ಮಂಗಳೂರು: ಕರಾವಳಿಗೆ ಪ್ರತ್ಯೇಕ ಗಣಿ ನೀತಿಯ ಕರಡು ಈಗಾಗಲೇ ಸಿದ್ಧಗೊಂಡಿದ್ದು, ಇಲ್ಲಿನ ಜನಪ್ರತಿನಿಧಿಗಳು ಮತ್ತು ಪ್ರಮುಖರ ಜತೆಗೆ ಚರ್ಚಿಸಿ ತಿಂಗಳೊಳಗೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ, ಭೂವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಗಣಿ ನೀತಿಯ ಪ್ರಕಾರ ರಾಜ್ಯದಲ್ಲಿ ಉಚಿತ ಮರಳು ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 10 ಲಕ್ಷ ರೂ. ಒಳಗಿನ ವೆಚ್ಚದಲ್ಲಿ ಮನೆ ನಿರ್ಮಿಸುವವರಿಗೆ ಟನ್‌ಗೆ
ಕನಿಷ್ಠ ದರ 100ರಿಂದ 200 ರೂ. ವಿಧಿಸ ಲಾಗುವುದು. ಸಾಗಾಟ ಶುಲ್ಕವನ್ನು ಗ್ರಾಹಕರು ನೀಡಬೇಕು. 10 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತ ವ್ಯಯಿಸುವವರು ರಾಜಸ್ವ ತೆರಬೇಕಾಗುತ್ತದೆ. ಸರಕಾರಿ ಕಾಮ ಗಾರಿ ಗಳನ್ನು ಗುತ್ತಿಗೆದಾರರು ನಿರ್ವಹಿಸಿದಲ್ಲಿ ರಾಜಸ್ವವನ್ನು ಅವರಿಂದಲೇ ಪಡೆದು ಬಿಲ್ ಪಾವತಿಸಲಾಗುವುದು. ಕೇಂದ್ರೀಕೃತ ಜಿಪಿಎಸ್ ವ್ಯವಸ್ಥೆ ಮೂಲಕ ಮರಳು ವಿತರಣೆ ಟ್ರ್ಯಾಕಿಂಗ್ ಮಾಡಲಾಗುವುದು ಎಂದರು.
ಎ. 30: ಬೆಂಗಳೂರಿನಲ್ಲಿ ಗಣಿ ಅದಾಲತ್ :
ಕಂದಾಯ ವಿಭಾಗವಾರು ಗಣಿ ಅದಾಲತ್ ನಡೆಸಲು ತೀರ್ಮಾನಿಸಲಾಗಿದೆ. ಎ. 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಆಗ ಗಣಿ ನೀತಿ ಬಿಡುಗಡೆ ಮಾಡಲಾಗುವುದು. ಗಣಿಗಾರಿಕೆ ಪರವಾನಿಗೆಗೆ ಏಕ ಗವಾಕ್ಷಿ ಪದ್ಧತಿ ಮೂಲಕ ಕ್ಲಿಯರೆನ್ಸ್ ನೀಡಲು ನಿರ್ಧರಿಸಲಾಗಿದೆ ಎಂದರು.
ಗಣಿ ಇಲಾಖೆಯ ಸಿಬಂದಿಗೂ ಸಮವಸ್ತ್ರ, ಕೇಂದ್ರೀಕೃತ ಜಿಪಿಎಸ್, ವಾಕಿಟಾಕಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಕರಾವಳಿಗೆ ವಿನಾಯಿತಿ :
ಗಣಿ ಸ್ಫೋಟಗಳು ಸಂಭವಿಸಿದ ಬಳಿಕ ದೊಡ್ಡ ಗಣಿಗಾರಿಕೆಗಳಿಗೆ ಡಿಜಿಎಂಎಸ್ ಪರವಾನಿಗೆ ಪಡೆಯಲು ಸೂಚಿಸಲಾಗಿದೆ. ಆದರೆ 2 ಎಕ್ರೆ ಒಳಗಿನ ಗಣಿಗಳಿಗೆ ವಿನಾಯಿತಿ ಇದೆ. ದ.ಕ., ಉಡುಪಿಗಳಲ್ಲಿ ಬಹುತೇಕ ಕಲ್ಲು ಗಣಿಗಳು 2 ಎಕ್ರೆಗಿಂತ ಕಡಿಮೆ ಪ್ರದೇಶದಲ್ಲಿರುವ ಕಾರಣ ವಿನಾಯಿತಿ ನೀಡಲಾಗಿದೆ ಎಂದು ನಿರಾಣಿ ತಿಳಿಸಿದ್ದಾರೆ.