Advertisement

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

09:19 PM Dec 15, 2024 | Team Udayavani |

ಗದಗ: ರಾಜ್ಯದ ಜನರ ಆಶೀರ್ವಾದದಿಂದ ಎರಡನೇ ಬಾರಿ ಮುಖ್ಯ ಮಂತ್ರಿಯಾಗುವ ಅವಕಾಶ ದೊರಕಿದೆ. ಜನರಿಗೆ ನೀಡಿದ‌ ಐದು ಗ್ಯಾರಂಟಿಗಳ‌ ಭರವಸೆಗಳನ್ನು ಕೊಟ್ಟ ಮಾತಂತೆ ನೆರವೇರಿಸುವುದರ ಮೂಲಕ ಅರ್ಹ ಫಲಾನುಭವಿಗಳಿಗೆ ದೊರಕಿಸುವದರ‌ ಮೂಲಕ ನುಡಿದಂತೆ ನಡೆದ‌‌‌ ಸರ್ಕಾರ ನಮ್ಮ‌ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಬೀರಲಿಂಗೇಶ್ವರ, ಮಾಳಿಂಗರಾಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.

ಬಡವರು ಯಾರೂ ಕೂಡ ಇನ್ನೊಬ್ಬರಲ್ಲಿ‌‌ ಕೈ ಚಾಚಬಾರದು, ಯಾರೂ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ‌ ಅನ್ನ‌ಭಾಗ್ಯ ಯೋಜನೆ‌ ಜಾರಿಗೊಳಿಸಲಾಗಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹ ಲಕ್ಮ್ಷೀ ಯೋಜನೆಯಲ್ಲಿ ಪ್ರತಿ ಮಾಹೆ ಎರಡು ಸಾವಿರ ರೂ.ಗಳನ್ನು ಪಡೆಯುತ್ತಿದ್ದಾರೆ ಎಂದರು.

ಎಳೂವರೆ ಕೋಟಿ‌ ಜನರಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಈ ಸೌಲಭ್ಯಗಳನ್ನು ಒದಗಿಸುವದರ ಮೂಲಕ ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಲಾಗುತ್ತಿದೆ. ಬಹುದಿನಗಳ ನಂತರ ತಮ್ಮ ಗ್ರಾಮಕ್ಕೆ‌ಆಗಮಿಸಿರುತ್ತೇನೆ, 1991ರಲ್ಲಿ‌ ಕೊಪ್ಪಳ ಲೋಕಸಭಾ ಸ್ಪರ್ಧಿಸಿದ ಸಮಯದಲ್ಲಿ ಹರ್ಲಾಪುರ ಹಾಗೂ ಮುಂಡರಗಿ‌ ಜನ ಆಶೀರ್ವಾದ ಮಾಡಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಅಖಂಡ ಧಾರವಾಡ ಜಿಲ್ಲೆ ಮೂರು‌ ಜಿಲ್ಲೆಗಳಾಗಿ ವಿಂಗಡನೆಯಾಗುವ ಮುನ್ನ ಮುಂಡರಗಿ ವಿಧಾನಸಭಾ ಕ್ಷೇತ್ರವು ಕೊಪ್ಪಳ ಲೋಕಸಭಾ ಮತಕ್ಷೇತ್ರಕ್ಕೆ ಸೇರುತ್ತಿತ್ತು. ಆ ಸಮಯದಲ್ಲಿ ನನಗೆ ಮತ ನೀಡಿ ಆಶೀರ್ವದಿಸಿದ್ದನ್ನು ಸದಾ ಸ್ಮರಿಸುತ್ತೇನೆ ಎಂದರು.

Advertisement

ಅನಾದಿ ಕಾಲದಿಂದಲೂ ಜನ ದೇವಸ್ಥಾನ ನಿರ್ಮಿಸಿ ಮೂರ್ತಿ‌ ಪ್ರತಿಷ್ಠಾಪಿಸಿ ಪೂಜೆ ಮಾಡುವ ಸಂಸ್ಕೃತಿ ರೂಢಿಯಲ್ಲಿದೆ. ದೇವರನ್ನು ಭಕ್ತಿಯಿಂದ‌ ಪೂಜೆ ಮಾಡಿದರೆ ದೇವರು ನಮಗೆ ವರ ನೀಡುವದರ ಮೂಲಕ ನಮ್ಮ‌ಕಷ್ಟ ಕಾರ್ಪಣ್ಯಗಳು ದೂರಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ, ಕಾಲೇ ಕಂಬಗಳು, ಶಿರವೇ ಹೊನ್ನ ಕಳಶವಯ್ಯ ಎಂಬ ಬಸವಣ್ಣನವರ ವಚನವನ್ನು ಸ್ಮರಿಸಿದರು.‌

ದೇವರು ಸರ್ವವ್ಯಾಪಿಯಾಗಿದ್ದು ನಮ್ಮ ಬದುಕು, ನಡವಳಿಕೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ, ಕೆಟ್ಟದನ್ನು ಮಾಡಬಾರದು. ಈ ಗ್ರಾಮ‌ ಭಾವಕೈತ್ಯೆಯಿಂದ,‌ ಸೌಹಾರ್ದತೆಯಿಂದ‌ ಬದುಕುತ್ತಿರುವುದು ಶ್ಲಾಘನೀಯ. ಇದೇ ರೀತಿ ಇಡೀ ದೇಶದಲ್ಲಿ ಪ್ರತಿಯೊಬ್ಬರು ಬದುಕಬೇಕು. ಯಾವುದೇ ಧರ್ಮವು ಪ್ರೀತಿ ಮಾಡು ಅಂತ ಹೇಳುತ್ತದೆ, ಹೊರತು ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮದ ಪ್ರಕಾರ ಪ್ರತಿಯೊಬ್ಬರೂ ಮನುಷ್ಯರಂತೆ‌ ಬದುಕಬೇಕು ಹೊರತು ಮೃಗಗಳಂತೆ ಜೀವಿಸಬಾರದು. ಬೇರೆಯವರ ಮೇಲೆ ದಯೆ ತೋರುವಂತಹ ಲಕ್ಷಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು‌ ಸಿಎಂ ಸಿದ್ದರಾಮಯ್ಯನವರು ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿ, ಭಕ್ತನಿಗೂ‌ ದೇವರಿಗೆ ವ್ಯವಹಾರ ಮಾಡುವಂತಹ ಸ್ಥಳ ದೇವಸ್ಥಾನವಾಗಿದೆ. ನಮ್ಮೆಲ್ಲರ ಜೀವನ ಸುಖಕರವಾಗಿರಲು, ಬೀರಲಿಂಗೇಶ್ವರನ‌ ಕೃಪೆ ತಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.

ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಜನರ ಬಡತನವನ್ನು ಬೇರು ಸಹಿತ ಕಿತ್ತೊಗೆದ ಮಹಾನ ವ್ಯಕ್ತಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದಾರೆ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವ ಕನಸನ್ನು ನನಸಾಗಿರಿಸುವ ಮಹಾನ ವ್ಯಕ್ತಿಯಾಗಿದ್ದಾರೆ. ಈ ಭಾಗದಲ್ಲಿ‌ ಶಾಸಕರಾದ ಜಿ.ಎಸ್.ಪಾಟೀಲ ಅವರಿಂದ ಅನೇಕ‌ ರಚನಾತ್ಮಕ ಕಾರ್ಯಗಳು ಆಗುತ್ತಿವೆ. ಸಿಂಗಟಾಲೂರ ಏತನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಡಿಸಿಎಂ ಡಿ.ಕೆ. ಶಿವಕುಮಾರ ಅವರಲ್ಲಿ ಎಚ್.ಕೆ. ಪಾಟೀಲ ಅವರು ಮನವಿ‌ ಮಾಡಿದರು.

ಕರ್ನಾಟಕ ಖನಿಜ ಅಭಿವೃಧ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಸರ್ವರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಾಜಿ‌‌ ಶಾಸಕ ಡಿ.ಆರ್. ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಮುಖಂಡರಾದ ಕೃಷ್ಣಗೌಡ ಪಾಟೀಲ, ಫಕ್ಕೀರಪ್ಫ ಹೆಬಸೂರ, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಸಮಾಜದ ಮುಖಂಡರು, ಗಣ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next