Advertisement

ರಾಜ್ಯಮಟ್ಟದ ಸಹಕಾರಿ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

10:37 AM Nov 16, 2017 | Team Udayavani |

ಮೂಡಬಿದಿರೆ: ನೂರಎರಡನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡಬಿದಿರೆ ಕೋ- ಓಪರೇಟಿವ್‌ ಸರ್ವಿಸ್‌ ಬ್ಯಾಂಕ್‌ನಲ್ಲಿ ಏರ್ಪಡಿಸಲಾಗಿರುವ ಸಹಕಾರ ಸಪ್ತಾಹದ ಉದ್ಘಾಟನ ಸಮಾರಂಭದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎನ್‌. ವಿನಯ ಹೆಗ್ಡೆ ಅವರಿಗೆ ಬ್ಯಾಂಕಿನ ವತಿಯಿಂದ ರಾಜ್ಯಮಟ್ಟದ ‘ಸಹಕಾರಿ ಕಲ್ಪವೃಕ್ಷ ಪ್ರಶಸ್ತಿ’ಯನ್ನು ಬ್ಯಾಂಕ್‌ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ಪ್ರದಾನ ಮಾಡಲಾಯಿತು.

Advertisement

ಮೂಡಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಬ್ಯಾಂಕಿನ ಶತಮಾನೋತ್ಸವ ಸ್ಮರಣ ಸಂಚಿಕೆ ‘ಶತಮಾನ ಕಲ್ಪವೃಕ್ಷ’ವನ್ನು ಅನಾವರಣಗೊಳಿಸಿ ಆಶೀರ್ವಚನವಿತ್ತರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಸಹಕಾರಿ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಸಪ್ತ ಸಂಧ್ಯಾ, ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳ ಸಹಿತ ಸಂಯೋಜಿಸಲಾದ ಸಹಕಾರ ಸಪ್ತಾಹವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಒಳ್ಳೆಯ ಸಾಲಗಾರರಿದ್ದಾಗ ಸಹಕಾರಿ ಸಂಘ, ಬ್ಯಾಂಕುಗಳು ಬೆಳೆಯುತ್ತವೆ. ಏಳುದಿನಗಳ
ಪರ್ಯಂತ ಕಾರ್ಯಕ್ರಮಗಳೊಂದಿಗೆ ಸಹಕಾರ ಸಪ್ತಾಹವನ್ನು ಎಂಸಿಎಸ್‌ ಬ್ಯಾಂಕ್‌ ಹಮ್ಮಿಕೊಂಡಿರುವುದು ರಾಜ್ಯದ ಸಹಕಾರಿ ರಂಗದಲ್ಲೇ ವಿಶಿಷ್ಟ ಎಂದು ಶ್ಲಾಘಿಸಿದರು.

ಸಿಬಂದಿ ಪೆನ್ಶನ್‌ ಸ್ಕೀಂ : ಎಲ್ಐಸಿ ಯೊಂದಿಗೆ ಒಡಂಬಡಿಕೆ
ಬ್ಯಾಂಕಿನ ಸಿಬಂದಿಗೆ ಪೆನ್ಶನ್‌ ಒದಗಿಸಲು ಎಲ್ಐಸಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಈ ಉದ್ದೇಶಕ್ಕಾಗಿ ರೂ. 1.37 ಕೋಟಿಯ ಚೆಕ್‌ ಅನ್ನು ಮುಖ್ಯ ಅತಿಥಿ, ಎಲ್ಐಸಿ ಉಡುಪಿ ವಿಭಾಗಾಧಿಕಾರಿ ವಿಶ್ವೇಶ್ವರ ರಾವ್‌ಅವರಿಗೆ ಬ್ಯಾಂಕಿನ ಅಧ್ಯಕ್ಷ ಅಮರನಾಥ ಶೆಟ್ಟಿ ಹಸ್ತಾಂತರಿಸಿದರು.

Advertisement

ಪೆನ್ಶನ್‌ ಮಾರ್ಕೆಟ್‌ನಲ್ಲಿ ಶೇ. 85ರಷ್ಟು ಪಾಲು ಎಲ್ಐಸಿಯಲ್ಲಿದೆ; ನ. 14ರಂದು ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ನೂತನ ಯೋಜನೆಯನ್ನು ಎಲ್ಐಸಿ ಬಿಡುಗಡೆಗೊಳಿಸಿದೆ ಎಂದು ವಿಶ್ವೇಶ್ವರ ರಾವ್‌ ಪ್ರಕಟಿಸಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿ ಡಾ| ಎನ್‌. ವಿನಯ ಹೆಗ್ಡೆ. ಮೂಡಬಿದಿರೆಯಷ್ಟು ವೇಗದ ಬೆಳವಣಿಗೆ ಕಂಡ ಊರು ಇನ್ನೊಂದಿಲ್ಲ. ಸಾಧಕರ ಪುಣ್ಯಭೂಮಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಲು ಸಂತಸವಾಗುತ್ತಿದೆ. ತಮ್ಮ ಪಿತಾಜಿಯವರ ಹೆಸರಿಗೆ ನ್ಯೂನತೆ ಬಾರದಂತೆ, ಇನ್ನೊಬ್ಬರಿಗೆ ಉಪಕಾರವಾಗುವಂತೆ ವಿಶೇಷ ಬದುಕನ್ನು ಕಳೆಯುವೆ ಎಂದು ಹೇಳಿದರು.

ಶಾಸಕ ಕೆ. ಅಭಯಚಂದ್ರ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮೈಸೂರು ವಿಭಾಗ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಎಚ್‌. ಸಿ. ಜೋಶಿ ಮುಖ್ಯಅತಿಥಿಗಳಾಗಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ದೇಶಕ ಎಂ. ಬಾಹುಬಲಿ ಪ್ರಸಾದ್‌ ಸಮ್ಮಾನ ಪತ್ರ ವಾಚಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಡಿ.ಜೆ. ವಿದ್ಯಾವರ್ಧಕ ಸಂಘದ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಂಸ್ಕೃತಿ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗೌರವ ನಮನ
ಕಾರ್ಕಳ ಟಿ.ಎ.ಪಿ.ಸಿ.ಎಂ.ಎಸ್‌., ರಾಮಕೃಷ್ಣ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘ, ಕಲ್ಲಬೆಟ್ಟು ಸೇವಾ ಸಹಕಾರಿ ಸಂಘ ಮತ್ತು ಕಿನ್ನಿಗೋಳಿ ವ್ಯ. ಸೇ. ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ
ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರನ್ನು , ಸಮಾಜ ಸೇವಕ, ಬ್ಯಾಂಕಿನ ನಿರ್ದೇಶಕ ಸಿ.ಎಚ್‌. ಅಬ್ದುಲ್‌ ಗಫೂರ್‌ ಅವರನ್ನು ರಜತ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ವಿಕಲ ಚೇತನ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next