ಲಿಂಗಸುಗೂರು: ಡಿ.ಎಸ್.ಹುಲಿಗೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಇನ್ನುಳಿದ ಆಕಾಂಕ್ಷಿಗಳಲ್ಲಿ ಅಸಮಾಧಾನ ಮನೆ ಮಾಡಿದೆ. ಟಿಕೆಟ್ ವಂಚಿತರ ಬೆಂಬಲಿಗರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾದಿಗ ಸಮುದಾಯದ ಎಚ್.ಬಿ. ಮುರಾರಿ, ಪಾಮಯ್ಯ ಮುರಾರಿ, ಡೋಹರ್ ಸಮುದಾಯದಿಂದ ಸರೋಜಾ ಪೋಳ, ಭೋವಿ ಸಮುದಾಯದ ಡಿ.ಎಸ್. ಹುಲಿಗೇರಿ ಸೇರಿ ಇನ್ನಿತರರು ಆಕಾಂಕ್ಷಿಯಾಗಿದ್ದರು. ಇನ್ನೊಂದೆಡೆ ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಜಿಲ್ಲಾದ್ಯಂತ ಕೇಳಿಬಂದಿತ್ತು. ಆದರೂ ಹೈಕಮಾಂಡ್ ಕಿವಿಗೊಡದೇ ಕಳೆದ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತಿದ್ದ ಡಿ.ಎಸ್. ಹುಲಿಗೇರಿ ಅವರಿಗೆ ಟಿಕೆಟ್ ನೀಡಿದೆ.
ಮಾದಿಗ ಸಮುದಾಯದವರಾದ ಎಚ್.ಬಿ.ಮುರಾರಿ ಹಾಗೂ ಪಾಮಯ್ಯ ಮುರಾರಿ ಈ ಇಬ್ಬರಲ್ಲಿ ಯಾರಿಗಾದರೂ ಟಿಕೆಟ್ ನೀಡಿ ಮೂಲ ಅಸ್ಪೃಶ್ಯರಿಗೆ ಆದ್ಯತೆ ನೀಡುವಂತೆ ಈ ಹಿಂದಿನಿಂದಲೂ ಬೇಡಿಕೆ ಇತ್ತು. ಆದರೆ ಈ ಬಾರಿಯೂ ಮೂಲ ದಲಿತರನ್ನು ಕಡೆಗಣಿಸಿದ್ದರಿಂದ ಮಾದಿಗ ಸಮುದಾಯದ ಮುಖಂಡರು ಪಟ್ಟಣದ ಶಾದಿಮಹಲ್ ಹತ್ತಿರ ಸಭೆ ಸೇರಿ ಅಲ್ಲಿಂದ ಸಿದ್ದರಾಮಯ್ಯನವರ ಅಣಕು ಶವಯಾತ್ರೆಯೊಂದಿಗೆ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಗಡಿಯಾರ ವೃತ್ತ ಮಾರ್ಗವಾಗಿ ಬಸ್ ನಿಲ್ದಾಣ ವೃತ್ತಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸ್ ರಾಜ ಅವರ ವಿರುದ್ಧ ಘೋಷಣೆ ಕೂಗಿದರು. ನಂತರ ಟೈರ್‌ಗೆ ಬೆಂಕಿ ಹಚ್ಚಿ, ಸಿಎಂ ಸಿದ್ದರಾಮಯ್ಯ ನವರ ಪ್ರತಿಕೃತಿ ದಹಿಸಿದರು.
ಕಾಂಗ್ರೆಸ್ ತಕ್ಕ ಪಾಠ: ದಸಂಸ ಮುಖಂಡ ಚಿನ್ನಪ್ಪ ಕಂದಳ್ಳಿ ಮಾತನಾಡಿ ಮೂಲ ಅಸ್ಪೃಶ್ಯರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಾಮಯ್ಯ ಮುರಾರಿಗೆ ಟಿಕೆಟ್ ನೀಡಿ ಕೊನೆ ಕ್ಷಣದಲ್ಲಿ ಕುತಂತ್ರದಿಂದ ಟಿಕೆಟ್ ತಪ್ಪಿಸಿ ಹುಲಿಗೇರಿ ಅವರಿಗೆ ನೀಡಲಾಗಿತ್ತು. ಈ ಬಾರಿಯೂ ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾಗಿದ್ದ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಿದರೆ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳ ಅಭ್ಯರ್ಥಿ ಪರವಾಗಿ ಸಮುದಾಯ ಕೆಲಸ ಮಾಡಲಿದೆ ಹಾಗೂ
ಒಂದು ವೇಳೆ ಕೊಡದಿದ್ದರೆ ಅದರ ದುಷ್ಟರಿಣಾಮವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಎದರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶ ಕಳಿಸಿದ್ದರೂ ನಮ್ಮ ಮನವಿಯನ್ನು ತಿರಸ್ಕರಿಸಿ ಭೋವಿ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ಇದ್ದರು.