Advertisement

Putturನ ಕಸದಿಂದ ಸಿಎನ್‌ಜಿ;ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವ

12:33 PM Aug 08, 2024 | Team Udayavani |

ಪುತ್ತೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬನ್ನೂರು ಡಂಪಿಂಗ್‌ ಯಾರ್ಡ್‌ನಲ್ಲಿ ಸ್ಥಾಪಿಸಿರುವ ಬಯೋಗ್ಯಾಸ್‌ ಘಟಕ ಇನ್ನೊಂದು ತಿಂಗಳಲ್ಲಿ ಸೇವೆ ನೀಡಲು ಸಿದ್ಧವಾಗುತ್ತಿದೆ. ಘನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆಗೈದು ಪೆಟ್ರೋಲಿಯಂ ಅನಿಲಕ್ಕೆ ಪರ್ಯಾಯವಾಗಿ ಬಯೋಗ್ಯಾಸ್‌ ಉತ್ಪಾದಿಸುವ ಯೋಜನೆ ಅಂತಿಮ ಹಂತಕ್ಕೆ ತಲುಪಿದ್ದು ಘಟಕದಲ್ಲಿ ಇಂಧನ ಬಳಕೆ ಪರೀಕ್ಷಾ ಹಂತದಲ್ಲಿ ಇದೆ.

Advertisement

ರೋಟರಿ ಕ್ಲಬ್‌ ಪೂರ್ವ ಪುತ್ತೂರು ಪ್ರಾಯೋಜಿತ ರೋಟರಿ ಕ್ಲಬ್‌ ಪೂರ್ವ ಪುತ್ತೂರು ಸ್ವತ್ಛ ಭಾರತ್‌ ಟ್ರಸ್ಟ್‌, ಕೃಷ್ಣ ಮುಳಿಯ ಗ್ರೀನ್‌ ಎನರ್ಜಿ, ರೀ ಟ್ಯಾಪ್‌ ಸೊಲೋಷನ್‌ ಮಂಗಳೂರು ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಸುಮಾರು 3 ಕೋ.ರೂ. ವೆಚ್ಚ ತಗಲಿದೆ. ಸರಕಾರ ಅಥವಾ ಸ್ಥಳೀಯಾಡಳಿತದ ಅನುದಾನವಿಲ್ಲದೇ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ.

ಸಿಎನ್‌ಜಿ ವಾಹನ

ಬಯೋಗ್ಯಾಸ್‌ ಘಟಕದಲ್ಲಿ ಉತ್ಪಾದನೆಯಾಗುವ ಸಿಎನ್‌ಜಿ ಗ್ಯಾಸ್‌ ಪುತ್ತೂರು ನಗರಸಭೆಯ ಕಸ ಸಾಗಾಟ ವಾಹನಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಎರಡು ಸಿಎನ್‌ಜಿ ಆಧಾರಿತ ವಾಹನಗಳನ್ನು ನಗರಸಭೆಯು ಖರೀದಿಸಿದೆ. ಪ್ರಸ್ತುತ ನಗರಸಭೆಯಲ್ಲಿ 18 (2 ಸಿಎನ್‌ಜಿ ವಾಹನ ಹೊರತುಪಡಿಸಿ) ಕಸ ಸಾಗಾಟ ವಾಹನಗಳಿವೆ. ಇದಕ್ಕೆ ತಿಂಗಳಿಗೆ 3.5 ಲಕ್ಷ ರೂ.ಮೌಲ್ಯದ ಡಿಸೇಲ್‌ನ ಆವಶ್ಯಕತೆ ಇದೆ. ಸಿಎನ್‌ಜಿ ಆಧಾರಿತ ವಾಹನ ಬಳಕೆಯಿಂದ ಖರ್ಚು ಕಡಿಮೆಯಾಗುತ್ತದೆ. 1 ಕೆ.ಜಿ ಸಿಎನ್‌ಜಿ ಗ್ಯಾಸ್‌ 1.5 ಲೀ.ಡಿಸೇಲ್‌ಗೆ ಸಮ. ಅಂದರೆ 10 ಲೀಟರ್‌ ಡಿಸೇಲ್‌ನಲ್ಲಿ 110 ರಿಂದ 120 ಕಿ.ಮೀ.ಓಡಾಟ ನಡೆಸಿದರೆ, ಸಿಎನ್‌ಜಿ ಗ್ಯಾಸ್‌ನಲ್ಲಿ 150 ಕ್ಕೂ ಅಧಿಕ ಕಿ.ಮೀ. ಸಂಚರಿಸಬಹುದಾಗಿದೆ. ಭಾರತದ ಸರಕಾರದ ಫೆಸೋದಿಂದ ವಾಹನಗಳಿಗೆ ಸಿಎನ್‌ಜಿ ಗ್ಯಾಸ್‌ ಬಳಸಲು ಅನುಮತಿ ಸಿಕ್ಕಿದ ಅನಂತರ ಬಳಕೆ ಆರಂಭಗೊಳ್ಳಲಿದೆ ಎನ್ನುತ್ತಾರೆ ನಗರಸಭೆಯ ಪೌರಾಯುಕ್ತ ಮಧು ಎಸ್‌. ಮನೋಹರ್‌.

ಪ್ರತಿನಿತ್ಯ 350 ಕೆಜಿ

Advertisement

ಬಯೋಗ್ಯಾಸ್‌ ಉತ್ಪಾದನೆ ಪ್ರತಿನಿತ್ಯ 350 ಕೆಜಿ ಬಯೋಗ್ಯಾಸ್‌ ಉತ್ಪಾದನೆಗೊಳ್ಳಲಿದ್ದು ಇದರಲ್ಲಿ 200 ಕೆ.ಜಿ ಅಧಿಕ ಗ್ಯಾಸ್‌ ವಾಹನಕ್ಕೆ ಇಂಧನವಾಗಿ ದೊರೆಯಲಿದೆ. ಸದ್ಯಕ್ಕೆ ನಗರದಲ್ಲಿ ಕಸ ಸಾಗಾಟಕ್ಕೆ ಬಳಕೆಯಾಗುತ್ತಿರುವ ವಾಹನಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಸ್ಥಳೀಯಾಡಳಿತ ಅಥವಾ ಸರಕಾರದ ಯಾವುದೇ ಅನುದಾನ ಇಲ್ಲದೆ ಸೇವಾಸಂಸ್ಥೆಯೊಂದಿಗೆ ಬಂಡವಾಳ ಹೂಡಿ ಯೋಜನೆ ಅನುಷ್ಠಾನಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ ಎನ್ನುತ್ತಾರೆ ಯೋಜನೆ ನಿರ್ದೇಶಕ ರಾಜೇಶ್‌ ಬೆಜ್ಜಂಗಳ.

ಗೊಬ್ಬರವಾಗಿಯೂ ಬಳಕೆಗೆ ಲಭ್ಯ

ಆಹಾರ ಮತ್ತು ತರಕಾರಿ, ಶೌಚಾಲಯ, ಕೋಳಿ ಮತ್ತು ಮಾಂಸ, ಹಸಿ ಹುಲ್ಲು ತ್ಯಾಜ್ಯವನ್ನು ಸಂಸ್ಕರಿಸಿ ಬಯೋಗ್ಯಾಸ್‌ ಉತ್ಪಾದಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯದಲ್ಲಿ ಹಸಿ ಮತ್ತು ಕೊಳೆಯುವ ತ್ಯಾಜ್ಯ ಬಹುಪಾಲು ಇದ್ದು ಇದನ್ನು ಸೂಕ್ತ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಿ ಸಂಕುಚಿತ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ. ಬಯೋಗ್ಯಾಸ್‌ ಉತ್ಪಾದನೆಯಿಂದ ಪರಿಸರಕ್ಕೆ ಸೇರುವ ಮಿಥೇನ್‌ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಿದೆ. ಎಲ್ಲ ರೀತಿಯಲ್ಲಿ ಸುರಕ್ಷತೆ ಕ್ರಮವನ್ನು ಅನುಸರಿಸಿ ಅನುಷ್ಠಾನಿಸಲಾಗಿದೆ. ಇದು ಪರಿಸರ ಸ್ನೇಹಿ ಯೋಜನೆ. ಜತಗೆ ಇಂಧನ ವಲಯಕ್ಕೆ ಮಹತ್ವದ ಕೊಡುಗೆ ನೀಡಲಿದೆ. ಬಯೋಗ್ಯಾಸ್‌ ಉತ್ಪಾದನೆ ವೇಳೆ ದೊರೆಯುವ ಉಪ ಉತ್ಪನ್ನ ಜೈವಿಕ ಗೊಬ್ಬರ ರಾಸಾಯನಿಕ ರಹಿತವಾಗಿದ್ದು, ಇದನ್ನು ತರಕಾರಿ, ಹಣ್ಣಿನ ಬೆಳೆಗಳಿಗೆ ಗೊಬ್ಬರವಾಗಿ ಬಳಸಿದರೆ ಸಾವಯವ ಸಹಿತ ಉತ್ಪನ್ನಗಳು ದೊರೆಯಲು ಸಾಧ್ಯವಿದೆ.

ಪರಿಸರ ಸ್ನೇಹಿ ಯೋಜನೆ

2014 ರಲ್ಲಿ ಟಿಸಿಲೊಡೆದ ಯೋಚನೆಯೊಂದು ಇದೀಗ ಅಂತಿಮ ಹಂತಕ್ಕೆ ಬಂದಿದೆ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ. ಕೆಲವು ದಿನಗಳಲ್ಲಿ ಇದರ ಪ್ರಯೋಜನ ದೊರೆಯಲಿದೆ.

-ಕೃಷ್ಣ ನಾರಾಯಣ ಮುಳಿಯ, ಅಧ್ಯಕ್ಷರು, ರೋಟರಿ ಕ್ಲಬ್‌ ಪೂರ್ವ ಪುತ್ತೂರು ಸ್ವತ್ಛ ಭಾರತ್‌ ಟ್ರಸ್ಟ್‌.

ಸಿಎನ್‌ಜಿ ಆಗುವ ಹಂತ

ನಗರದಲ್ಲಿ ಉತ್ಪಾದನೆಗೊಳ್ಳುವ 8 ಟನ್‌ ಹಸಿ ತ್ಯಾಜ್ಯವನ್ನು ನಗರಸಭೆಯು ಬಯೋಗ್ಯಾಸ್‌ ಘಟಕಕ್ಕೆ ಪೂರೈಕೆ ಮಾಡುತ್ತದೆ. ಬಹುತೇಕ ಹಸಿ-ಒಣ ತ್ಯಾಜ್ಯ ಪ್ರತ್ಯೇಕಗೊಂಡೇ ಡಂಪಿಂಗ್‌ ಯಾರ್ಡ್‌ಗೆ ಬರುವ ಕಾರಣ ಈ ತ್ಯಾಜ್ಯ ಅಲ್ಲಿಂದ ಡೈಜೆಸ್ಟರ್‌ ರವಾನೆ ಆಗುತ್ತದೆ. ಅಲ್ಲಿಂದ ಬಯೋಗ್ಯಾಸ್‌ ಉತ್ಪಾದನೆ ಆರಂಭಗೊಂಡು ಅದು ಬಲೂನ್‌ನಲ್ಲಿ ಶೇಖರಣೆಯಾಗುತ್ತದೆ. ಅಲ್ಲಿ ನೀರು, ಕಾರ್ಬನ್‌ ಡಯಾಕ್ಸೈಡ್‌, ಕಾರ್ಬನ್‌ ಮನೋಕ್ಸೈಡ್‌, ಹೈಡ್ರೋಜನ್‌ ಸಲ್ಫೈಡ್‌, ನೀರಿನಾಂಶವನ್ನು ವಿವಿಧ ಹಂತಗಳಲ್ಲಿ ಶುದ್ಧೀಕರಿಸಿ ಸಿಎನ್‌ಜಿ ರೂಪಕ್ಕೆ ತರಲಾಗುವುತ್ತದೆ. ಬಳಿಕ ಅಲ್ಲೇ ಘಟಕಕ್ಕೆ ಪೂರೈಕೆಯಾಗಿ ನೇರವಾಗಿ ವಾಹನಗಳಿಗೆ ಇಂಧನ ರೂಪದಲ್ಲಿ ಬಳಕೆಯಾಗುತ್ತದೆ.

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next