Advertisement

ಕೊಡಗಿಗೆ ಸಿಎಂ ಭೇಟಿ: ಮಳೆಹಾನಿ ನಷ್ಟ ಕುರಿತು ಚರ್ಚೆ

10:18 AM Aug 31, 2019 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ ಘೋಷಿಸಲಾಗಿದ್ದ 536 ಕೋಟಿ ರೂ. ವಿಶೇಷ ಪ್ಯಾಕೇಜ್‌ನಲ್ಲಿ ಪ್ರಥಮ ಹಂತವಾಗಿ 100 ಕೋಟಿ ರೂ.ಗಳನ್ನು ಶುಕ್ರವಾರವೇ ಬಿಡುಗಡೆ ಮಾಡಲಾ ಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ಪ್ರದೇಶ ಗಳ ವೀಕ್ಷಣೆಗೆ ಆಗಮಿಸಿದ ಅವರು ಕೂಡಿಗೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಕ್ರಮ ಪ್ರಕಟಿಸಿದರು.ಜಿಲ್ಲಾಡಳಿತದ ಖಾತೆಯಲ್ಲಿರುವ ಹಣವನ್ನು ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸೂಚಿಸಿದ ಸಿಎಂ, ಭೂಕುಸಿತದಿಂದ ನಾಪತ್ತೆಯಾದವರ ಕುಟುಂಬಕ್ಕೆ ತತ್‌ಕ್ಷಣ ಒಂದು ಲಕ್ಷ ರೂ., ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

ಕೇಂದ್ರದಿಂದ ಆಗಮಿಸಿದ ನೆರೆ ಅಧ್ಯಯನ ಅಧಿಕಾರಿಗಳ ತಂಡದ ವರದಿಗಳ ಆಧಾರದ ಮೇರೆಗೆ ಕೇಂದ್ರದಿಂದ ಇನ್ನೂ ಅಧಿಕ ಮೊತ್ತದ ಪರಿಹಾರ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿಕೊಡಲಾಗುವುದು. ಸೂರು ಕಳೆದುಕೊಂಡವರಿಗೆ ಪರ್ಯಾಯ ವಸತಿ ಕಲ್ಪಿಸಲು ಜಿಲ್ಲಾಡಳಿತ ಸೂಕ್ತ ಸ್ಥಳ ಗುರುತಿಸಿದೆ. ಶಾಶ್ವತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹಾನಿಯ ಬಗ್ಗೆ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಸಚಿವರಾದ ಆರ್‌. ಅಶೋಕ್‌, ಸುರೇಶ್‌ ಕುಮಾರ್‌, ಶಾಸಕರಾದ ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರುಗಳಾದ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಸಿಇಒ ಲಕ್ಷ್ಮೀಪ್ರಿಯ ಉಪಸ್ಥಿತರಿದ್ದರು.

ಪರಿಹಾರ ಕೇಂದ್ರಕ್ಕೆ ಭೇಟಿ
ಸಭೆಯ ಬಳಿಕ ಸಿಎಂ ಬಿಎಸ್‌ವೈ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರಕ್ಕೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದರು. ಕರಡಿಗೋಡು, ಕುಂಬಾರಗುಂಡಿ ಮತ್ತಿತರ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next