Advertisement

ನಿಗಮವಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ: ಮಟ್ಟಾರು

12:26 AM Feb 23, 2020 | Sriram |

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಅಭಿವೃದ್ಧಿ ನಿಗಮವಾಗಿ ಪರಿವರ್ತಿಸುವ ಪ್ರಸ್ತಾವವಿದ್ದು, ಇದು ಈಡೇರಿದರೆ ಎಲ್ಲ ಯೋಜನೆಗಳ ಅನುಷ್ಠಾನ ವೇಗ ಪಡೆಯಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Advertisement

ನಗರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಸಮಾಲೋಚನ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಾಧಿಕಾರವನ್ನು ನಿಗಮವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಮಾತನಾಡಲಾಗುವುದು. ಒಂದು ವೇಳೆ ನಿಗಮವಾಗಿ ಪರಿವರ್ತನೆ ಯಾದಲ್ಲಿ ಅಧಿಕ ಅನುದಾನ, ಸಿಬಂದಿ ಲಭ್ಯವಾಗಲಿದೆ. ಮಾತ್ರವಲ್ಲದೇ ಸ್ವಂತ ವ್ಯವಸ್ಥೆ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದೆ. ಹೀಗಾಗಿ ವಿವಿಧ ಯೋಜನೆ ಅನುಷ್ಠಾನಕ್ಕೆ ವೇಗ ಸಿಗಲಿದೆ ಎಂದು ಸರಕಾರದ ಯೋಜನ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಭರವಸೆ ನೀಡಿದ್ದಾರೆ.

ಸಾಗರ ವಲಯ ಸ್ಥಾಪನೆ
ಮೀನುಗಾರಿಕೆಯನ್ನು ಲಾಭ ದಾಯಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳನ್ನು ಕೇಂದ್ರೀಕರಿಸಿ ಸಾಗರ ಕೈಗಾರಿಕೆ ವಲಯ ಸ್ಥಾಪನೆಗೆ ಪ್ರಾಧಿಕಾರದ ಮುಖಾಂತರ ಪ್ರಯತ್ನ ನಡೆಯುತ್ತಿದ್ದು, ಯೋಜನೆ ಪ್ರಸ್ತಾವಿತ ಹಂತದಲ್ಲಿದೆ. ಅವಶ್ಯ ವ್ಯವಸ್ಥೆಗಳನ್ನು ಒಂದೇ ಕಡೆ ಒದಗಿಸುವುದು ಮತ್ತು ರಫ್ತು ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಇದು ಹೊಂದಿದೆ ಎಂದವರು ತಿಳಿಸಿದರು.

ಮೀನುಗಾರಿಕೆ ರಸ್ತೆ
ಮಂಗಳೂರುನಿಂದ ಕಾರವಾರ ತನಕ ಸುಮಾರು 1,000 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನುಗಾರಿಕೆ ರಸ್ತೆ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ. ಕಾಪು ದೀಪ ಸ್ತಂಭವನ್ನು ಪ್ರವಾಸಿಗರ ಕೇಂದ್ರವಾಗಿ ರೂಪಿಸಲು ಪ್ರಯತ್ನ ನಡೆಸಲಾಗುತ್ತಿದೆ. ಬಂಗ್ರ ಕೂಳೂರನ್ನು ಪ್ರವಾಸಿ ಸ್ಥಳವಾಗಿಸುವ ನಿಟ್ಟಿನಲ್ಲಿ ಅಗತ್ಯ ಪರಿಶೀಲನೆ ನಡೆಸಲಾ ಗುವುದು ಎಂದರು.

Advertisement

ಶಾಸಕ ಡಿ. ವೇದವ್ಯಾಸ ಕಾಮತ್‌, ದ.ಕ. ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ., ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕಾರವಾರ ಶಾಸಕ ರೂಪಾಲಿ ಸಂತೋಷ್‌ ನಾಯ್ಕ, ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್‌ ಡಿ’ಸೋಜಾ, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಕರಾವಳಿ ಶಾಶ್ವತ ಅಭಿವೃದ್ಧಿ ವರದಿ ಸಲ್ಲಿಸಿ
ಪ್ರಾಧಿಕಾರದಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಗಳನ್ನು ಒಳಗೊಂಡಿರುವ ಕರಾವಳಿಯ ಮೂಲಸೌಕರ್ಯ ಹಾಗೂ ಶಾಶ್ವತ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೂರಕ ವೈಜ್ಞಾನಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದರು.

ಉದ್ಯಮಶೀಲತೆ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ವರದಿ ತಯಾರಿಸಬೇಕು. ಧಾರ್ಮಿಕ ಪ್ರವಾಸೋದ್ಯಮ, ಬೀಚ್‌ ಪ್ರವಾಸೋದ್ಯಮ, ಅರಣ್ಯ ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿರುವ ಅವಕಾಶ ಮತ್ತು ಅದಕ್ಕೆ ಉತ್ತೇಜನ ನೀಡುವಲ್ಲಿ ಇರುವ ಸಾಧ್ಯಾಸಾಧ್ಯತೆಗಳ ಬಗ್ಗೆ ವರದಿಯಲ್ಲಿ ಉಲ್ಲೇಖೀಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next