಬದ ಎಲ್ಲ ಖರ್ಚುವೆಚ್ಚದ ಗಳಿಕೆ ಮಾಡುತ್ತಿದ್ದ ನಮಗೆ ದುಡಿಮೆ ಇಲ್ಲದಂತಾಗಿದೆ. ಮದುವೆಗೆ ಈಗಂತು ಅನುಮತಿ ಇಲ್ಲದಿರುವುದರಿಂದ ಯಾರು ಕರೆಯುತ್ತಿಲ್ಲ. ಇದರಿಂದಾಗಿ ಅಡುಗೆ ಸಿದ್ಧಪಡಿಸಲು ಸಾಧ್ಯವಿಲ್ಲ. ಹೀಗಾಗಿ ನಮಗೆ ಕೂಲಿ ದೊರೆಯುತ್ತಿಲ್ಲವೆಂಬ ಅಳಲು ಬಾಣಸಿಗರದ್ದಾಗಿದೆ.
ಅಸಂಘಟಿತ ವಲಯವಾಗಿರುವ ಬಾಣಸಿಗರಿಗೂ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು, ನಮ್ಮದೇನು ದೊಡ್ಡ ಸಂಖ್ಯೆಯಲ್ಲ, ಸಂಕಷ್ಟದ ಪರಿಸ್ಥಿತಿಯಲ್ಲಾದರೂ ಸರ್ಕಾರ ನಮ್ಮ ಬಾಣಸಿಗರಿಗೆ ಪ್ಯಾಕೇಜ್ ಘೋಷಣೆ ಮಾಡುವುದರ ಮೂಲಕ ನೆರವಿನ ಹಸ್ತ ಚಾಚಬೇಕು.
ನಂದವಾರ ಮಲ್ಲಿಕಾರ್ಜುನ, ಬಾಣಸಿಗ.
-ಆರ್. ಬಸವರೆಡ್ಡಿ ಕರೂರು