ಮೈಸೂರು: ನಾನು ಕಾಂಗ್ರೆಸ್ ಸೇರ್ಪಡೆಯಾಗಲು ರಾಜ್ಯದ ಕಾಂಗ್ರೆಸ್ ನಾಯಕರು ಯಾರೂ ನೆರವು ನೀಡಿರಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಮಾಜಿ ಸಚಿವ ,ಹಿರಿಯ ಕಾಂಗ್ರೆಸಿಗ ಎಚ್ .ವಿಶ್ವನಾಥ್ ಕಿಡಿ ಕಾರಿದ್ದಾರೆ.
ಭಾನುವಾರ ಸುªದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಅಪಮಾನ ಮಾಡಿದ್ದಾರೆ. ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಾನೊಬ್ಬ ದೊಡ್ಡ ಸುಳ್ಳುಗಾರ ಅನ್ನುವುದನ್ನು ತೋರಿಸಿದ್ದಾರೆ. ಅವರ ಹೇಳಿಕೆ ಹಾಸ್ಯಾಸ್ಪದ.ರಾಜ್ಯ ನಾಯಕರ ಸಮ್ಮತಿ ಇಲ್ಲದೆ,ಕೆಪಿಸಿಸಿ ಸಮ್ಮತಿಯಿಲ್ಲದೆ ಯಾರೂ ಪಕ್ಷ ಸೇರುವುದಕ್ಕೆ ಸಾಧ್ಯವಿಲ್ಲ ಅನ್ನುವ ಕಾಮನ್‍ಸೆನ್ಸ್ ಕೂಡ ಮುಖ್ಯಮಂತ್ರಿಯಾದರಿಗೆ ಇಲ್ವಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗಿಂತ ರಾಜಕೀಯದಲ್ಲಿ ಹಿರಿಯವನಾಗಿದ್ದೇನೆ. ನಾನು ವಿದ್ಯಾರ್ಥಿ ದಿಸೆಯಿಂದಲೇ ಇಂದಿರಾಗಾಂಧಿ,ದೇವರಾಜ ಅರಸು ಸೇರಿದಂತೆ ಹಿರಿಯ ನಾಯಕರ ಜೊತೆ ರಾಜಕೀಯ ಅನುಭವ ಹೊಂದಿ ಕಳೆದ ನಾಲ್ಕು ದಶಕಗಳಿಂದ ಯಾವುದೇ ಕಪ್ಪು ಚುಕ್ಕೆಗಳಿಲ್ಲದೇ ರಾಜಕಾರಣ ಮಾಡಿದ್ದೇನೆ. ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಅವರಿಂದ ರಾಜಕಾರಣಕ್ಕೆ ಬಂದವರು. 1978 ರಲ್ಲಿ ನಾನು ಶಾಸಕನಾದೆ. ಆ ವೇಳೆ ಸಿದ್ದರಾಮಯ್ಯನವರು ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಬಹುತೇಕ ವರ್ಷ ನಾವಿಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ರಾಜಕೀಯ ಮಾಡಿಕೊಂಡಿದ್ದೆವು ಎನ್ನುವುದು ನೆನಪಿರಲಿ. ಅವರು ಕಾಂಗ್ರೆಸ್ ಸೇರಿದ ಬಳಿಕ ಪರಸ್ಪರ ಜೊತೆಯಾದೆವು. ರಾಜ್ಯ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇಲೆಯೇ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದು ಎನ್ನುವುದು ನೆನಪಿರಲಿ ಎಂದರು.
ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರ ಏನು? ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಮ್ಮೆ ಹೆಲಿಕಾಪ್ಟರ್ ನಲ್ಲಿ ಜೊತೆಯಾಗಿ ಸುತ್ತೂರಿಗೆ ಬರುವಾಗ ಏನೇನು ಮಾತಾಡಿಕೊಂಡಿದ್ದರು ಎನ್ನುವುದು ಗೊತ್ತಿದೆ. ಮುಂದಿನ ದಿನದಲ್ಲಿ ಆ ವಿಚಾರ ಬಹಿರಂಗವಾಗುತ್ತೆ ಎಂದು ಕುತೂಹಲ ಮೂಡಿಸಿದರು.
ಉಪ ಚುನಾವಣೆ ಗೆಲುವಿನ ಬಳಿಕ ಸಿದ್ದರಾಮಯ್ಯ ಅವರು ಮನುಷ್ಯರ ರೀತಿ ವರ್ತಿಸುತ್ತಿಲ್ಲ. ನಾನು ಎಂಬ ಅಹಂಕಾರ ಅವರಲ್ಲಿ ತುಂಬಿದೆ ಎಂದು ಕೆಂಡ ಕಾರಿದರು.