ಬೆಂಗಳೂರು: ಹಾನಗಲ್ ಉಪಚುನಾವಣೆ ಫಲಿತಾಂಶದಿಂದ “ಚೈತನ್ಯ’ ಪಡೆದಂತಿರುವ ಕಾಂಗ್ರೆಸ್ ಪಕ್ಷ ಮುಂಬರುವ ಸಾರ್ವತ್ರಿಕ ಚುನಾವಣೆ, ವಿಧಾನ ಪರಿಷತ್ ಹಾಗೂ ಬಿಬಿಎಂಪಿ ಚುನಾವಣೆ ಕುರಿತ ರಣತಂತ್ರದೊಂದಿಗೆ ಒಗ್ಗಟ್ಟಿನ ಜಪ ಆರಂಭಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವ ದಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಈ ಒಗ್ಗಟ್ಟಿನ ಸಂದೇಶ ಸಾರಲಾಯಿತು. ಜತೆಗೆ ಪಕ್ಷದ ವಿಶೇಷ ಸದಸ್ಯತ್ವ ನೋಂದಣಿ, ಕೇಂದ್ರ ಮತ್ತು ರಾಜ್ಯ ಸರಕಾರದ ಧೋರಣೆಗಳ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ಅಭಿಯಾನ ನಡೆಸುವುದು, ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವುದು ಹಾಗೂ ಮೇಕೆದಾಟು ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುವ ಬಗ್ಗೆಯೂ ಚರ್ಚೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಪಕ್ಷದ ಹಿರಿಯ ನಾಯಕರು ಪ್ರತಿ ಗ್ರಾಮ-ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಜನಜಾಗೃತಿ ಮೂಡಿಸಬೇಕು. ಪಕ್ಷದ ಎಲ್ಲ ಸಮಿತಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಆಯೋಜನೆ ಮತ್ತು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಇದನ್ನೂ ಓದಿ:ಜಗತ್ತಿನ ದೈತ್ಯ ಕಾರು ಕಂಪನಿ ಟೆಸ್ಲಾದ ಶೇ. 10ರಷ್ಟು ಷೇರು ಮಾರಾಟ?
ಸಭೆಯಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್ ಕೆ.ಎಚ್ ಮುನಿಯಪ್ಪ, ಡಾ| ಜಿ. ಪರಮೇಶ್ವರ್, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ್, ಅಖೀಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕ ಬೈರತಿ ಸುರೇಶ್, ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಮತ್ತಿತರರು ಭಾಗವಹಿಸಿದ್ದರು.
ಒಗ್ಗಟ್ಟಿನಿಂದ ಗೆಲುವು ಸಾಧ್ಯ: ಡಿಕೆಶಿ
ಉಪಚುನಾವಣೆ ಗೆದ್ದಿದ್ದಕ್ಕೆ ಎಲ್ಲ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಡಿ.ಕೆ. ಶಿವಕುಮಾರ್, ಎಲ್ಲರೂ ಒಗ್ಗಟ್ಟಿನಿಂದ ಹೋದರೆ ಗೆಲುವು ಸಾಧ್ಯ ಅನ್ನುವುದನ್ನು ಹಾನಗಲ್ ಫಲಿತಾಂಶ ಸಾಬೀತುಪಡಿಸಿದೆ ಎಂದರು.