ಬೆಂಗಳೂರು: ಮೇಯರ್ ಆಯ್ಕೆ, ಪಕ್ಷದಿಂದ ಉಚ್ಛಾಟನೆಯಾಗಿರುವವರಿಗೆ ಉನ್ನತ ಹುದ್ದೆ ನೀಡಿರುವುದು ಸಹಿತವಾಗಿ ಪಕ್ಷದ ಕೆಲವು ನಿರ್ಧಾರಗಳನ್ನು ತಮ್ಮನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಮಾಡುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಗುರುವಾರ ಬೆಳಗ್ಗೆ ನಗರದ ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೆ, ಸಿಎಂ ಭೇಟಿಗೂ ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿಯೇ ಬಂದಿದ್ದರು ಮತ್ತು ತುರ್ತಾಗಿಯೇ ಮುಖ್ಯಮಂತ್ರಿ ಮನೆಯಿಂದ ರಾಜ್ಯಾಧ್ಯಕ್ಷರು ಹೊರಟು ಹೋಗಿದ್ದಾರೆ ಎಂದು ಹೇಳಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹೊರ ಬಂದ ನಳಿನ್ ಕುಮಾರ್ ಕಟೀಲು ಅವರು ಕೆಲಹೊತ್ತು ಮಾಧ್ಯಮಕ್ಕೂ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಸೌಹಾರ್ದದ ಭೇಟಿಯ ವೇಳೆಯಲ್ಲಿ ಮುಖ್ಯಮಂತ್ರಿಯವರು ರಾಜ್ಯಾಧ್ಯಕ್ಷರ ವಿರುದ್ಧ ಪಕ್ಷದ ಕೆಲವೊಂದು ನಿರ್ಧಾರಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಪಕ್ಷದಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುವಾಗ ನನ್ನನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡುತ್ತಿದ್ದೀರಿ, ಪದಾಧಿಕಾರಿಗಳ ನೇಮಕಾತಿ, ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆ ಸೇರಿದಂತೆ ಕೆಲವು ತೀರ್ಮಾನಗಳಲ್ಲಿ ದುರುದ್ದೇಶಪೂರ್ವಕವಾಗಿ ನನ್ನನ್ನು ದೂರ ಇಟ್ಟಿದ್ದೀರಿ. ಇಷ್ಟು ನಿರ್ಲಕ್ಷ್ಯ ಮಾಡಿ ಪಕ್ಷ ಕಟ್ಟುತ್ತೇನೆ ಎಂಬ ಭ್ರಮೆ ಬೇಡ ಎಂದು ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನಿರ್ಮಲ್ ಕುಮಾರ್ ಸುರಾನ, ಭಾನುಪ್ರಕಾಶ್ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡಿರುವುದು, ಬಿಬಿಎಂಪಿ ಚುನಾವಣೆಯಲ್ಲಿ ಶಾಸಕರು, ಲೋಕಸಭಾ ಸದಸ್ಯರು, ರಾಜ್ಯಸಭೆ ಮತ್ತು ವಿಧಾನಪರಿಷತ್ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲು ಸಮಿತಿ ರಚನೆಗೆ ಸೂಚಿಸಲಾಗಿತ್ತು. ಸಮಿತಿ ರಚನೆ ಮಾಡದೇ ಆಯ್ಕೆ ಮಾಡಿರುವುದಕ್ಕೆ ಅಸಮಾಧಾನ ಹೊರ ಹಾಕಿ, ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.