Advertisement

ಸುಮಲತಾ ಶರವೇಗಕ್ಕೆ ಕಡಿವಾಣ ಹಾಕಲು ಸಿಎಂ ತಂತ್ರ

11:40 AM Apr 10, 2019 | keerthan |

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ಚುನಾವಣಾ ಶರವೇಗಕ್ಕೆ
ಕಡಿವಾಣ ಹಾಕಲು ನಿರ್ಧರಿಸಿರುವ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಪುತ್ರನ ಗೆಲುವಿಗೆ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ.

Advertisement

ಮಂಡ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿರುವ ರಾಜಕೀಯ ,ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜೆಡಿಎಸ್‌ಗೆ ಹಿನ್ನಡೆಯಾಗುವ ಖಚಿತತೆ ಅರಿತು ಭಾನುವಾರ ರಹಸ್ಯ ಸಭೆ ನಡೆಸಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದ್ದಾರೆ.

ಮತಬ್ಯಾಂಕ್‌ ಭದ್ರತೆ: ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್‌ನ ವರ್ಚಸ್ಸು ಕುಗ್ಗುತ್ತಿರುವುದರಿಂದ ಯುಗಾದಿ ಹಬ್ಬದ ಬಳಿಕ,ಚುನಾವಣಾ ತಂತ್ರಗಾರಿಕೆಯ ಅಂತಿಮ ಘಟ್ಟದ ಕಾರ್ಯಾಚರಣೆ ಆರಂಭಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಬೇರು ಮಟ್ಟದಿಂದ ಮತ ಬ್ಯಾಂಕ್‌ನ್ನು ಭದ್ರಪಡಿಸಿ ಕೊಳ್ಳುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದುವರೆಗೂ ಮೇಲ್ಮಟ್ಟದ ನಾಯಕರನ್ನೇ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಜೆಡಿಎಸ್‌, ಈಗ ಸ್ಥಳೀಯ ನಾಯಕರ
ಮೂಲಕ ಮತದಾರರನ್ನು ಓಲೈಸುವ ತಂತ್ರಕ್ಕೆ ಮುಂದಾಗಿದೆ. ಅಲ್ಲದೆ, ಗ್ರಾಮ ಮುಖಂಡರ ಮೂಲಕ ಜೆಡಿಎಸ್‌ ವೋಟ್‌ಬ್ಯಾಂಕ್‌ನ್ನು,ಸಂಘಟಿಸುವ ಪ್ರಯತ್ನ ನಡೆಸಲು ತೀರ್ಮಾನಿಸಿದೆ.

ವೇಗಕ್ಕೆ ಕಡಿವಾಣ: ಎಲ್ಲ ಶಾಸಕರಿಗೂ ಸ್ಪಷ್ಟ ಸಂದೇಶ ರವಾನಿಸಿರುವ ಕುಮಾರಸ್ವಾಮಿ, ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಬೇಕು. ಒಮ್ಮೆ
ಹಿನ್ನಡೆ ಇದ್ದರೆ ಚುನಾವಣೆ ವೇಳೆಗೆ ಸರಿ ಪಡಿಸಬೇಕೆಂಬ ವಿಚಾರವನ್ನು
ತಿಳಿಸಿದ್ದಾರೆ. ವಿರೋಧಿ ಅಭ್ಯರ್ಥಿಯ ಹಣ ಮತ್ತು ಹೆಂಡದ ಹಂಚಿಕೆ ತಡೆಗಟ್ಟಲು ನಿಗಾ ವಹಿಸುವುದು. ಈ ಬಗ್ಗೆ ಯಾವುದೇ ಮಾಹಿತಿ
ಸಿಕ್ಕರೂ ಪೊಲೀಸರಿಗೆ ತಿಳಿಸುವ ಮೂಲಕ ಅವರ ಚುನಾವಣಾ ಅಕ್ರಮಗಳನ್ನು ತಡೆದು ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಸೂಕ್ಷ್ಮವಾಗಿಯೇ ತಿಳಿಸಿದ್ದಾರೆ ಎಂದು ಗೊತ್ತಾಗಿದೆ. ಜೆಡಿಎಸ್‌ನಿಂದ ,ಹಂಚಿಕೆಯಾಗುವ ಹಣ, ಮದ್ಯ ಹಂಚಿಕೆಗೆ ಸ್ವತಃ ತಾವೇ ಜವಾಬ್ದಾರಿ ವಹಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಅವರು, ಪೊಲೀಸರ ಸಹಕಾರದೊಂದಿಗೆ ಹಣ ಮದ್ಯದ ಹಂಚಿಕೆಗೆ ಅವಕಾಶ ಕಲ್ಪಿಸುವ ಭರವಸೆಯನ್ನು ಶಾಸಕರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Advertisement

ನಿಖೀಲ್‌ ಗೆಲುವಿಗೆ ಕಾರ್ಯತಂತ್ರ: ಮಾಜಿ ಶಾಸಕರು ಹಾಗೂ ಪ್ರಮುಖ ಮುಖಂಡರು ಸುಮಲತಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳದೆ ತೆರೆಮರೆಯಲ್ಲಿ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಬಲಿಗರು
ನಡೆಸುತ್ತಿರುವ ಕಾರ್ಯತಂತ್ರದ ಬಗ್ಗೆ ಮಾಹಿತಿ ತಲುಪಿಸುವಂತೆ ಶಾಸಕರಿಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಪುತ್ರ ನಿಖೀಲ್‌ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವ ಕುಮಾರಸ್ವಾಮಿ, ಅಸಂಘಟಿತ ಜೆಡಿಎಸ್‌ ಕಾರ್ಯಕರ್ತರನ್ನು ಒಗ್ಗೂಡಿಸಿ ಆ ಮೂಲಕ ಎದುರಾಳಿಗೆ ತಕ್ಕ ಉತ್ತರ ನೀಡುವ ಕಾರ್ಯತಂತ್ರ ರೂಪಿಸಿದ್ದಾರೆ. ಜೆಡಿಎಸ್‌ ಬಗ್ಗೆ ತಿರಸ್ಕಾರದ ಮನೋಭಾವ ಹೊಂದಿರುವ ಕಾಂಗ್ರೆಸ್‌ ಮಾಜಿ ಶಾಸಕರನ್ನು ಹೊರಗಿಟ್ಟೇ ಅಂತಿಮ ಹಂತದ ಚುನಾವಣೆ ಕಾರ್ಯಾ ಚರಣೆಯನ್ನು ಪರಿಣಾಮಕಾರಿಯಾಗಿ ನಡೆಸಿ ಚಕ್ರವ್ಯೂಹ ಬೇಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇಂದಿನಿಂದ ಸಿಎಂ ಪ್ರಚಾರ ಮಂಡ್ಯ: ಮಂಡ್ಯ ಲೋಕಸಮರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪುತ್ರ ನಿಖೀಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ ಬುಧವಾರದಿಂದ ಎರಡು ದಿನ ಕಾಲ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಎರಡು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಕುಮಾರಸ್ವಾಮಿ ಬುಧವಾರ ಶ್ರೀರಂಗಪಟ್ಟಣದಲ್ಲಿ ಗುರುವಾರ ಮದ್ದೂರು ಮತ್ತು ಮಳವಳ್ಳಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಗುರುವಾರ ಮಂಡ್ಯದಲ್ಲಿ ನಡೆಯಲಿರುವ ಬಹಿರಂಗ ಸಭೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆಗಮಿಸಲಿದ್ದು, ಅಂದೂ ಕೂಡ ಸಿಎಂ ಕುಮಾರಸ್ವಾಮಿ ರಾಹುಲ್‌ ಜೊತೆ ಪ್ರಚಾರ ನಡೆಸುವರು. 12 ಮತ್ತು 15ರಂದು ಮೇಲುಕೋಟೆ ಮತ್ತು ಕೆ.ಆರ್‌. ಪೇಟೆಯಲ್ಲಿ ಪ್ರಚಾರ ಮಾಡಲಿರುವ ಕುಮಾರಸ್ವಾಮಿ, 16ರಂದು ನಾಗಮಂಗಲ ಮತ್ತು ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next