Advertisement

CM Siddaramaiah: ಮುಡಾದಲ್ಲಿ ಮಾಡಿದ ಪಾಪ ಅಳಿಸಿ ಹೋಗುತ್ತದೆಯೇ: ಸಿ.ಟಿ.ರವಿ

12:28 AM Aug 28, 2024 | Team Udayavani |

ಬೆಂಗಳೂರು: ಕಾಂಗ್ರೆಸಿಗರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ತಮ್ಮ ಜವಾಬ್ದಾರಿಯ ಅರಿವಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಯುವುದು ಸಹಜ. ಆದರೆ, ಇವರು ಭ್ರಷ್ಟಾಚಾರದ ಸಮರ್ಥನೆಗಾಗಿ ಜೋರು ಬಾಯಿ ಮಾಡಲು ಹೊರಟಿದ್ದಾರೆ. ಹಾಗೆ ಮಾಡಿದಾಕ್ಷಣ ಮುಡಾದಲ್ಲಿ ಇವರು ಮಾಡಿದ ಪಾಪ ಅಳಿಸಿ ಹೋಗುತ್ತದೆಯೇ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ 40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯರಿಂದ ಮಾತ್ರ ಇಂತಹ ಸಮರ್ಥನೆಗಳು ಸಾಧ್ಯ. ಎಲ್ಲ ನಿಯಮ ಮೀರಿ ನಿವೇಶನ ಪಡೆದು, ಅದು ಸರಿ ಎಂದು ವಾದಿಸಿ ದಕ್ಕಿಸಿಕೊಳ್ಳಲು ಬೇರೆ ಯಾರಿಗಾದರೂ ಸಾಧ್ಯವೇ? 2005ರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಪಡೆದ ಭೂಮಿಗೆ 62 ಕೋಟಿ ರೂ. ಕೇಳಲು ಅವರನ್ನು ಬಿಟ್ಟು ಇನ್ಯಾರಿಗಾದರೂ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಸರ್ಫ್‌ ಎಕ್ಸೆಲ್‌, ಏರಿಯಲ್‌ ಹಾಕಿದರೂ ಕಪ್ಪು ಹೋಗಲ್ಲ
ಅಧಿವೇಶನದಲ್ಲಿ ಮುಡಾ ಹಗರಣದ ಚರ್ಚೆಗೆ ಏಕೆ ಬೆದರಿದರು? ಸದನದಲ್ಲಿ ದಾಖಲೆಗಳನ್ನು ಬಿಚ್ಚಿಟ್ಟಿದ್ದರೆ ನಿರುತ್ತರರಾಗಬೇಕಾಗುತ್ತದೆ. ಯಾವ ಸರ್ಫ್‌ ಎಕ್ಸೆಲ್‌, ಏರಿಯಲ್‌ ಕೂಡ ಇವರ ಕಪ್ಪು ತೊಳೆಯಲಾಗಲ್ಲ. ವೈಟ್ನರ್‌ ಹಚ್ಚಿ ಕಪ್ಪು ಕಾಣದಂತೆ ಮಾಡಬಹುದಷ್ಟೆ. ಸಂವಿಧಾನದ ಮೇಲೆ ನಂಬಿಕೆ ಇದ್ದಿದ್ದರೆ ರಾಜಭವನ ಚಲೋ ಮಾಡುವ ಘೋಷಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಡುತ್ತಿರಲಿಲ್ಲ ಎಂದು ಟೀಕಿಸಿದರು.

ಕೆಂಪಣ್ಣ ಆಯೋಗದ ವರದಿ ಮಂಡಿಸಿ
ಅರ್ಕಾವತಿ ಬಡಾವಣೆಯ ರೀ ಡೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರು ಮುಂದಿಟ್ಟು ಚರ್ಚಿಸಲು ನಿರ್ಧರಿಸಿದ್ದೇವೆ. ಎಕರೆಗೆ 15 ಕೋಟಿ ರೂ. ಎಂದರೂ 840 ಎಕರೆಗೆ 10-12 ಸಾವಿರ ಕೋಟಿ ರೂ. ಹಗರಣವಿದು. ಇಷ್ಟೆಲ್ಲ ಮಾಡಿಯೂ ಕಾಂಗ್ರೆಸಿಗರಲ್ಲಿ ಯಾರೂ ಭ್ರಷ್ಟರಿಲ್ಲ, ಇವರೆಲ್ಲ ಪ್ರಾಮಾಣಿಕರು.

ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ಧ ಆರೋಪ ಬಂದಾಗ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ನೇಮಿಸಿದ ಕೆಂಪಣ್ಣ ಆಯೋಗದ ವರದಿ ಪಡೆದುಕೊಂಡರು. ಅದನ್ನು ಇದುವರೆಗೆ ಸದನದಲ್ಲಿ ಮಂಡಿಸಿ, ಕ್ರಮ ವಹಿಸಿಲ್ಲ. ಸ್ವತ್ಛವಾಗಿದ್ದರೆ ಭಯ ಬೀಳುವುದರಲ್ಲಿ ಅರ್ಥವಿಲ್ಲ. ನಿಮ್ಮ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಓರೆಗೆ ಹಚ್ಚಲು ಇದು ಸುಸಮಯ. ಇಲ್ಲದಿದ್ದರೆ, ನಿಮ್ಮ ಮೇಲೆ ನಂಬಿಕೆ ಬರುವುದೇ ಇಲ್ಲ ಎಂದು ಸಿ.ಟಿ. ರವಿ ಹೇಳಿದರು.

Advertisement


ಜಿಂದಾಲ್‌ಗೆ ಭೂಮಿ ಮರು ಪರಿಶೀಲಿಸಿ: ಸಿ.ಟಿ. ರವಿ ಆಗ್ರಹ
ನಿಮಗೂ, ನಿಮ್ಮ ಹೈಕಮಾಂಡ್‌ಗೂ ಕಿಕ್‌ಬ್ಯಾಕ್‌ ಸಿಕ್ಕಿದೆಯೇ?
ಜಿಂದಾಲ್‌ ಸಂಸ್ಥೆಗೆ 3677 ಎಕರೆ ಭೂಮಿಯನ್ನು ಶುದ್ಧಕ್ರಯಕ್ಕೆ ಕೊಡುವ ನಿರ್ಧಾರವನ್ನು ಪುನರ್‌ ಪರಿಶೀಲನೆ ಮಾಡಬೇಕು ಹಾಗೂ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ ಎಂಬುದರ ಜಾಬ್‌ ಆಡಿಟ್‌ ಮಾಡಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

ಬಿಜೆಪಿ ಆಡಳಿತದಲ್ಲಿದ್ದಾಗಲೇ ಈ ಪ್ರಸ್ತಾವನೆ ಬಂದಿತ್ತು. ಸಂಪುಟ ಸಭೆಯೊಳಗೆ ನಾವೆಲ್ಲರೂ ವಿರೋಧಿಸಿದ್ದೆವು. ಬಹಿರಂಗವಾಗಿ ಕಾಂಗ್ರೆಸ್‌ ವಿರೋಧಿಸಿತ್ತು. ಇದರಲ್ಲಿ ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್‌ ಬಂದಿದೆ, 1.20 ಲಕ್ಷ ರೂಪಾಯಿಗೇ ಭೂಮಿ ಕೊಡುವುದು ಎಂದರೇನರ್ಥ ಎಂದೆಲ್ಲ ಕಾಂಗ್ರೆಸ್‌ ಆರೋಪಿಸಿತ್ತು. ಅಂದು ವಿರೋಧಿಸಿ, ಇಂದು ಕೊಡುತ್ತಿದ್ದೀರಿ ಎಂದರೆ ನಿಮಗೂ ನಿಮ್ಮ ಹೈಕಮಾಂಡ್‌ಗೂ ದೊಡ್ಡ ಪ್ರಮಾಣದ ಕಿಕ್‌ಬ್ಯಾಕ್‌ ಸಂದಾಯ ಆಗಿರಬಹುದು ಎಂದು ಆರೋಪಿಸಿದರು.

ಇದೆಲ್ಲ ಬಿಜೆಪಿ ಆಡಳಿತದಲ್ಲೇ ನಿರ್ಧಾರ ಆಗಿತ್ತು ಎನ್ನುವ ಸಚಿವ ಎಂ.ಬಿ. ಪಾಟೀಲ್‌, ಅಂದು ನೀವೇ ವಿರೋಧಿಸಿದ್ದನ್ನು ಇಂದೇಕೆ ಅನುಷ್ಠಾನಕ್ಕೆ ತಂದಿರಿ ಎಂಬುದಕ್ಕೆ ಉತ್ತರಿಸಿ. ಅಂದು ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಪತ್ರ ಬರೆದು ವಿರೋಧಿಸಿದ್ದ ಎಚ್‌.ಕೆ. ಪಾಟೀಲರು ಇಂದು ಸಂಪುಟ ಸಭೆಯ ನಿರ್ಣಯವನ್ನು ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮದಿಂದ ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next