Advertisement

ಶಾಸಕ ಅನಿಲ್‌ ಲಾಡ್‌ ರಕ್ಷಣೆಗೆ ನಿಂತ ಸಿಎಂ ಸಿದ್ದರಾಮಯ್ಯ

04:07 PM Dec 11, 2017 | Team Udayavani |

ರಾಯಚೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶಾಸಕ ಅನಿಲ್‌ ಲಾಡ್‌ ರಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಸಮಾಜ ಪರಿವರ್ತನಾ ಆಂದೋಲನ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ರಾಜ್ಯದ
ಮೂರು ಪಕ್ಷಗಳು ಪರೋಕ್ಷ ಬೆಂಬಲ ನೀಡಿವೆ. ಎಲ್ಲ ಪಕ್ಷಗಳು ತಮ್ಮವರ ರಕ್ಷಣೆಯಲ್ಲಿ ತೊಡಗಿವೆ. ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಕೂಡ ಅಧಿಕಾರಕ್ಕೆ ಬಂದ ಮೇಲೆ ಅಕ್ರಮ ಗಣಿಗಾರಿಕೆ ಬಗ್ಗೆ ಚಕಾರವೆತ್ತಲಿಲ್ಲ.

ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಭ್ರಷ್ಟರನ್ನು ಬಯಲಿಗೆಳೆಯಬೇಕು. ರಾಜ್ಯದ ಏಳು ಬಂದರಿನಿಂದ 1.5 ಲಕ್ಷ ಕೋಟಿ ರೂ. ಅಕ್ರಮ ಅದಿರು ಸಾಗಣೆ ಮಾಡಲಾಗಿದೆ. ಈ ಹಗರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.

ಸಾರ್ವಜನಿಕರ ತೆರಿಗೆ ಹಣ ವಿನಿಯೋಗಿಸಿ, ಆಡಳಿತ ದುರ್ಬಳಕೆ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಸಾಧನೆ
ಯಾತ್ರೆಗೆ ಮುಂದಾಗಿರುವುದು ಸರಿಯಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತಿರುವುದಕ್ಕೆ ಇವಿಎಂ ದೋಷ ಕಾರಣ ಎನ್ನುವ ಆರೋಪಗಳಿವೆ. ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ. ಈ ಕುರಿತು ಎಲ್ಲ ಪಕ್ಷಗಳಲ್ಲಿನ ತಜ್ಞರ ಸಮಿತಿ ರಚಿಸಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಇವಿಎಂ ದೋಷದ ಬಗ್ಗೆ ಚರ್ಚಿಸಿ ನಿರ್ಧಾರಕ್ಕೆ ಬರಬೇಕು. ಅಲ್ಲಿವರೆಗೂ ಹಳೇ ಮಾದರಿಯಲ್ಲಿಯೇ ಚುನಾವಣೆ ನಡೆಸಬೇಕು ಎಂದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ದಲಿತರ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಯಾವ ಸರ್ಕಾರವೂ ಮಾತನಾಡುತ್ತಿಲ್ಲ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರ ಅನುಭವಿಸುತ್ತಿದ್ದು, ರಾಜ್ಯದಲ್ಲಿ ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ) ಜನರ ಸಮಸ್ಯೆ ಬಿಟ್ಟು ವೈಯಕ್ತಿಕ ಟೀಕೆಗಳಲ್ಲಿ ಕಾಲಹರಣ ಮಾಡುತ್ತಿವೆ. ದೇಶದಲ್ಲಿ ನಿರುದ್ಯೋಗ, ಕೃಷಿ ಸಮಸ್ಯೆಗಳು, ಶಿಕ್ಷಣ, ಆರೋಗ್ಯದ ಸಮಸ್ಯೆಗಳಿಗೆ ಬರವಿಲ್ಲ. ಇದ್ಯಾವುದನ್ನು ಲೆಕ್ಕಿಸದೆ ತಮ್ಮ ರಾಜಕೀಯ ಲಾಭಕ್ಕಾಗಿ ಹಾತೊರೆಯುತ್ತಿವೆ ಎಂದರು.

Advertisement

ಈ ಎಲ್ಲ ಪಕ್ಷಗಳ ವಿರುದ್ಧ ಜನರನ್ನು ಸಂಘಟಿಸಿ ಪರ್ಯಾಯ ಜನಶಕ್ತಿ ವೇದಿಕೆ ನಿರ್ಮಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ 15ಕ್ಕೂ ಹೆಚ್ಚು ಸಮಾನ ಮನಸ್ಕರ ರಾಜಕೀಯ ಪಕ್ಷಗಳು, ಸಂಘಟನೆಗಳು ಒಗ್ಗೂಡಿ ಜನಾಂದೋಲನ ಮಹಾಮೈತ್ರಿ ಹುಟ್ಟು ಹಾಕಿದ್ದೇವೆ. ಡಿ.16ರಂದು ದುಂಡು ಮೇಜಿನ ಸಭೆ ನಡೆಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ, ಪ್ರಣಾಳಿಕೆ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು. ವಿವಿಧ ಸಂಘಟನೆಗಳ ಮುಖಂಡರಾದ ಚಾಮರಸ ಮಾಲಿಪಾಟೀಲ್‌, ಕೆ.ರಾಮಕೃಷ್ಣ, ಎಂ.ಆರ್‌.ಭೇರಿ ಇದ್ದರು. 

ದುಡಿಯುವ ವರ್ಗಗಳ, ರೈತರ ಬಗ್ಗೆ ಧ್ವನಿ ಎತ್ತಲು ಯಾವ ಜನಪ್ರತಿನಿಧಿಗಳೂ ಸಿದ್ಧರಿಲ್ಲ. ನಮ್ಮವರೇ ಸದನದಲ್ಲಿ ಮಾತನಾಡುವಂತಾಗಬೇಕು. 8ರಿಂದ 10 ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಸಿಪಿಐ, ಸಿಪಿಎಂ, ಆಪ್‌, ಎಸ್‌ಯುಸಿಐ, ಸ್ವರಾಜ್‌ ಇಂಡಿಯಾ ಸೇರಿ ಇನ್ನಿತರ ಪಕ್ಷಗಳು ನಮ್ಮ ಜತೆ ಕೈಜೋಡಿಸಲಿವೆ.
 ರಾಘವೇಂದ್ರ ಕುಷ್ಟಗಿ, ಜನಸಂಗ್ರಾಮ್‌ ಪರಿಷತ್‌ ಮುಖಂಡ 

Advertisement

Udayavani is now on Telegram. Click here to join our channel and stay updated with the latest news.

Next