Advertisement

ರಷ್ಯಾ ಯುದ್ಧದಿಂದ ಸಿಎನ್‌ಜಿ ದರ ವಿಪರೀತ ಏರಿಕೆ :ಪೆಟ್ರೋಲ್‌ಗೆ ಸಮನಾಗುತ್ತಿರುವ ಸಿಎನ್‌ಜಿ ದರ

08:53 AM Aug 06, 2022 | Team Udayavani |

ಮಂಗಳೂರು : ಈಗಾಗಲೇ ಏರಿಕೆಯಲ್ಲಿರುವ ಸಿಎನ್‌ಜಿ (ಇಟಞಟrಛಿssಛಿಛ nಚಠಿurಚl ಜಚs) ದರವು ಸಿಎನ್‌ಜಿ ವಾಹನಗಳ ಚಾಲಕರ ಕಿಸೆಯನ್ನು ಸುಡತೊಡಗಿದೆ. ಈ ನಡುವೆ ರಷ್ಯಾ – ಉಕ್ರೇನ್‌ ಕದನ ಮುಂದುವರಿದಿರುವ ಪರಿಣಾಮ ಭಾರತಕ್ಕೆ ಅಗತ್ಯವಿರುವಷ್ಟು ಸಿಎನ್‌ಜಿ ಲಭಿಸುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌ ಮಾದರಿಯಲ್ಲೇ ಇದರ ದರವೂ ಏರತೊಡಗಿದ್ದು ಶೀಘ್ರ 100 ರೂ.ಗೇರುವ ಸಾಧ್ಯತೆ ಗೋಚರಿಸಿದೆ.

Advertisement

ಒಂದೆಡೆ ಸಿಎನ್‌ಜಿ ಬಳಕೆ ಮಾಡಬೇಕು, ಇದು ಶುದ್ಧ ಹಾಗೂ ಪರಿಸರ ಸ್ನೇಹೀ ಇಂಧನ, ಪೆಟ್ರೋಲ್‌, ಡೀಸೆಲ್‌ಗಿಂತಲೂ ಉತ್ತಮ ಹಾಗೂ ಅಗ್ಗ ಎಂದು ಸರಕಾರಗಳು ಉತ್ತೇಜನ ನೀಡುತ್ತಿರುವ ನಡುವೆಯೇ ಬಳಕೆದಾರರು ಮಾತ್ರ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಗಿದೆ.

ಯುದ್ಧದಿಂದಾಗಿ ಸಮಸ್ಯೆ
ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಲೇ ಇದೆ. ಯೂರೋಪ್‌ನ ದೇಶಗಳು ಮುಂಬರುವ ಚಳಿಗಾಲಕ್ಕೆ ಬೇಕಾದ ಅನಿಲವನ್ನೆಲ್ಲ ಸಂಗ್ರಹಿಸಿಟ್ಟುಕೊಳ್ಳಲು ಆರಂಭಿಸಿದ್ದು ಕಳೆದ 6 ತಿಂಗಳಲ್ಲಿ ಶೇ. 50ಕ್ಕೂ ಹೆಚ್ಚು ಪ್ರಮಾಣದಲ್ಲಿ ಸಿಎನ್‌ಜಿ ಆಮದು ಯುರೋಪ್‌ಗೆ ಏರಿಕೆಯಾಗಿದೆ. ಇದರಿಂದಾಗಿ ಭಾರತದ ಸಿಎನ್‌ಜಿ ಬೇಡಿಕೆಯ ಟೆಂಡರ್‌ಗೆ ಸೂಕ್ತವಾದ ಸ್ಪಂದನೆ ದೊರಕುತ್ತಿಲ್ಲ. ಸಿಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಈಗಾಗಲೇ ಭಾರತದಲ್ಲಿ ಕೈಗಾರಿಕೆಗಳಿಗೆ ನೀಡುವ ಸಿಎನ್‌ಜಿಯ ಪ್ರಮಾಣವನ್ನು ಇಳಿಸಲು ಗೈಲ್‌ ಕಂಪೆನಿ ಮುಂದಾಗಿರುವುದಾಗಿ ತಿಳಿದುಬಂದಿದೆ.

ಖರೀದಿ ಕೈಬಿಟ್ಟ ಎಂಆರ್‌ಪಿಎಲ್‌
ಮಂಗಳೂರಿನಲ್ಲಿ ಸಿಎನ್‌ಜಿ ಬಳಸುವ ಕೈಗಾರಿಕೆಗಳು ಎರಡೇ. ಎಂಆರ್‌ಪಿಎಲ್‌-ಒಎಂಪಿಎಲ್‌ ಸೇರಿಕೊಂಡು ಒಂದಷ್ಟು ಸಿಎನ್‌ಜಿ ಖರೀದಿಸುತ್ತಿದ್ದರೆ ಮುಖ್ಯವಾಗಿ ಎಂಸಿಎಫ್‌ ತನ್ನ ರಸಗೊಬ್ಬರ ಉತ್ಪಾದನೆಗೆ ಸಿಎನ್‌ಜಿ ಬಳಕೆ ಮಾಡುತ್ತಿದೆ.

ಆದರೆ 6 ತಿಂಗಳಿಂದೀಚೆಗೆ ಎಂಆರ್‌ಪಿಎಲ್‌ ಸಿಎನ್‌ಜಿ ಖರೀದಿಯನ್ನು ನಿಲ್ಲಿಸಿದೆ. ದರ ಏರಿಕೆಯೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಎಂಸಿಎಫ್‌ ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸುತ್ತಿರುವುದರಿಂದ 2 ತಿಂಗಳಿನಿಂದ ಅಲ್ಲೂ ಉತ್ಪಾದನೆ ನಡೆಯುತ್ತಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಸಿಎನ್‌ಜಿ ವ್ಯತ್ಯಯ ಏನೂ ಇಲ್ಲ. ಮಂಗಳೂರಿನ ಬೇಡಿಕೆಯೂ ದೇಶದ ಬೇಡಿಕೆಗೆ ಹೋಲಿಸಿದರೆ ಅತ್ಯಲ್ಪ. ಆದರೂ ಏರಿದ ದರ ಸಾಮಾನ್ಯ ಗ್ರಾಹಕರ ಕಿಸೆ ಸುಡುವುದು ಮಾತ್ರ ನಿಜ.

Advertisement

ಆರೇ ತಿಂಗಳಲ್ಲಿ 25 ರೂ.ಗೂ ಅಧಿಕ ಏರಿಕೆ!
ಮಂಗಳೂರಿನಲ್ಲಿ ಸಿಎನ್‌ಜಿ ದರವು ಡಿಸೆಂಬರ್‌ 2021ರಲ್ಲಿ ಕೆ.ಜಿ.ಗೆ 57 ರೂ. ಇತ್ತು. ಇದನ್ನು ಜನವರಿ 1ಕ್ಕೆ ಅದನ್ನು 18 ರೂ. ಏರಿಸಲಾಗಿತ್ತು. ಆ ಬಳಿಕ ಇದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ದರ ಏರಿಳಿತ ಕಾಣುತ್ತ ಪ್ರಸ್ತುತ 88 ರೂ. ತಲಪಿದೆ. ಈಗಿನ ಸ್ಥಿತಿ ನೋಡಿದರೆ ಅದು 100 ರೂ. ತಲಪುವ ದಿನ ದೂರ ಇಲ್ಲ ಎಂದು ಅನ್ನಿಸುತ್ತದೆ ಎನ್ನುತ್ತಾರೆ ಸಿಎನ್‌ಐ ಬಳಕೆದಾರರ ಸಂಘದ ಸಂಚಾಲಕ ಶ್ರೀನಾಥ್‌ ರಾವ್‌.

ಹಲವು ಮಂದಿ ಹೆಚ್ಚು ಬೆಲೆ ಪಾವತಿಸಿ ಸಿಎನ್‌ಜಿ ಕಾರು, ಆಟೊ ಖರೀದಿಸಿದ್ದಾರೆ. ಅನೇಕರು ಸಿಎನ್‌ಜಿ ಕಿಟ್‌ ಹಾಕಿಸಿಕೊಂಡಿದ್ದಾರೆ. ಈ ರೀತಿ ಪೆಟ್ರೋಲ್‌ ರೀತಿಯೇ ದರ
ಏರಿದರೆ ಏನು ಪ್ರಯೋಜನ ಇದರಿಂದ ಎಲ್ಲರೂ ಮತ್ತೆ ಪೆಟ್ರೋಲ್‌ಗೇ ಮರಳಬಹುದು ಎನ್ನುವುದು ಗ್ರಾಹಕರ ಆತಂಕ.

ಜಾಗತಿಕ ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಸಿಎನ್‌ಜಿ ದರದಲ್ಲೂ ವ್ಯತ್ಯಾಸಗಳಾಗುತ್ತಿವೆ. ನಮ್ಮದು ಸಿಟಿಗ್ಯಾಸ್‌ ವಿತರಣೆ ಸಂಸ್ಥೆ. ಆದರೆ ದರ ನಿಗದಿ ನಮ್ಮ ಕೈಯಲ್ಲಿಲ್ಲ. ಇದನ್ನು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ನಿರ್ಧರಿಸಲಾಗುತ್ತದೆ.
– ಯು.ಸಿ. ಸಿಂಗ್‌, ಗೈಲ್‌ಗ್ಯಾಸ್ ಮಹಾಪ್ರಬಂಧಕರು

– ವೇಣುವಿನೋದ್‌ ಕೆ.ಎಸ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next