Advertisement

ಸಿಎಂ 1 ಲಕ್ಷ ವಸತಿ ಯೋಜನೆಗೆ ಅಲೆದಾಟ; ಫ‌ಲಾನುಭವಿಗಳಿಗೆ ಅರ್ಹತೆಗಳೇನು ?

02:48 PM Jun 03, 2023 | Team Udayavani |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆಂದು ರೂಪಿಸಲಾದ ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ವಸತಿ ಯೋಜನೆ ಗೊಂದಲದ ಗೂಡಾಗಿದ್ದು, ನಿತ್ಯ ಹತ್ತಾರು ಮಂದಿ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ
ಕಚೇರಿಗೆ ಭೇಟಿ ನೀಡಿ ಬರಿಗೈಯಲ್ಲಿ ಹಿಂತಿರುಗುತ್ತಿದ್ದಾರೆ.

Advertisement

ಹೌದು, ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿಗಳ 1 ಲಕ್ಷ ಬೆಂಗ ಳೂರು ವಸತಿ ಯೋಜನೆಯು ಅನುಷ್ಠಾನಗೊಂಡಿದ್ದು , ಆರಂಭದಲ್ಲಿ ಜನ ಸಾಮಾನ್ಯರಿಗೆ ಸ್ಪಂದಿಸಿ ಹಲವು ಪ್ಲ್ರಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಕಳೆದ 4 ತಿಂಗಳುಗಳಿಂದ ಈ ಯೋಜನೆಯು ಜನ ಸಾಮಾನ್ಯರಿಗೆ ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ. 2022ರ ಡಿಸೆಂಬರ್‌ನಲ್ಲಿ ಯೋಜನೆಯಡಿ ಪ್ಲ್ರಾಟ್‌ ಬೇಕಾಗಿರುವವರು ಅರ್ಜಿ ಸಲ್ಲಿಸಿ ಎಂದು ನಿಗಮ ಸೂಚಿಸಿತ್ತು.

ಅದರಂತೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದರು. ಇದೀಗ 2 ಬಿಎಚ್‌ಕೆ ಫ್ಲ್ಯಾಟ್‌ ಬೇಕಾದ ಎಲ್ಲರೂ ತಾವು ಈ ಹಿಂದೆ ಸಲ್ಲಿಸಿರುವ ಅರ್ಜಿ ರದ್ದುಪಡಿಸಿ ಹೊಸ ಅರ್ಜಿ ಸಲ್ಲಿಸಬೇಕು. 1 ಬಿಎಚ್‌ಕೆಗೆ ಅರ್ಜಿ ಸಲ್ಲಿಸಿರುವ ಕೆಲ ಫ‌ಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.
ಇದೀಗ 700ಕ್ಕೂ ಅಧಿಕ ಫ‌ಲಾನುಭವಿಗಳು ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಕಚೇರಿಗೆ ಭೇಟಿ
ಕೊಟ್ಟು ತಾವು ಸಲ್ಲಿಸಿರುವ ಅರ್ಜಿ ರದ್ದು ಗೊಳಿಸಬೇಕಾಗಿದೆ.

ಆದರೆ, ನಿಗಮದ ಅಧಿಕಾರಿಗಳು ಸಾಫ್ಟ್ ವೇರ್‌ ಸರಿಯಿಲ್ಲ. ಸರ್ವರ್‌ ಡೌನ್‌ ಎಂಬ ಸಬೂಬು ಹೇಳಿ ಫ‌ಲಾನುಭವಿ ಗಳನ್ನು ವಾಪಸ್‌ ಕಳುಹಿಸುತ್ತಿದ್ದಾರೆ. ಪ್ರತಿ ದಿನ ಹತ್ತಾರು ಮಂದಿ ಇಲ್ಲಿಗೆ ಭೇಟಿ ಕೊಟ್ಟು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು, ಅಧಿಕಾರಿಗಳು ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಭರವಸೆಯಲ್ಲೇ ದಿನ ದೂಡುತ್ತಿದ್ದಾರೆ ಎಂದು ಹತ್ತಾರು ಫ‌ಲಾನುಭವಿಗಳು ಉದಯವಾಣಿ ಜತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಿಎಂ 1 ಲಕ್ಷ ವಸತಿ ಯೋಜನೆಗೆ ಅನುದಾನ: ಬೆಂಗಳೂರು ವಸತಿ ಯೋಜನೆಯಡಿ ವಸತಿ ಕಲ್ಪಿಸಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆ “ಸರ್ವರಿಗೂ ಸೂರು’ ಅಭಿಯಾನದಡಿ ಅನುದಾನದ ಮೊತ್ತವನ್ನು ಸಂಯೋಜಿಸಿಕೊಳ್ಳಲಾಗುತ್ತದೆ. ಫ‌ಲಾನುಭವಿ ವಂತಿಗೆಯೊಂದಿಗೆ ಈ ಯೋಜನೆಯಡಿ ಬಹುಮಹಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ 14 ವಿವಿಧ ಯೋಜನಾ ಸ್ಥಳಗಳಲ್ಲಿ ಸ್ಥಳಗಳಲ್ಲಿ 4,789 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಫ‌ಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ರಿಯಾಯಿತಿ ದರದಲ್ಲಿ ವಸತಿ ಆಯ್ಕೆಗಳನ್ನು ಒದಗಿಸುತ್ತದೆ. ಫ‌ಲಾನುಭವಿಯ ಜಾತಿ ಮತ್ತು ವರ್ಗವನ್ನು ಅವಲಂಬಿಸಿ 2.70 ಲಕ್ಷ ರೂ.ಗಳಿಂದ 3.50 ಲಕ್ಷ ರೂ.ಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ.

Advertisement

ಎಲ್ಲೆಲ್ಲಿ ಮನೆ ನಿರ್ಮಾಣ?: ಕೆ.ಆರ್‌.ಪುರದ ಹೊರಮಾವು ಅಗರ, ಕ್ಯಾಲಸನಹಳ್ಳಿ, ಮಹದೇವಪುರದ ಬಿದರಹಳ್ಳಿ, ಕೊಡತಿ, ಮಂಡೂರು, ನಿಂಬೇಕಾಯಿಪುರ, ಆನೇಕಲ್‌ನ ಕೂಗೂರು, ಕೂಡ್ಲು, ಆನೇಕಲ್‌., ಲಿಂಗಾಪುರ, ಚಿಕ್ಕನಹಳ್ಳಿ, ಗೂಳಿ ಮಂಗಲ, ಕೆಂಗೇರಿಯ ದೇವಗೆರೆ, ಮುದ್ದಯ್ಯನ ಪಾಳ್ಯ, ಕೆಂಚಪುರ, ಮಾಳಿಗೊಂಡನಹಳ್ಳಿ,
ಉತ್ತರಹಳ್ಳಿಯ ನೆಲಗುಳಿ, ಬ್ಯಾಟರಾಯನಪುರದ ಗುದುರೆಗೆರೆ, ಯಲಹಂಕದ ಸಾದೇನಹಳ್ಳಿ ಸೇರಿ ಬೆಂಗಳೂರು ಗ್ರಾಮಾಂತರ ಪ್ರದೇಶದ ಕೆಲವೆಡೆ ಮೊದಲ ಹಂತದ ಮನೆ ನಿರ್ಮಾಣವಾಗುತ್ತಿದೆ.

ಫ್ಲ್ಯಾಟ್‌ಗಳಲ್ಲಿ ಸುಸಜ್ಜಿತ ಸೌಲಭ್ಯ
ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ವಸತಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಫ್ಲ್ಯಾಟ್‌ಗಳು ಮೂಲಭೂತ ಸೌಕರ್ಯ ಹೊಂದಿದೆ. ಕಾಂಪೌಂಡ್‌, ಒಳರಸ್ತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಇತರೆ ವ್ಯವಸ್ಥಿತವಾದ ಸೌಲಭ್ಯ ಒದಗಿಸಲಾಗಿದೆ. ಎಲ್ಲ ಮನೆಗಳಿಗೂ ಕಾವೇರಿ ನೀರು ಅಥವಾ ಬೋರ್‌ವೆಲ್‌ ವ್ಯವಸ್ಥೆಯನ್ನು ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ.

ಮೊದಲು ಅರ್ಜಿ ಸಲ್ಲಿಸಿದರೆ ನಂತರ 1 ಅಥವಾ 2 ಬಿಎಚ್‌ಕೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದ ನಿಗಮದ ಅಧಿಕಾರಿಗಳು ಇದೀಗ ವರಸೆ ಬದಲಿಸಿ ಹೊಸ ಅರ್ಜಿ ಸಲ್ಲಿಸಲು ಹೇಳಿದ್ದಾರೆ. ಹಲವು ಬಾರಿ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಕಚೇರಿಗೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಸುಬ್ರಹ್ಮಣ್ಯ, ಫ‌ಲಾನುಭವಿ

ಫ‌ಲಾನುಭವಿಗಳಿಗೆ ಅರ್ಹತೆಗಳೇನು ?
– ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷ ನೆಲೆಸಿರಬೇಕು.
– ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಹೊಂದಿರಬೇಕು.
– ಆಧಾರ್‌ಕಾರ್ಡ್‌ ಸೇರಿ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.
– ಮುಖ್ಯವಾಗಿ ಗಾರ್ಮೆಂಟ್ಸ್‌ ಕೆಲಸಗಾರರು, ಆಟೋಚಾಲಕರು, ಬೀಡಿ ಕಟ್ಟುವವರು, ಹಾಲು ಹಾಕುವವರು, ಪೇಪರ್‌ ಬಾಯ್, ತರಕಾರಿ ಮಾರುವವರು ಈ ಸೌಲಭ್ಯ ಪಡೆಯಬಹುದು.

-ಅವಿನಾಶ ಮೂಡಂಬಿಕಾನ

 

Advertisement

Udayavani is now on Telegram. Click here to join our channel and stay updated with the latest news.

Next