Advertisement

ಅಹಿಂದ ದೂರ ಭೀತಿ; ಆತಂಕ ತೋಡಿಕೊಂಡ ಸಿಎಂ ಸಿದ್ದರಾಮಯ್ಯ

06:00 AM Mar 13, 2018 | Team Udayavani |

ಬಾಗಲಕೋಟೆ: ಅಹಿಂದದಿಂದಲೇ ರಾಜಕೀಯ ಪುನರ್ಜನ್ಮ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಅಹಿಂದ ಹಾಗೂ ಉಳಿದ ವರ್ಗದವರು ತಮ್ಮಿಂದ ದೂರವಾಗುತ್ತಾರೆ ಎಂಬ ಭಯ ಕಾಡುತ್ತಿದೆಯೇ?

Advertisement

ನವನಗರದ ಅಂಜುಮನ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ವೃತ್ತಿ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಅಹಿಂದ ಪರವಾಗಿದ್ದೇನೆಂದು ರಾಜ್ಯಾದ್ಯಂತ ಬಿಂಬಿಸಲಾಗುತ್ತಿದೆ. ಆ ಮೂಲಕ ಎಲ್ಲಿ ಅಹಿಂದದವರು ಮತ್ತು ಉಳಿದ ವರ್ಗದವರೂ ನನ್ನ ಕೈ ಬಿಡುತ್ತಾರೆಂಬ ಭಯ ನನಗೆ ಆಗಾಗ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತ ಅಹಿಂದವರು, ಅತ್ತ ಉಳಿದ ವರ್ಗದವರನ್ನು ನಮ್ಮಿಂದ ದೂರ ಮಾಡಲು ತಂತ್ರ ನಡೆದಿದೆ. ಅಹಿಂದ ಪರ ಎಂದು ಬಿಂಬಿಸಿದಾಗ ಉಳಿದ ವರ್ಗದವರು ನಮ್ಮ ಕೈ ಬಿಡುತ್ತಾರೆ ಎಂಬುದು ವಿರೋಧಿಗಳ ತಂತ್ರ. ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದವರು ಹಾಗೂ ಎಲ್ಲ ಸಮಾಜದಲ್ಲಿ ಇರುವ ಕಾಯಕ ವರ್ಗಗಳನ್ನು ಮೇಲೆತ್ತಲು ಹಲವಾರು ಯೋಜನೆ ಜಾರಿಗೊಳಿಸಿದ್ದೇನೆ. ಆದರೂ ನಾನು ಅಹಿಂದ ಪರ ವೆಂದು ಉಳಿದ ವರ್ಗದವರನ್ನು ನನ್ನಿಂದ ದೂರ ಮಾಡುವ ಯತ್ನ ನಡೆಯುತ್ತಲೇ ಇದೆ. ವಿರೋಧಿಗಳು ಇಂಥ ಯಾವುದೇ ರಾಜಕೀಯ ತಂತ್ರ ನಡೆಸಿದರೂ ನಾನು ಬಗ್ಗುವುದಿಲ್ಲ, ನನ್ನ ನಿರ್ಧಾರ ಕೈಬಿಡುವುದಿಲ್ಲ. ಅಹಿಂದದವರ ಜತೆ ಇತರೆ ವರ್ಗದವರ ಕಲ್ಯಾಣಕ್ಕೂ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನು ಹಿಂದುಳಿದವರ, ಶೋಷಿತರ ಪರವಾಗಿ ಕೆಲಸ ಮಾಡಿದ್ದೇನೆ. ಬ್ರಾಹ್ಮಣ ಸಮಾಜದಲ್ಲೂ ಬಡವರಿದ್ದಾರೆ. ಎಲ್ಲಾ ವರ್ಗಗಳಲ್ಲಿ ಇರುವ ಬಡವರಿಗಾಗಿ ನಾನು ದುಡಿದಿದ್ದೇನೆ. ಶೋಷಿತರು, ಹಿಂದುಳಿದವರು ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಬಲರಾಗಬೇಕು. ಅದಕ್ಕಾಗಿ ನನ್ನಂತಹ ಹಿಂದುಳಿದವರಿಗೆ ಅಧಿಕಾರ ಸಿಕ್ಕಾಗ ಸಾಧ್ಯ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಬಲಾಡ್ಯರ ಕೈಗೆ ಅಧಿಕಾರ ಸಿಕ್ಕರೆ ಅದು ಸಾಧ್ಯವಾಗಲ್ಲ. ಡೋಂಗಿ ರಾಜಕಾರಣ ಮಾಡುವವರಿಂದ ಎಲ್ಲ ವರ್ಗದ ಜನರೂ ಎಚ್ಚರಿಕೆಯಿಂದ ಇರಬೇಕು ಎಂದರು.

ನಾನು ಹಿಂದೂ ವಿರೋಧಿಯಲ್ಲ
ನಾನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಅಕ್ಕಮಹಾದೇವಿ, ವೇಮನ, ಟಿಪ್ಪು ಸುಲ್ತಾನ್‌, ಸೇವಾಲಾಲ್‌ ಹೀಗೆ ಹಲವು ಮಹಾ ಪುರುಷರ ಜಯಂತಿ ಮಾಡಿದ್ದೇನೆ. ನಾನು ಹಿಂದೂ ವಿರೋಧಿ ಎನ್ನುವವರು ಅಧಿಕಾರದಲ್ಲಿ ಇದ್ದಾಗ ಇಂತಹ ಮಹಾನ್‌ ವ್ಯಕ್ತಿಗಳ ಜಯಂತಿ ಏಕೆ ಮಾಡಲಿಲ್ಲ. ಹಿಂದೂ ವಿರೋಧಿ ಎಂದು ಬಿಂಬಿಸುವವರು ತಿಳಿದುಕೊಳ್ಳಲಿ. ನಾನು ಹಿಂದೂ ಅಲ್ವಾ? ಹಿಂದೂ ಹಿಂದೂ ಎಂದು ಜಾತಿ ರಾಜಕಾರಣ ಮಾಡುತ್ತಿರುವವರು, ಅಧಿಕಾರಕ್ಕೆ ಬರುವವರೆಗೂ ಹಿಂದೂ ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳೆಲ್ಲ ಹಿಂದೆ ಇರಿ ಎಂದು ಇವರು ಮುಂದೆ ಹೋಗುತ್ತಾರೆ. ಇದೇ ಇವರ ಡೋಂಗಿ ರಾಜಕಾರಣ. ಇಂತಹ ಡೋಂಗಿ ರಾಜಕಾರಣಿಗಳನ್ನು ನಂಬಬೇಡಿ ಎಂದರು.

Advertisement

ಭಯ ಬೇಡ ನಾವಿದ್ದೇವೆ
ಅಹಿಂದ ವರ್ಗ ಮತ್ತು ಉಳಿದ ವರ್ಗಗಳ ಮಧ್ಯೆ ನನಗೆ ಕೆಲವೊಮ್ಮೆ ಭಯ ಕಾಡ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದಾಗ ವೇದಿಕೆ ಮೇಲಿದ್ದ ಉಮಾಶ್ರೀ, ನಿಮಗೆ ಭಯ ಬೇಡ. ನಾವೆಲ್ಲ (ನೇಕಾರರು) ನಿಮ್ಮೊಂದಿಗೆ ಇದ್ದೇವೆ ಎಂದರು. ನಿನಗೆ ಗೊತ್ತಾಗಲ್ಲ ಇರಮ್ಮ ಎಂದು ಸಿಎಂ ಹೇಳಿದಾಗ, ಎದ್ದು ನಿಂತ ಉಮಾಶ್ರೀ, ನೀವೆಲ್ಲ ಸಿದ್ದರಾಮಯ್ಯ ಅವರೊಂದಿಗೆ ಇದ್ದೀರಲ್ವಾ ಎಂದು ಮೈಕ್‌ ಮುಂದೆ ಬಂದು ಕೇಳಿದರು. ಆಗ ಜನರು ಸಿಎಂಗೆ ಜಯಕಾರ ಕೂಗಿದರು. ಸಮಾವೇಶ ಮುಗಿಸಿ ನಿರ್ಗಮಿಸುವ ವೇಳೆ ಮತ್ತೆ ಮೈಕ್‌ ಎದುರಿಗೆ ಬಂದ ಸಿದ್ದರಾಮಯ್ಯ, ನೀವೆಲ್ಲ ನಮ್ಮೊಂದಿಗೆ ಇದ್ದೀರಲ್ವಾ ಎಂದು ಪ್ರಶ್ನಿಸಿದರು. ಆಗ ಜನರು ಘೋಷಣೆ ಕೂಗಿದಾಗ ಗೆಲುವಿನ ಸಂಕೇತದ ಕೈ ತೋರಿಸಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next