Advertisement

ನ್ಯಾಯದಾನಕ್ಕೆ ವಕೀಲರ ಸಹಕಾರ ಮುಖ್ಯ

10:15 AM May 27, 2022 | Team Udayavani |

ಹುಬ್ಬಳ್ಳಿ: ವಕೀಲರು ಮತ್ತು ನ್ಯಾಯಾಧೀಶರು ನಾಣ್ಯದ ಎರಡು ಮುಖಗಳು ಇದ್ದಹಾಗೆ. ವಕೀಲರ ಸಹಕಾರವಿಲ್ಲದೆ ನ್ಯಾಯಾಧೀಶರು ಪ್ರಕರಣಗಳನ್ನು ವಿಲೇವಾರಿ ಮಾಡುವುದು ಕಷ್ಟ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಹೇಳಿದರು.

Advertisement

ನ್ಯಾಯಾಲಯಗಳ ಸಂಕೀರ್ಣದ ಆವರಣದ ವಕೀಲರ ಸಂಘದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿದ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೂ. 26ರಂದು ಲೋಕ ಅದಾಲತ್‌ ಇದ್ದು, ಈ ಸಂದರ್ಭದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ದಿವಾಣಿ ಪ್ರಕರಣಗಳು (ಸಿವಿಲ್‌ ಒಎಸ್‌) ಹಾಗೂ ರಾಜೀ ಆಗುವಂತಹ ಕ್ರಿಮಿನಲ್‌ ಪ್ರಕರಣಗಳನ್ನು ಕೋರ್ಟ್‌ ಎದುರು ತಂದು, ಅವುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸಹಕರಿ ಸಬೇಕು. ಹುಬ್ಬಳ್ಳಿಯ ತಾಲೂಕು ನ್ಯಾಯಾಲಯಗಳ ಸಂಕೀರ್ಣ ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ಕಟ್ಟಡವಾಗಿದ್ದು, ಇಲ್ಲಿ ಕೆಲಸ ಮಾಡುವ ಭಾಗ್ಯ ದೊರೆತಿದೆ ಎಂದರು.

ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀರಾದ ಸುವರ್ಣಾ ಕೆ. ಮಿರಗಿ ಮಾತನಾಡಿ, ಕೌಟುಂಬಿಕ ನ್ಯಾಯಾಲಯದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲು ವಕೀಲರ ಸಹಕಾರ ಮುಖ್ಯ. ಹೆಚ್ಚೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಪ್ರಯತ್ನಿಸೋಣ. ಹು-ಧಾ ಉತ್ತರ ಕರ್ನಾಟಕದ ಹೆಮ್ಮೆಯ ನಗರಗಳು. ಇಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆಯಿತ್ತು. ಈಗ ಆ ಅವಕಾಶ ದೊರೆತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸಿ.ಆರ್‌. ಪಾಟೀಲ ಮಾತನಾಡಿ, ಲೋಕ ಅದಾಲತ್‌ನಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಹುಬ್ಬಳ್ಳಿ ವಕೀಲರು ಶೇ.80 ಪ್ರಕರಣಗಳನ್ನು ಲೋಕ ಅದಾಲತ್‌ ಗೆ ನೀಡಿದ್ದಾರೆ. ಈ ಬಾರಿಯೂ ಹೆಚ್ಚಿನ ಪ್ರಕರಣಗಳನ್ನು ಕೊಡಲಾಗುವುದು. ನ್ಯಾಯಾಧೀಶರು ಸಹಿತ ಅಂದಿನ ಕಾರ್ಯಕ್ಕೆ, ವಿಲೇವಾರಿಗೆ ಎಷ್ಟು ಪ್ರಕರಣಗಳು ಅವಶ್ಯವೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ನ್ಯಾಯಾಲಯಗಳಿಗೆ ನ್ಯಾಯಬೇಡಿ ಬರುವ ಕಕ್ಷಿದಾರರಿಗೆ ತೀವ್ರಗತಿಯಲ್ಲಿ ನ್ಯಾಯ ಒದಗಿಸಲು ವಕೀಲರ ಸಂಪೂರ್ಣ ಸಹಕಾರ ಸದಾ ಇರುತ್ತದೆ ಎಂದರು.

Advertisement

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ 21 ಕೋರ್ಟ್‌ಗಳಿವೆ. ಸಂಘದಲ್ಲಿ ಸುಮಾರು 2 ಸಾವಿರ ವಕೀಲರಿದ್ದಾರೆ. ಕೋರ್ಟ್‌ ಸಂಕೀರ್ಣದ ಕಟ್ಟಡವನ್ನು 142 ಕೋಟಿ ರೂ. ವೆಚ್ಚದಲ್ಲಿ ಅತ್ಯುತ್ತಮವಾಗಿ ನಿರ್ಮಿಸಿದ್ದಾರೆನೋ ಸರಿ. ಆದರೆ ವಕೀಲರ ಸಂಘದಿಂದ ನ್ಯಾಯಾಲಯ ಸಂಕೀರ್ಣಕ್ಕೆ ಹೋಗಲು ತುಂಬಾ ಸಮಯವಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಕೋರ್ಟ್‌ಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ. ಇವೆರಡು ಕಟ್ಟಡ ಸಂಪರ್ಕಿಸಲು ಪಾದಚಾರಿ ಸೇತುವೆ, ಇಲೆಕ್ಟ್ರಾನಿಕ್‌ ಎಸ್ಕಿಲೇಟರ್‌ ಅವಶ್ಯವಿದೆ. ಲಿಫ್ಟ್‌ ನಿರುಪಯುಕ್ತವಾಗಿದ್ದು, ಅದು ಯಾವಾಗ ಕೈಕೊಡುತ್ತದೋ ಗೊತ್ತಿಲ್ಲ. ಈ ಬಗ್ಗೆ ಪಿಐಎಲ್‌ ಹಾಕಲು ಯೋಚಿಸಲಾಗಿತ್ತು ಎಂದು ಹೇಳಿದರು.

ನ್ಯಾಯಾಧೀಶರಾದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯದ ಎಸ್‌.ಬಿ. ಹಂದ್ರಾಳ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ, ಕಾರ್ಮಿಕ ನ್ಯಾಯಾಲಯದ ಮಾರುತಿ ಬಾಗಡೆ, ಇಂಡಸ್ಟ್ರಿಯಲ್‌ ಟ್ರಿಬ್ಯುನಲ್‌ ನ್ಯಾಯಾಲಯದ ಜಿ.ಎ. ಮೂಲಿಮನಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯದ ಆರ್‌. ಎಸ್‌. ಚಿನ್ನಣ್ಣವರ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ರಾಘವೇಂದ್ರ ಆರ್‌., 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಗಣಪತಿ ಪ್ರಶಾಂತ ಎಂ., 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಪ್ರೀತಿ ಕೆ., ಪ್ರಧಾನ ದಿವಾಣಿ ನ್ಯಾಯಾಲಯದ ರಾಜಶೇಖರ ತಿಳಿಗಂಜಿ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ನಾಗೇಶ ನಾಯ್ಕ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣವೇಕರ ಮೊದಲಾದವರಿದ್ದರು.

ಭಾಗ್ಯಶ್ರೀ ಅರಬಟ್ಟಿ ಪ್ರಾರ್ಥಿಸಿದರು. ಎಸ್‌.ಜಿ. ಅರಗಂಜಿ ಸ್ವಾಗತಿಸಿದರು. ಲೋಕೇಶ ಕೆ.ಎಂ. ನಿರೂಪಿಸಿದರು. ಜಿ.ಎಫ್‌. ಹಿರೇಗೌಡ್ರ ವಂದಿಸಿದರು.

ಪ್ರಕರಣಗಳ ತ್ವರಿತ ವಿಲೇವಾರಿಗೆ ಕಾನೂನು ಪ್ರಕಾರವಾಗಿ ವಕೀಲರಿಗೆ ಯಾವೆಲ್ಲ ಪರಸ್ಪರ ಸಹಕಾರಬೇಕೋ ಅದನ್ನು ನೀಡಲು ನ್ಯಾಯಾಧೀಶರು ಸಿದ್ಧ. ಅದೇರೀತಿ ವಕೀಲರು ಸಹಿತ ಹಳೆಯ ಪ್ರಕರಣಗಳ ವಿಲೇವಾರಿ, ಲೋಕ ಅದಾಲತ್‌, ಕಾನೂನಾತ್ಮಕ ಕಾರ್ಯಕ್ರಮಗಳ ವಿಷಯದಲ್ಲಾಗಲಿ ನ್ಯಾಯಾಧೀಶರೊಂದಿಗೆ ಕೈಜೋಡಿಸಿ ಸಹಕಾರ ನೀಡಬೇಕು. –ಪರಮೇಶ್ವರ ಪ್ರಸನ್ನ ಬಿ., 1ನೇಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ

Advertisement

Udayavani is now on Telegram. Click here to join our channel and stay updated with the latest news.

Next