Advertisement

ಕೊರತೆಗೆ ನೀವೇ ಹೊಣೆ; ಕಲ್ಲಿದ್ದಲು ಬಿಕ್ಕಟ್ಟಿನ ಬಗ್ಗೆ ರಾಜ್ಯಗಳ ವಿರುದ್ಧ ಕೇಂದ್ರದ ಆಕ್ರೋಶ

02:31 AM Oct 13, 2021 | Team Udayavani |

ಹೊಸದಿಲ್ಲಿ: ಕಲ್ಲಿದ್ದಲು ಕೊರತೆ ವಿಚಾರದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಸಂಘರ್ಷ ಮುಂದುವರಿದಿದ್ದು, ದುಃಸ್ಥಿತಿಗೆ ರಾಜ್ಯಗಳೇ ಕಾರಣ ಎಂದು ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಮಧ್ಯೆಯೇ, ಪ್ರತಿದಿನವೂ ರಾಜ್ಯಗಳಿಗೆ 1.95 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. ಹಾಗೆಯೇ ಮುಂಬರುವ ದುರ್ಗಾಪೂಜೆ ಸಂದರ್ಭದಲ್ಲಿ ಎಲ್ಲೂ ವಿದ್ಯುತ್‌ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆಯೂ ಕೋಲ್‌ ಇಂಡಿಯಾಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.

Advertisement

ಈ ಮಧ್ಯೆ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಮತ್ತು ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ಅವರು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಕಲ್ಲಿದ್ದಲು ಕೊರತೆ ವಿಷಯದ ಕುರಿತಂತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮೋದಿ ಅವರು, ದೇಶದ ಎಲ್ಲಿಯೂ ಕಲ್ಲಿದ್ದಲು ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಭೆ ಬಳಿಕ ಮಾತನಾಡಿದ ಪ್ರಹ್ಲಾದ್‌ ಜೋಶಿ ಅವರು, ಬೃಹತ್‌ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ವಿದ್ಯುತ್‌ ಸ್ಥಾವರಗಳಲ್ಲಿ ಹೆಚ್ಚಿನ ವಿದ್ಯುತ್‌ ಉತ್ಪಾದಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. ಹಾಗೆಯೇ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್‌ ಕಡಿತವಾಗಲಿದೆ ಎಂದು ಯಾರೂ ಪ್ಯಾನಿಕ್‌ ಆಗಬಾರದು. ಸದ್ಯ ಅಂತಾರಾಷ್ಟ್ರೀಯ ದರ ಹೆಚ್ಚಳ ಮತ್ತು ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಸಾಗಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿಯೇ ಹೆಚ್ಚಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ವಿದ್ಯುತ್‌ ಸ್ಥಾವರಗಳು 20 ದಿನಗಳ ಕಾಲ ಕಾರ್ಯಾಚರಣೆ ಸ್ಥಗಿತ ಮಾಡಿವೆ. ಈಗ ಮಳೆ ಕಡಿಮೆಯಾಗುತ್ತಿದ್ದು, ಪುನಃ ಸಹಜ ಸ್ಥಿತಿಗೆ ಬರಲಿದೆ. ಜತೆಗೆ ನಮ್ಮಲ್ಲಿ ಕಲ್ಲಿದ್ದಲು ಸಂಗ್ರಹವೂ ಹೆಚ್ಚಾಗಿದೆ ಎಂದು ಹೇಳಿದರು. ಹಾಗೆಯೇ ಇನ್ನೂ 22 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ನಮ್ಮ ಬಳಿ ಇದೆ ಎಂದೂ ಜೋಶಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಕೇರಳ: ಮಳೆಯಿಂದ ನಾಲ್ವರು ಸಾವು

2024ರ ಆರ್ಥಿಕ ವರ್ಷದ ವೇಳೆಗೆ ಒಂದು ಬಿಲಿಯನ್‌ ಟನ್‌ನಷ್ಟು ಕಲ್ಲಿದ್ದಲು ಉತ್ಪಾದಿಸಬೇಕು ಎಂಬ ಕೋಲ್‌ ಇಂಡಿಯಾದ ಗುರಿ ತಲುಪಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕೊರೊನಾ. ಆದರೆ ಈಗ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದ್ದು, ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೇವಲ ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಮಾತ್ರ ಸ್ಥಾವರಗಳ ಬಳಿ ಇದೆ ಎಂಬ ವಿಚಾರದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕೋಲ್‌ ಇಂಡಿಯಾವು ಪ್ರತಿ ದಿನ 1.95 ಮಿಲಿಯನ್‌ ಟನ್‌ನಷ್ಟು ಕಲ್ಲಿದ್ದಲನ್ನು ಪೂರೈಕೆ ಮಾಡುತ್ತಿದೆ ಎಂದು ಹೇಳಿದರು.

Advertisement

ಈ ಮಧ್ಯೆ, ದುರ್ಗಾ ಪೂಜೆ ವೇಳೆಗೆ ದೇಶದ ಎಲ್ಲೂ ವಿದ್ಯುತ್‌ ಸಮಸ್ಯೆ ಕಾಡಬಾರದು. ಇದಕ್ಕೆ ಬೇಕಾದ ಪೂರಕ ವ್ಯವಸ್ಥೆ ಮಾಡಿಕೊಳ್ಳುವಂತೆಯೂ ಕೇಂದ್ರ ಸರಕಾರ ವಿದ್ಯುತ್‌ ಉತ್ಪಾದನಾ ಕಂಪೆನಿಗಳಿಗೆ ಸೂಚನೆ ನೀಡಿದೆ.

ಕೊರತೆಗೆ ರಾಜ್ಯಗಳೇ ಕಾರಣ : ಸದ್ಯ ಉದ್ಭವಿಸಿರುವ ಕಲ್ಲಿದ್ದಲು ಕೊರತೆಗೆ ರಾಜ್ಯ ಸರಕಾರಗಳೆ ಕಾರಣವಾಗಿವೆ ಎಂದು ಕೇಂದ್ರ ಸರಕಾರ ಆರೋಪಿಸಿದೆ. ನಾವು ಜೂನ್‌ನಲ್ಲೇ ರಾಜ್ಯಗಳಿಗೆ ಕಲ್ಲಿದ್ದಲು ಸಂಗ್ರಹ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದೆವು. ಆದರೆ ಬಹಳಷ್ಟು ರಾಜ್ಯಗಳು ಈಗ ಬೇಡ ಎಂದೇ ಹೇಳಿ, ಕೇಂದ್ರ ಸರಕಾರದ ಪ್ರಸ್ತಾವವನ್ನು ತಿರಸ್ಕಾರ ಮಾಡಿದ್ದವು. ಆಗ ಕಲ್ಲಿದ್ದಲನ್ನು ಸಂಗ್ರಹಿಸಿಕೊಂಡಿದ್ದರೆ, ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ರಾಜ್ಯಗಳ ನಿರಾಕರಣೆ: ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ ಎಂಬ ಕೇಂದ್ರ ಸರಕಾರದ ಟೀಕೆಗೆ ರಾಜ್ಯಗಳು ತಿರುಗೇಟು ನೀಡಿವೆ. ಅಲ್ಲದೆ ಕಲ್ಲಿದ್ದಲು ದಾಸ್ಥಾನು ಇದೆ ಎಂಬ ಕೇಂದ್ರದ ವಾದವನ್ನೂ ತಳ್ಳಿಹಾಕಿವೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ. ಕಲ್ಲಿದ್ದಲು ಇದ್ದಿದ್ದರೆ, ವಿದ್ಯುತ್‌ ಉತ್ಪಾದನ ಘಟಕಗಳು ಏಕೆ ಕಾರ್ಯಾಚರಣೆ ನಿಲ್ಲಿಸುತ್ತಿದ್ದವು ಎಂದು ರಾಜಸ್ಥಾನ ಪ್ರಶ್ನಿಸಿದೆ. ಹಾಗೆಯೇ ಮಹಾರಾಷ್ಟ್ರ ಕೂಡ, ಕಲ್ಲಿದ್ದಲು ಕೊರತೆ ಬಗ್ಗೆ ಮಾತನಾಡಿದ್ದು, ಸದ್ಯ ರಾಜ್ಯದಲ್ಲಿ 27 ವಿದ್ಯುತ್‌ ಉತ್ಪಾದನ ಘಟಕಗಳಿದ್ದು ನಾಲ್ಕು ಕಾರ್ಯಾಚರಣೆ ಸ್ಥಗಿತ ಮಾಡಿವೆ ಎಂದಿದೆ.

ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಜೋಕೆ
ಖಾಸಗಿ ವಿದ್ಯುತ್‌ ಉತ್ಪಾದನ ಕಂಪೆನಿಗಳು ಈಗಿನ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಕೆಲವು ಕಂಪೆನಿಗಳು ಮತ್ತು ರಾಜ್ಯಗಳು ತಮ್ಮ ಗ್ರಾಹಕರಿಗೆ ವಿದ್ಯುತ್‌ ಒದಗಿಸುವುದನ್ನು ಬಿಟ್ಟು, ಲೋಡ್‌ ಶೆಡ್ಡಿಂಗ್‌ ಹೆಸರಲ್ಲಿ ಕರೆಂಟ್‌ ತೆಗೆಯುತ್ತಿವೆ. ಇದಕ್ಕೆ ಬದಲಾಗಿ ಹೆಚ್ಚಿನ ದರಕ್ಕೆ ಪವರ್‌ ಎಕ್ಸ್‌ಚೇಂಜ್‌ನಲ್ಲಿ ವಿದ್ಯುತ್‌ ಅನ್ನು ಮಾರಾಟ ಮಾಡಿಕೊಳ್ಳುತ್ತಿವೆ. ಈ ರೀತಿ ಮಾಡುತ್ತಿರುವ ರಾಜ್ಯಗಳಿಗೆ ನೀಡಲಾಗುತ್ತಿರುವ ವಿದ್ಯುತ್‌ ಅನ್ನು ವಾಪಸ್‌ ಪಡೆದು, ಬೇರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.  ಈ ನಡುವೆಯೇ, ಕೇರಳ, ರಾಜಸ್ಥಾನ ರಾಜ್ಯಗಳು ಕರೆಂಟ್‌ ಸ್ಥಗಿತದ ಮೊರೆ ಹೋಗಿವೆ. ಕಲ್ಲಿದ್ದಲು ಕೊರತೆಯಿಂದಾಗಿ ಈ ಕ್ರಮ ಅನುಸರಿಸುತ್ತಿದ್ದೇವೆ ಎಂದು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next