ಬೆಂಗಳೂರು: ಮೇ 12 ರ ವರೆಗೆ ಜನತಾ ಕರ್ಫ್ಯೂ ಇರಲಿದ್ದು, ಲಾಕ್ ಡೌನ್ ಮುಂದುವರೆಸುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ( ಮಂಗಳವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ವಿಸ್ತರಣೆ ಇಲ್ಲ ಎಂದಿದ್ದಾರೆ.
ಜನತಾ ಕರ್ಫ್ಯೂ ಜಾರಿಯಾದ ಮೇಲೆಯೂ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಇಂದು ಸಚಿವ ಸಭೆ ಕರೆದ ಯಡಿಯೂರಪ್ಪನವರು, ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವುದೇ ಬೇಡವೋ ಎಂಬುದರ ಬಗ್ಗೆ ಚರ್ಚಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ. ಹಾಲಿ ಇರುವ ಕರ್ಫ್ಯೂ ಮುಂದುವರೆಯಲಿದೆ. ಪ್ರತಿಯೊಂದು ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಹೊಣೆ ಹೊರಬೇಕು. ರಾಜ್ಯಕ್ಕೆ ಅಗತ್ಯ ಆಕ್ಸಿಜನ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಲ್ಲಾ ಪತ್ರಕರ್ತರಿಗೂ ಲಸಿಕೆ ನೀಡುವುದಾಗಿ ಸಿಎಂ ತಿಳಿಸಿದರು.