Advertisement
ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಅನಂತರ ಸಿದ್ದರಾಮಯ್ಯ ಅವರು ಸೋಮವಾರ ನಡೆಸಿದ ಮೊದಲ “ಜನ ಸ್ಪಂದನ’ದಲ್ಲಿ ಅಹವಾಲುಗಳ ಮಹಾಪೂರವೇ ಹರಿದುಬಂದಿತು. ಅವುಗಳನ್ನು ಬಗೆಹರಿಸಲು ಮುಖ್ಯಮಂತ್ರಿಯವರು ಗೃಹ ಕಚೇರಿ “ಕೃಷ್ಣಾ’ದಲ್ಲಿ ಬೆಳಗ್ಗೆಯಿಂದ ಸತತ ಆರು ತಾಸು ಠಿಕಾಣಿ ಹೂಡಿದರು. ಎಲ್ಲ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಸ್ಥಳದಲ್ಲೇ ಲ್ಯಾಪ್‌ಟಾಪ್ ಹಿಡಿದು ಅವರ ಜತೆಗಿದ್ದರು. ಇದರ ಜತೆಗೆ ಎಲ್ಲ ಜಿಲ್ಲಾಧಿಕಾರಿಗಳು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರತ್ಯಕ್ಷರಾದರು. ಒಟ್ಟಿನಲ್ಲಿ ಇಡೀ ಸರಕಾರ “ಕೃಷ್ಣಾ’ದಲ್ಲಿ ಬೀಡುಬಿಟ್ಟಿತ್ತು.
ಜನರ ಮನೆ ಬಾಗಿಲಿಗೆ ಸರಕಾರಿ ಸೇವೆಗಳನ್ನು ಕಲ್ಪಿಸುವ “ಜನಸೇವಕ’, ಮಾಹಿತಿ ಹಕ್ಕು ಕಾಯ್ದೆ, ನಿಗದಿತ ಅವಧಿಯಲ್ಲಿ ಸೇವೆ ಕಲ್ಪಿಸುವ “ಸಕಾಲ’ ಸಹಿತ ಹಲವು ಪೂರಕ ವ್ಯವಸ್ಥೆಗಳ ನಡುವೆಯೂ ನಾನಾ ಭಾಗಗಳಿಂದ ಬಂದ ಪ್ರಜೆಗಳು ಮುಖ್ಯಮಂತ್ರಿ ಮನೆಯ ಬಾಗಿಲು ತಟ್ಟಿದರು. ಈ ಪೈಕಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಲಭ್ಯವಾದರೆ, ಇನ್ನು ಹಲವು ಅಹವಾಲುಗಳನ್ನು ನಿರ್ದಿಷ್ಟ ಅವಧಿಯಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಉಳಿದ ಸಮಸ್ಯೆಗಳ ವಿಲೇವಾರಿಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಹದಿನೈದು ದಿನಗಳ ಗಡುವು ವಿಧಿಸಲಾಯಿತು. “ಜನಸ್ಪಂದನ’ದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಅಹವಾಲು ಹಿಡಿದು ಮುಂಜಾನೆಯಿಂದಲೇ “ಕೃಷ್ಣಾ’ ಮುಂದೆ ಸಾಲುಗಟ್ಟಿ ನಿಂತಿದ್ದರು. ಹೀಗೆ ಬಂದವರಿಗೆ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಬಂದು-ಹೋಗುವವರಿಗೆ ಬಿಎಂಟಿಸಿ ಬಸ್ ಸೇವೆ ಕೂಡ ಕಲ್ಪಿಸಲಾಗಿತ್ತು. ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಜೆಯವರೆಗೆ ಸುಮಾರು 3,812 ಅರ್ಜಿಗಳು ಬಂದವು. ಮಧ್ಯಾಹ್ನದ ಊಟಕ್ಕೂ ತೆರಳದೆ ಇದ್ದಲ್ಲಿಗೇ ಊಟ ತರಿಸಿಕೊಂಡು ಮುಖ್ಯಮಂತ್ರಿ “ಜನಸ್ಪಂದನ’ ಮುಂದುವರಿಸಿದರು.
Related Articles
30 ವರ್ಷಗಳ ಹಿಂದೆ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಗಮನಸೆಳೆದ ಸಂತ್ರಸ್ತರು, ಮೃತಪಟ್ಟ ಬಾದಾಮಿಯ ಖಾಸಗಿ ಅನುದಾನಿತ ಶಿಕ್ಷಕನ ಕುಟುಂಬಕ್ಕೆ ಕೆಲಸ ನೀಡುವಂತೆ ಮನವಿ ಮಾಡುವ ಮೂಲಕ ಸ್ವತಃ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗ ನೀಡಿದ್ದ ಭರವಸೆಯನ್ನು ನೆನಪಿಸಿದ ಕುಟುಂಬ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನನ್ನು ಎತ್ತಿಕೊಂಡು ಬಂದು ಕನಕಪುರಕ್ಕೆ ವರ್ಗಾವಣೆಗಾಗಿ ಮನವಿ ಮಾಡಿದ ಶಿಕ್ಷಕ, ಕಂದಾಯ ಕಟ್ಟಿದ್ದರೂ ದುಪ್ಪಟ್ಟು ದಂಡ ಹಾಕಿದ ಬಿಬಿಎಂಪಿ ಅಧಿಕಾರಿ ವಿರುದ್ಧ ದೂರು ನೀಡಿದ ವೃದ್ಧೆ, ಬೀದಿಬದಿ ವ್ಯಾಪಾರಿಗಳಿಗೆ ಅಧಿಕಾರಿಗಳ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದ ವ್ಯಾಪಾರಿ ನಿಂಗಮ್ಮ, ಅಧಿಕಾರಿಗಳು ಹೇಳಿದ ಎಲ್ಲ ನಿಯಮಗಳನ್ನು ಪಾಲಿಸಿದರೂ ಗೃಹಲಕ್ಷ್ಮಿ ಹಣ ಸಿಗುತ್ತಿಲ್ಲ ಎಂದು ಶಿವಮೊಗ್ಗದಿಂದ ಬಂದು ದೂರು ಸಲ್ಲಿಸಿದ ವೃದ್ಧೆ… ಹೀಗೆ ವ್ಯವಸ್ಥೆಯ ಲೋಪಗಳಿಗೆ “ಜನಸ್ಪಂದನ’ ಕನ್ನಡಿ ಹಿಡಿಯಿತು.
Advertisement
ಇವೆಲ್ಲವುಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಳ್ಮೆಯಿಂದ ಸ್ಪಂದಿಸಿದರು. ಅಧಿಕಾರಿಗಳ ನಡವಳಿಕೆಗೆ ಸ್ಥಳದಲ್ಲೇ ಕಿವಿ ಹಿಂಡಿದರು. ಪಿಂಚಣಿ, ಪಹಣಿಯಂತಹ ಸಮಸ್ಯೆಗಳ ಪರಿಹಾರಕ್ಕೂ ಜನರು ನನ್ನ ಬಳಿ ಬರಬೇಕಾ? ಇದನ್ನೆಲ್ಲ ನೀವೇ ಪರಿಹರಿಸಲು ಆಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು. ವೃದ್ಧೆಯೊಬ್ಬರು ತನ್ನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿಗಳನ್ನು ಪ್ರೀತಿಯಿಂದ ತಲೆ ಸವರಿ ಆಶೀರ್ವದಿಸಿದರು.
ಜನರು “ಕೃಷ್ಣಾ’ ಪ್ರವೇಶಿಸುತ್ತಿದ್ದಂತೆ ಜನತಾ ದರ್ಶನದ ಅರ್ಜಿ ನೀಡಲಾಗುತ್ತಿತ್ತು. ಅದರಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಜತೆಗೆ ತಮ್ಮ ಸಮಸ್ಯೆ ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬ ಬಗ್ಗೆ ನಮೂದಿಸಿ ವಾಪಸ್ ನೀಡಬೇಕಿತ್ತು. ಅನಂತರ ಸರತಿಯಲ್ಲಿ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಮೊದಲಿಗೆ ವಿಕಲಚೇತನರು, ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಅನಂತರ ಸರತಿ ಸಾಲಿನಲ್ಲಿ ಬಂದವರ ಸಮಸ್ಯೆಗಳನ್ನು ಆಲಿಸಿದರು.
ಸಮಸ್ಯೆ ಪರಿಹಾರಕ್ಕೆ 15 ದಿನಗಳ ಗಡುವುಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಎಲ್ಲ ಹಂತಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನರ ತೆರಿಗೆ ಹಣದಿಂದ ನಮಗೆ ಸಂಬಳ ಬರುತ್ತಿದೆ. ಜವಾಬ್ದಾರಿ ಅರಿತು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಜನಸ್ಪಂದನ’ದಲ್ಲಿ ಸ್ವೀಕೃತಗೊಂಡ ಅರ್ಜಿಗಳ ಪರಿಹಾರಕ್ಕೆ 15 ದಿನಗಳ ಗಡುವು ನೀಡಿದರು. ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಸ್ಥಳೀಯ ಹಂತದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಸಮಸ್ಯೆಗಳು ಕೂಡ ಸ್ಥಳೀಯ ಹಂತದಲ್ಲಿ ಬಗೆಹರಿಯಬಲ್ಲವೇ ಆಗಿವೆ. “ಜನಸ್ಪಂದನ’ದ ಅರ್ಜಿಗಳಿಗೆ ಒಂದು ವಾರ ಅಥವಾ 15 ದಿನಗಳಲ್ಲಿ ಪರಿಹಾರ ನೀಡದೆ ಇದ್ದಲ್ಲಿ ಯಾಕೆ ಸಾಧ್ಯವಿಲ್ಲ ಎಂಬುದನ್ನು ಲಿಖೀತ ರೂಪದಲ್ಲಿ ಮುಖ್ಯಮಂತ್ರಿ ಕಚೇರಿಗೆ ತಿಳಿಸಬೇಕು ಎಂದು ತಾಕೀತು ಮಾಡಿದರು. 3 ತಿಂಗಳಿಗೊಮ್ಮೆ ಸ್ಪಂದನ
ಇನ್ನು ಮುಂದೆ ಪ್ರತೀ ಮೂರು ತಿಂಗಳಿಗೊಮ್ಮೆ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುವುದು. ನಾನೂ ಸರಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಸಿಎಂ ಹೇಳಿದರು. ಇಡೀ ದಿನ ಮೂರೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮುಂದಿನ ಬಾರಿ ಈ ಸಂಖ್ಯೆ ಇಳಿಮುಖವಾಗಬೇಕು. ಇಲ್ಲಿಗೆ ಬಂದಿರುವ ಬಹುತೇಕ ಅರ್ಜಿಗಳು ಜಿಲ್ಲಾ ಹಂತದಲ್ಲಿ ಪರಿಹಾರ ನೀಡುವಂತಹ ಅರ್ಜಿಗಳಾಗಿದ್ದು, ಸ್ಥಳೀಯ ಹಂತದಲ್ಲಿ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು. ಜನಸ್ಪಂದನ ಕಾರ್ಯಕ್ರಮ 2 ತಿಂಗಳ ಹಿಂದಯೇ ನಡೆಯಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರಿಗೂ ತಮ್ಮ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲು ಪತ್ರವನ್ನು ಬರೆದು ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ತಿಳಿಸಲಾಗಿತ್ತು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನ ಕಾರ್ಯಕ್ರಮವನ್ನು ನಡೆಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ನೀಡಿರುತ್ತಾರೆ ಎಂದು ಹೇಳಿದರು. -3,812 ಅರ್ಜಿ ಸ್ವೀಕಾರ
– 2,862 ಅರ್ಜಿಗಳು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ
– 950 ಅರ್ಜಿ ನೇರವಾಗಿ ಸ್ವೀಕಾರ
– 65 ಸ್ಥಳದಲ್ಲೇ ವಿಲೇವಾರಿ
– 6 ತಾಸು ಸತತವಾಗಿ ನಡೆದ ಜನಸ್ಪಂದನ