Advertisement

ಸಿಎಂ ಭರವಸೆ: ಬಿಸಿಯೂಟ ತಯಾರಕರ ಧರಣಿ ವಾಪಸ್‌

06:00 AM Dec 04, 2018 | Team Udayavani |

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಬಿಸಿಯೂಟ ತಯಾರಿಸುತ್ತಿರುವವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಧಿವೇಶನದ ನಂತರ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಿಸಿಯೂಟ ನೌಕರರು ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

Advertisement

ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ, ಸೇವಾ ಭದ್ರತೆ ಇಲ್ಲ. ಹೀಗೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಬಿಸಿಯೂಟ ತಯಾರಕರು,
ಭಾನುವಾರದಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದರು. ಬಿಸಿಯೂಟ ತಯಾರಕರ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಕೆಲಸ ಖಾಯಂಗೊಳಿಸಬೇಕು. ವಿಮೆ, ಇಎಸ್‌ಐ, ಪಿಎಫ್ ನೀಡಬೇಕು. ತಮಿಳುನಾಡು ರೀತಿಯಲ್ಲಿ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು. ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣ ಗೊಳಿಸಬಾರದು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಸೋಮವಾರ ಮಧ್ಯಾಹ್ನ ಎಐಟಿಯುಸಿ ನಿಯೋಗವನ್ನು ಗೃಹ ಕಚೇರಿ ಕೃಷ್ಣಾಗೆ ಆಹ್ವಾನಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಎಲ್ಲ ಸಮಸ್ಯೆಯನ್ನು ಆಲಿಸಿದರು. ಈ ಸಂಬಂಧ ಸುದೀರ್ಘ‌ ಚರ್ಚೆ ನಡೆಸಲು ಬೆಳಗಾವಿ ಅಧಿವೇಶನದ ನಂತರ ಸಭೆ ಕರೆಯುವುದಾಗಿ ಭರವಸೆ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಬಿಸಿಯೂಟ ತಯಾರಕರ ಸಮಸ್ಯೆಗಳ ಕುರಿತು ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿಯವರು ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ. ಸೂಕ್ತ ರೀತಿ ಪರಿಹಾರ ದೊರೆಯದಿದ್ದರೆ ಮತ್ತೆ ರಸ್ತೆಗೆ ಇಳಿಯಲಿದ್ದೇವೆ ಎಂದು ತಿಳಿಸಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಮಾಜಿ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಸೇರಿ ವಿವಿಧ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ನೀಡಿಲ್ಲ. ಆಶ್ವಾಸನೆ ನೀಡಿ ಮೋಸ ಮಾಡಿದ್ದಾರೆ. ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನಾ ಧರಣಿ ಮುಂದುವರಿಯಲಿದೆ ಎಂದು ಬಿಸಿಯೂಟ ಕಾರ್ಯಕರ್ತೆಯರ ರಾಜ್ಯ ಸಂಘಟನೆಯ ರುದ್ರಮ್ಮ ಬೆಳಲ್ಗೆರೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next