Advertisement

ಅನ್ನದಾತರ ಸಂಪೂರ್ಣ ಸಾಲಮನ್ನಾಕ್ಕೆಸಮ್ಮಿಶ್ರ ಸರ್ಕಾರ ಸಿದ್ಧ: ಶಿವಶಂಕರರಡ್ಡಿ

12:35 PM Jun 17, 2019 | Suhan S |

ಹುಬ್ಬಳ್ಳಿ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಮ್ಮಿಶ್ರ ಸರಕಾರ ಸಿದ್ಧವಿದ್ದು, ರೈತರು ಯಾವುದೇ ಕಾರಣಕ್ಕೂ ಬ್ಯಾಂಕ್‌ ನೋಟಿಸ್‌ಗಳಿಗೆ ಭಯ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಎನ್‌.ಎಚ್. ಶಿವಶಂಕರರಡ್ಡಿ ಹೇಳಿದರು.

Advertisement

ಕುಂದಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಕೃಷಿಕ ಸಮಾಜದ ವಿಚಾರ ಸಂಕಿರಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‌ ನೋಟಿಸ್‌ ನೀಡುವ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಬಾರದು ಎಂದರು.

ಸರ್ಕಾರ ಪ್ರತಿವರ್ಷ 10 ಸಾವಿರ ಕೋಟಿ ರೂ. ಮನ್ನಾ ಮಾಡಲಿದೆ. ಇದರಿಂದ ಬಡ್ಡಿ ಹೆಚ್ಚಾಗಲಿದೆ ಎನ್ನುವ ಭಯ ರೈತರಿಗೆ ಬೇಡ. ಈ ಬಡ್ಡಿಯನ್ನು ಸರಕಾರವೇ ಭರಿಸಲಿದೆ ಎಂದರು.

ರೈತರು ಬೆಳೆಗೆ ಬೆಲೆ ಕಡಿಮೆಯಾದ ಸಂದರ್ಭದಲ್ಲಿ ಬೆಳೆ ಗೋದಾಮಿನಲ್ಲಿಟ್ಟು ಬೇಕಾದಾಗ ಮಾರಾಟ ಮಾಡಬಹುದು. ಗೋದಾಮು ಬಾಡಿಗೆಯನ್ನು ಸರಕಾರವೇ ಭರಿಸಲಿದೆ. ಇದಕ್ಕಾಗಿ 500 ಕೋಟಿ ರೂ. ಆವರ್ತ ನಿಧಿ ಮೀಸಲಿಡಲಾಗಿದೆ. ದಾಸ್ತಾನು ಮಾಡಿದ ಬೆಳೆ ಮೇಲೆ ರೈತರು ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಇದು ದೇಶದಲ್ಲೇ ಮಾದರಿ ಯೋಜನೆಯಾಗಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಸಂಬಂಧಿಸಿ ಬೀಜ, ರಸಗೊಬ್ಬರ ಬೇಡಿಕೆಯಂತೆ ದಾಸ್ತಾನು ಮಾಡಲಾಗಿದೆ ಎಂದರು.

ಕೇಂದ್ರ ಸರಕಾರ ಕೇವಲ ಗೋದಿ ಮತ್ತು ಭತ್ತಕ್ಕೆ ಮಾತ್ರ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಉಳಿದ ಬೆಳೆ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಆದರೆ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರ ಕೃಷಿ ಕ್ಷೇತ್ರದ ಬದಲಾವಣೆಗೆ ಯೋಜನೆ ರೂಪಿಸಿದ್ದು, ಅನುಷ್ಠಾನಕ್ಕೆ ತರುತ್ತಿದೆ. ಕೃಷಿ ಯಂತ್ರ ಖರೀದಿಸಲು ಸಾಮಾನ್ಯ ರೈತರಿಗೆ ಸಬ್ಸಿಡಿ ಪ್ರಮಾಣವನ್ನು ಶೇ.50ರಿಂದ 75ಕ್ಕೆ ಹೆಚ್ಚಿಸಲಾಗುವುದು. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆಯಲ್ಲಿ ಪ್ರತಿ ಎಕರೆಗೆ 4 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಒಟ್ಟು 50 ಸಾವಿರ ಹೆಕ್ಟರ್‌ ಪ್ರದೇಶಕ್ಕೆ ಈ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದರು.

Advertisement

ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಬಸವನಗೌಡ ಮಾಲಿಪಾಟೀಲ, ಮಾಜಿ ಅಧ್ಯಕ್ಷ ಒಡಗೂರ ಡಿ.ಎಲ್.ನಾಗರಾಜ, ಉಮೇಶ ಹೆಬಸೂರ, ಅರವಿಂದ ಕಟಗಿ, ಎನ್‌.ಎನ್‌. ಪಾಟೀಲ, ಭೀಮಪ್ಪ ಮುಗಳಿ, ರಾಧಿಕಾ ಮೂಸೂರ, ಬೀರಪ್ಪ ಕುರುಬರ, ಎ.ಬಿ. ಉಪ್ಪಿನ, ಪಿ.ಎನ್‌. ಪಾಟೀಲ, ಸಿ.ಬಿ. ಮೇತ್ರಿ ಇನ್ನಿತರರಿದ್ದರು. ಕೃಷಿ ಇಲಾಖೆಯಿಂದ ಕೃಷಿ ಸಲಕರಣೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕುಂದಗೋಳ ಕ್ಷೇತ್ರ ದತ್ತು:

ಕುಂದಗೋಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಈ ಕ್ಷೇತ್ರವನ್ನು ದತ್ತು ಪಡೆಯಲಾಗುವುದು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಹಿಂದೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ರೈತರ ಬೆಳೆ ವಿಮೆ, ಸಾಲಾ ಮನ್ನಾ ಹಾಗೂ ಜಿಲ್ಲೆಯಲ್ಲಿ ಕೃಷಿಹೊಂಡ ನಿರ್ಮಾಣ ಮಾಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಲಾಗುವುದು ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next