Advertisement

ಕರಾವಳಿ ಕಣ ಚಿತ್ರಣ-BSY ಹೇಳಿಕೆ ಕಂಪನ ಯಾರ ಟೀ ಕಪ್‌ನಲ್ಲಿ ಬದಲಾವಣೆ ಬಿರುಗಾಳಿ ?

05:22 PM Mar 09, 2023 | Team Udayavani |

ನಮಗೆ ಬದಲಾಯಿಸಲು ಕಾರಣ ಏನುಂಟು? ಎಂದು ಎಲ್ಲ ಹಾಲಿ ಶಾಸಕರೂ ತಮ್ಮ ಬೆಂಬಲಿಗರಲ್ಲಿ ಕೇಳಿಕೊಂಡು ಖಚಿತಪಡಿಸಿಕೊಳ್ಳುತ್ತಿರುವ ಹೊತ್ತಿದು. ಬಿಎಸ್‌ವೈ ಯ ಒಂದು ಹೇಳಿಕೆಯ ಬಿರುಗಾಳಿ ಎಲ್ಲರನ್ನೂ ತಮ್ಮನ್ನು ತಾವು ಕ್ರಾಸ್‌ ಚೆಕ್‌ ಮಾಡಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಬದಲಾವಣೆಯ ಬಿರುಗಾಳಿ ಯಾರ ಅಂಗಳದ ಟೀ ಕಪ್ಪಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆಯೋ ಗೊತ್ತಿಲ್ಲ.

Advertisement

ಉಡುಪಿ: ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಇಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂರ್‍ನಾಲ್ಕು ತಿಂಗಳ ಹಿಂದೆಯೇ ಆರಂಭಗೊಂಡಿದೆ. ಈ ಚರ್ಚೆ ಹುಟ್ಟುಹಾಕಿದವರಲ್ಲಿ ಆಡಳಿತ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ದಂಡಿನ ಪಾತ್ರವೂ ಇದೆ. ಮಾಜಿ ಮುಖ್ಯಮಂತ್ರಿಯೂ ಆದ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಕಲಬುರಗಿಯಲ್ಲಿ ನೀಡಿದ ಹೇಳಿಕೆ, ಅದಕ್ಕೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೀಡಿರುವ ಸಮರ್ಥನೆ ಹಾಗೂ ಬುಧವಾರ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಹೇಳಿರುವ ಹೇಳಿಕೆ ಹಾಲಿ ಶಾಸಕರ ಬದಲಾವಣೆಯ ಚರ್ಚೆಗೆ ಇನ್ನಷ್ಟು ಇಂಬು ತುಂಬಿದೆ.

ಮೂರನೇ ಸಮೀಕ್ಷೆ ನಡೆಯುತ್ತಿದೆ. ಅದರ ವರದಿ ಆಧರಿಸಿ ಟಿಕೆಟ್‌ ನೀಡುವ ಸಾಧ್ಯತೆ ಇದೆ. ನಮಗೇನಿದ್ದರೂ ಗೆಲ್ಲುವ ಕುದುರೆಗಳೇ ಬೇಕು ಎಂಬ ಡಿ.ವಿ ಹೇಳಿಕೆ ಮತ್ತೂಮ್ಮೆ ಎಲ್ಲರಿಗೂ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿನ ಸಾಧ್ಯತೆಯನ್ನು ಪರಿಶೀಲಿಸುವಂತೆ ಮಾಡಿದೆ. ಹಾಗಾಗಿ ಜಿಲ್ಲೆಯ ಐದು ಕ್ಷೇತ್ರಗಳ ಹಾಲಿ ಶಾಸಕರು ಹಾಗೂ ಅವರ ಬೆಂಬಲಿಗರಲ್ಲಿ ಸಣ್ಣದೊಂದು ಕಂಪನ ಸೃಷ್ಟಿಸಿದೆ.

ಕುಂದಾಪುರ ಕ್ಷೇತ್ರದಲ್ಲಿ 1999 ರಿಂದಲೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದಾರೆ. ಹಾಗೆ ಒಮ್ಮೆಲೆ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಿದ ಇತಿಹಾಸವಿಲ್ಲ. 2013 ರಲ್ಲಿ ಪಕ್ಷ ಬಿಡುತ್ತಾರೆಂಬ ಗುಮಾನಿಯಿಂದ ಶ್ರೀನಿವಾಸ ಶೆಟ್ಟರ ಬದಲಿ ಬೇರೆ ಅಭ್ಯರ್ಥಿ ನಿಲ್ಲಿಸಲಾಗಿತ್ತು. ಆಗ ಶೆಟ್ಟರೇ ಪಕ್ಷೇತರರಾಗಿ ನಿಂತು ಗೆದ್ದು, ಮತ್ತೆ ಬಿಜೆಪಿಗೆ ಸೇರಿದರು. ಈ ಹಿನ್ನೆಲೆಯಲ್ಲಿ ಶೆಟ್ಟರು ಈಗಲೂ ನಿಂತು ಗೆಲ್ಲುವೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.

ಕಾರ್ಕಳದಲ್ಲಿ ಬಿಜೆಪಿಯ ಗೆಲುವಿನ ಚರಿತ್ರೆ ಆರಂಭವಾಗಿದ್ದೇ 2004 ರಲ್ಲಿ. ಆ ಬಳಿಕ ಒಮ್ಮೆ ಸೋಲನುಭವಿಸಿತು. ಆದರೆ 2013 ರಿಂದ ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಶಾಸಕರಾಗಿದ್ದಾರೆ. ಯುವ ಮುಖಂಡ, ಸಚಿವರಾಗಿಯೂ ಇರುವವರು. ಇನ್ನೂ ಎರಡೇ ಅವಧಿ. ಇನ್ನೂ ಅವಕಾಶವಿರಲಿ ಎಂಬ ಅಭಿಪ್ರಾಯ ಇರಬಹುದು. ಇಲ್ಲಿ ಇದುವರೆಗೆ ಬಿಜೆಪಿಯ ಗೆಲುವು ಆರಂಭವಾದ ಮೇಲೆ ಅಭ್ಯರ್ಥಿಗಳನ್ನು ಬದಲಿಸಿದ ಉದಾಹರಣೆಯಿಲ್ಲ.ಬೈಂದೂರು ಕ್ಷೇತ್ರದಲ್ಲಿ ಕೊಂಚ ವ್ಯತ್ಯಾಸವಿದೆ.

Advertisement

1994ರಲ್ಲಿ ಬಿಜೆಪಿಯಿಂದ ಜಯ ಸಾಧಿಸಿದ ಐ.ಎಂ. ಜಯರಾಮ್‌ ಶೆಟ್ಟಿಯವರು ಮುಂದೆ ಬೇರೆ ಪಕ್ಷ ಸೇರಿದರು. ಬಳಿಕ 1999 ರಿಂದ 2008 ರವರೆಗೂ ಕೆ.ಲಕ್ಷ್ಮೀನಾರಾಯಣ ಅವರಿಗೆ ಪಕ್ಷ ಟಿಕೆಟ್‌ ಪಡೆದರೂ ಗೆದ್ದದ್ದು 2008 ರಲ್ಲಿ ಮಾತ್ರ. 2013ರ ಚುನಾವಣೆಯಲ್ಲಿ ಹೊಸಬರ ಪ್ರಯೋಗಕ್ಕೆ ಇಳಿದ ಬಿಜೆಪಿ ಬಿ.ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್‌ ನೀಡಿತು. ಆದರೆ ಜಯ ಕಾಂಗ್ರೆಸ್‌ ಪಾಲಾಯಿತು. 2018 ರಲ್ಲಿ ಮತ್ತೂಮ್ಮೆ ಪ್ರಯತ್ನಿಸುವ ಎಂದುಕೊಂಡು
ಸುಕುಮಾರ ಶೆಟ್ಟಿಯವರಿಗೆ ಅವಕಾಶ ನೀಡಿದರು. ಶೆಟ್ಟರು ಆಯ್ಕೆಯಾದರು. ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಜಯದ ರುಚಿಯನ್ನು ನಿರಂತರವಾಗಿ ನೋಡಲು ಪಕ್ಷ ಬಿಟ್ಟಿಲ್ಲ. ಒಂದು ಜಯದ ಬಳಿಕ ಬದಲಾಯಿಸಿದ ಇತಿಹಾಸವಿದೆ. ಈ ಬಾರಿ ಹಿಂದಿನ ಬದಲಾವಣೆಯ ಸೂತ್ರ ಇಲ್ಲಿಗೆ ಅನ್ವಯವಾಗುವುದೇ ಕಾದು ನೋಡಬೇಕಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಮುನ್ನಡೆಸಿದವರು ಡಾ. ವಿ.ಎಸ್‌. ಆಚಾರ್ಯ. 1983ರಲ್ಲಿ ಗೆದ್ದು ಶಾಸಕರೂ ಆದರು. ಆ ಬಳಿಕ 1985 ರಲ್ಲಿ ಸ್ಪರ್ಧಿಸಿದರಾದರೂ ಪರಾಜಯಗೊಂಡರು. ಆಗ ಬಿಜೆಪಿ 1989 ರ ಚುನಾವಣೆಗೆ ಅಭ್ಯರ್ಥಿಯನ್ನು ಬದಲಿಸಿ ಎಂ. ಸೋಮಶೇಖರ ಭಟ್‌ ಅವರಿಗೆ ನೀಡಿತು. ಆದರೂ ಯಶಸ್ವಿಯಾಗಲಿಲ್ಲ. 1994 ರಲ್ಲಿ ಮತ್ತೆ ಡಾ| ವಿ.ಎಸ್‌. ಆಚಾರ್ಯ ಹಾಗೂ 1999 ರಲ್ಲಿ ಹೊಸ ಅಭ್ಯರ್ಥಿ ಬಿ. ಸುಧಾಕರ ಶೆಟ್ಟಿ ಅವರಿಗೆ ಅವಕಾಶ ನೀಡಿ ದರೂ ಗೆಲುವು ಸಾಧ್ಯವಾಗಲಿಲ್ಲ. 2004 ರಲ್ಲಿ ಹೊಸಬರ ಪ್ರಯೋಗ ಮುಂದುವರಿಸಿದ ಪರಿಣಾಮ ಕೆ. ರಘುಪತಿ ಭಟ್‌ರನ್ನು ಪರಿಚಯಿಸಿ ಯಶಸ್ವಿಯಾಯಿತು. 2008 ರಲ್ಲೂ ಹಿಂದೆ ನೋಡಲಿಲ್ಲ. 2018 ರಲ್ಲಿ ಭಟ್‌ ಮತ್ತೆ ಅಭ್ಯರ್ಥಿಯಾಗಿ ಗೆದ್ದರು.

ಈ ಸೂತ್ರ ಗಮನಿಸಿದರೆ ಸೋಲಿನ ಸರಪಳಿ ಕಡಿದು ಹೊಸ ನಾಯಕತ್ವವನ್ನು ರೂಪಿಸಲು ಅಭ್ಯರ್ಥಿಗಳನ್ನು ಬದಲಿಸಿದೆ. ಅದೇ ಸೂತ್ರ ಈ ಬಾರಿ ಅನ್ವಯವಾದರೂ ಆದೀತೆಂಬ ಅಭಿಪ್ರಾಯ ಇದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ 2004 ಮತ್ತು 2008ರಲ್ಲಿ ಶಾಸಕರಾಗಿದ್ದ ಲಾಲಾಜಿ ಆರ್‌. ಮೆಂಡನ್‌ ಗೆದ್ದು ಬಿಜೆಪಿಗೆ ಕ್ಷೇತ್ರವನ್ನು ತಂದುಕೊಟ್ಟರು. 2013ರಲ್ಲಿ ಸೋತರು. ಆದರೆ 2018ರಲ್ಲಿ ಪಕ್ಷವು ಹೊಸ ಅಭ್ಯರ್ಥಿಗಳ ಹುಡುಕಾಟಕ್ಕಾಗಲೀ, ಪ್ರಯೋಗಕ್ಕಾಗಲೀ ಹೋಗದೇ ಲಾಲಾಜಿ ಮೆಂಡನ್‌ ಅವರಿಗೇ ಅವಕಾಶ ನೀಡಿ ಗೆಲ್ಲಿಸಿಕೊಂಡು ತನ್ನ ತೆಕ್ಕೆಗೆ ಕ್ಷೇತ್ರವನ್ನು ತೆಗೆದುಕೊಂಡಿತು. ಲಾಲಾಜಿ ಅವರಿಗೆ 1999 ಅದೃಷ್ಟ ಪರೀಕ್ಷೆಗೆ ಅವಕಾಶ ನೀಡಿತ್ತು. ಈ ಬಾರಿ ಇವರನ್ನು ಬದಲಿಸುವುದಾದರೆ ಯಾವ ಸೂತ್ರ ಅನ್ವಯಿಸುತ್ತದೆ ಎಂಬ ಮಾತು ಕೇಳಿಬರುತ್ತಿದೆ.

ಬದಲಾಯಿಸಲು ಇರಲಿ ಕಾರಣ
ಐದೂ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ತಮ್ಮದೇ ದೃಷ್ಟಿಯಲ್ಲಿ ಮತ್ತೆ ಸ್ಪರ್ಧೆಗೆ ಹಲವಾರು ಸಕಾರಣಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ತಮ್ಮ ಗಾಡ್‌ ಫಾದರ್‌ಗಳಿಗೂ ಅದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಎರಡು ದಿನಗಳಿಂದ ವಿವಿಧ ನೆವಗಳಲ್ಲಿ ಕೆಲವು ಶಾಸಕರಿಗೆ ಟಿಕೆಟ್‌ ಇಲ್ಲ ಎಂಬ ಹಿರಿಯರ ಹೇಳಿಕೆ ಕೊಂಚ ಕಸಿವಿಸಿ ಉಂಟು ಮಾಡಿರುವುದಂತೂ ನಿಜ. ಆದರೂ ಬದಲಾಯಿಸಲು ಕಾರಣವಿರಲಿ ಎಂದುಕೊಳ್ಳುತ್ತಿದ್ದಾರೆ ಆಕಾಂಕ್ಷಿಗಳು.

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next