ನವದೆಹಲಿ: ನೈಸರ್ಗಿಕ ಅನಿಲ ಬೆಲೆಯಲ್ಲಿ ಹೆಚ್ಚಳವಾದ ಪರಿಣಾಮ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಿಎನ್ ಜಿ (ಸಂಕ್ಷೇಪಿತ ನೈಸರ್ಗಿಕ ಅನಿಲ) ಮತ್ತು ಕೊಳವೆ ಅಡುಗೆ ಅನಿಲ (ಪಿಎನ್ ಜಿ) ಬೆಲೆಯಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವ್ಲಾಡಿಮಿರ್ ಪುಟಿನ್ ಗೆ ಬರ್ತ್ ಡೇ ಗಿಫ್ಟಾಗಿ ‘ಟ್ರಾಕ್ಟರ್’ ನೀಡಿದ ಬೆಲಾರಸ್ ಅಧ್ಯಕ್ಷ!
ನಾಲ್ಕು ತಿಂಗಳ ಬಳಿಕ ಮೊದಲ ಬಾರಿಗೆ ಸಿಎನ್ ಜಿ ಬೆಲೆ 3 ರೂಪಾಯಿ ಏರಿಕೆಯಾಗಿದ್ದು, ಎರಡು ತಿಂಗಳ ನಂತರ ಮೊದಲ ಬಾರಿಗೆ ಪಿಎನ್ ಜಿ(ಪೈಪ್ಡ್ ನ್ಯಾಚುರಲ್ ಗ್ಯಾಸ್) ಬೆಲೆಯಲ್ಲಿ 3 ರೂಪಾಯಿ ಏರಿಕೆಯಾಗಿದೆ.
ದೆಹಲಿಯಲ್ಲಿ ಸಿಎನ್ ಜಿ ಪ್ರತಿ ಕೆಜಿ ಬೆಲೆ ಇದೀಗ 75.61 ರೂ.ನಿಂದ 78.61 ರೂಪಾಯಿಗೆ ಏರಿಕೆಯಾಗಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ವೆಬ್ ಸೈಟ್ ನಲ್ಲಿ ದರದ ವಿವರ ದಾಖಲಾಗಿದೆ ಎಂದು ವರದಿ ವಿವರಿಸಿದೆ.
ಮಾರ್ಚ್ 7ರ ನಂತರ ಸಿಎನ್ ಜಿ ಬೆಲೆಯಲ್ಲಿ 14 ಬಾರಿ ಏರಿಕೆಯಾಗಿದೆ. ಮೇ 21ರಂದು ಸಿಎನ್ ಜಿ ಪ್ರತಿ ಕೆಜಿ ಬೆಲೆಯಲ್ಲಿ ಎರಡು ರೂಪಾಯಿ ಹೆಚ್ಚಳವಾಗಿತ್ತು. ಒಟ್ಟು 14 ತಿಂಗಳ ಅವಧಿಯಲ್ಲಿ ಸಿಎನ್ ಜಿ ಬೆಲೆಯಲ್ಲಿ ಪ್ರತಿ ಕೆಜಿಗೆ 35.21 ರೂಪಾಯಿ ಏರಿಕೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅದೇ ರೀತಿ ದೆಹಲಿಯಲ್ಲಿ ಪಿಎನ್ ಜಿ (ಕೊಳವೆ ಅಡುಗೆ ಅನಿಲ) ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗೆ 50.59 ರೂ.ನಿಂದ 53.59 ರೂಪಾಯಿಗೆ ಏರಿಕೆಯಾಗಿದೆ. 2021ರ ಆಗಸ್ಟ್ ನಿಂದ ಈವರೆಗೆ ಪಿಎನ್ ಜಿ ಬೆಲೆಯಲ್ಲಿ 10 ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪಿಎನ್ ಜಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗೆ ಒಟ್ಟು 29.93 ರೂಪಾಯಿ ಏರಿಕೆಯಾದಂತಾಗಿದೆ ಎಂದು ಐಜಿಎಲ್ ತಿಳಿಸಿದೆ.
CNG, Piped cooking gas, National capital, IGL, August, ಸಿಎನ್ ಜಿ, ಕೊಳವೆ ಅಡುಗೆ ಅನಿಲ, ಬೆಲೆ ಏರಿಕೆ, ದೆಹಲಿ