ಮಂಗಳೂರು: ಅವಿಭಜಿತ ಜಿಲ್ಲೆಯು ಶ್ಲಾಘನೀಯ ಚುನಾವಣ ಪರಂಪರೆಯನ್ನು ಹೊಂದಿದೆ. ಈವರೆಗಿನ ಎಲ್ಲ ಚುನಾವಣೆಗಳೂ ಇಲ್ಲಿ ಶಾಂತಿಯುತವಾಗಿ ನಡೆದಿರುವುದೇ ಈ ಶ್ಲಾಘನೀಯ ಪರಂಪರೆ.
ಇಲ್ಲಿ ಚುನಾವಣೆಗಳಲ್ಲಿ ಸ್ಥಳೀಯ ಸಂಗತಿಗಳು ಅಥವಾ ವ್ಯಕ್ತಿಗತ ವಿಚಾರಗಳು ಆದ್ಯತೆ ಪಡೆಯುವುದಿಲ್ಲ. ಜಾತಿ ಧರ್ಮಗಳು ಇಲ್ಲಿ ಚುನಾವಣೆಯ ಸಂದರ್ಭದಲ್ಲಿ ವಿಷಯಗಳಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಇಲ್ಲಿ ಚುನಾವಣೆಗಳು ನಿಜ ಅರ್ಥದ ಪ್ರಜಾತಾಂತ್ರಿಕ ಹಬ್ಬಗಳೇ ಆಗಿರುತ್ತವೆ. ಎಲ್ಲೋ ಒಂದೆರಡು ಕಡೆ ಘರ್ಷಣೆಯಂತಹ ಪ್ರಕರಣಗಳು ನಡೆದೇ ಇಲ್ಲವೆಂದಲ್ಲ. ಆದರೆ ಇದು ಸಾಮಾಜಿಕ ಶಾಂತಿಯನ್ನು ಕದಡುವ ರೀತಿಯದ್ದಾಗಿರಲಿಲ್ಲ.
90ರ ದಶಕದ ಮೊದಲಿನ ಚುನಾವಣೆಗಳಲ್ಲಿ ಅಬ್ಬರದ ಪ್ರಚಾರ ವಿತ್ತು. ಸಮಯ ಪಾಲನೆ ಇರಲಿಲ್ಲ. ಭಿತ್ತಿಪತ್ರಗಳು, ಮತ ಕೋರುವ ಪೋಸ್ಟರ್‌ಗಳು ಊರು ತುಂಬಾ ಕಾಣಿಸುತ್ತಿದ್ದವು. ರ್ಯಾಲಿಗಳು ನಿರಂತರವಾಗಿ ನಡೆಯುತ್ತಿದ್ದವು. ಆ ಕಾಲಘಟ್ಟದಲ್ಲೂ ಜಿಲ್ಲೆ ಶಾಂತಿ ಪರಿಪಾಲಿಸಿತ್ತು. ನಾಯಕರ, ಕಾರ್ಯಕರ್ತರ ಸಾಮಾಜಿಕ ಪ್ರಜ್ಞೆಗೆ ಇದು ಸಾಕ್ಷಿಯಾಗಿದೆ.
ಈ ಬಾರಿಯೂ ಇದೇ ಪರಂಪರೆ ಕಾಣಿಸುತ್ತಿದೆ. ಹಿತಮಿತವಾದ ಪ್ರಚಾರ ಇದಕ್ಕೆ ಕಾರಣ. ಆರೋಪ- ಪ್ರತ್ಯಾರೋಪಗಳು ಚುನಾವಣೆಗಳ ಸಂದರ್ಭದಲ್ಲಿ ಅತೀ ಸಾಮಾನ್ಯ. ಜಿಲ್ಲೆಯಲ್ಲಿ ಈ ಬಾರಿಯೂ ನಾಯಕರು- ಅಭ್ಯರ್ಥಿಗಳು ಇದರಲ್ಲಿ ನಿರತರಾಗಿರುವುದೂ ಸತ್ಯ. ಆದರೆ ಈ ಮಾತುಗಳು ಸಭ್ಯತೆಯ ಎಲ್ಲೆ ಮೀರಿಲ್ಲ ಎಂಬುದು ಗಮನಾರ್ಹ.
ಸ್ಥಳೀಯ- ರಾಜ್ಯ- ದೇಶದ ಚುನಾವಣೆಗಳ ಸಂದರ್ಭಗಳಲ್ಲಿ ಆಯಾವಿಚಾರಗಳೇ ಪ್ರಚಾರದಲ್ಲಿ ಪ್ರಸ್ತಾವವಾಗಬೇಕು. ನಿಂದನೆಗೆ ಇದು ಸಂದರ್ಭವಲ್ಲ. ಈ ಅಂಶಗಳನ್ನು ಜಿಲ್ಲೆ ಸದಾ ಪರಿಪಾಲಿಸುತ್ತಿದೆ.
ಅಂದ ಹಾಗೆ…
ಆ ಅಭ್ಯರ್ಥಿ ತನ್ನ ಪ್ರಥಮ ಪ್ರಚಾರ ಭಾಷಣದಲ್ಲಿ “ಎ’ ಪಕ್ಷವನ್ನೇ ಗೆಲ್ಲಿಸಿ ಅಂತ ಪದೇ ಪದೇ ಹೇಳುತ್ತಿದ್ದರು. ಸಭೆಯಲ್ಲಿ ಸೇರಿದ ಕಾರ್ಯಕರ್ತರಿಗೆ, ವೇದಿಕೆಯಲ್ಲಿದ್ದ ಮುಖಂಡರಿಗೆಲ್ಲ ಕಸಿವಿಸಿ. ನಿಜಕ್ಕಾದರೆ ಆ ಅಭ್ಯರ್ಥಿ ಆಗ ತಾನೇ “ಎ’ ಪಕ್ಷದಿಂದ ಪಕ್ಷಾಂತರಗೊಂಡು “ಬಿ’ ಪಕ್ಷಕ್ಕೆ ಸೇರಿ “ಬಿ’ ಪಕ್ಷದ ಟಿಕೆಟ್ ಪಡೆದಿದ್ದರು.
– ಮನೋಹರ ಪ್ರಸಾದ್