ಮಹಾಲಿಂಗಪುರ : 2023ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭರವಸೆ ನೀಡಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆದಾಯಕ ಹೇಳಿಕೆಯಂತೆ ತಾಲೂಕು ಹೋರಾಟ ಸಮಿತಿಯು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ.ತಿಮ್ಮಾಪೂರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗವು, ನಮ್ಮ ಹೋರಾಟವು 464 ದಿನ ಪೂರೈಸಿ ಹೋರಾಟ ಮುಂದುವರೆದಿದೆ.
ಶೀಘ್ರದಲ್ಲೇ ಮಹಾಲಿಂಗಪುರ ತಾಲೂಕು ಘೋಷಿಸಿ, ಕಳೆದ 30 ವರ್ಷಗಳ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ನಿಯೋಗ ಸದಸ್ಯರು ಸಿಎಂ ಅವರಿಗೆ ಒತ್ತಾಯಿಸಿದರು.
ನಿಯೋಗದಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಕಾಲಾವಕಾಶ ಕೋರಿ ತಾಂತ್ರಿಕ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ತಾಲೂಕು ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೋರಾಟ ಸಮಿತಿಯವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.
ನಿಯೋಗದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ,ಧರೆಪ್ಪ ಸಾಂಗ್ಲಿಕರ, ಯಲ್ಲನಗೌಡ ಪಾಟೀಲ್, ರಂಗಣ್ಣಗೌಡ ಪಾಟೀಲ, ಮಹಾದೇವ ಮಾರಾಪೂರ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರಕಿ, ಸಿದ್ದು ಶಿರೋಳ, ವಿರೇಶ ಆಸಂಗಿ, ಎಸ್ ಎಂ.ಪಾಟೀಲ್, ಬಸವರಾಜ ಕೊಕಟನೂರ, ಚೇತನ ಕಲಾಲ, ಆನಂದ ಚಮಕೇರಿ, ಡಾ.ಕುಳ್ಳೋಳ್ಳಿ ಸೇರಿದಂತೆ ಹಲವರು ಇದ್ದರು.
ಮಹಾಲಿಂಗಪುರ ತಾಲೂಕಿಗಾಗಿ ನಡೆದ ಹೋರಾಟವು ಶನಿವಾರ 465 ದಿನಕ್ಕೆ ಕಾಲಿಡಲಿದೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿಯವರೆಗಿನ ಹೋರಾಟ ಮತ್ತು ತಾಲೂಕು ರಚನೆಯ ಭೌಗೋಳಿಕ ಮಾಹಿತಿಯನ್ನು ನೀಡಿ ಮನವಿ ಮಾಡಿದ್ದೇವೆ.ಕೂಲಂಕೂಷ ವಿಚಾರಣೆಗೆ ಅವರು ಕಾಲಾವಕಾಶ ಕೋರಿದ್ದಾರೆ. ಇದಕ್ಕೂ ಮುನ್ನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಸಂಪೂರ್ಣ ಮಾಹಿತಿಯೊಂದಿಗೆ ಮನವಿ ನೀಡಿ ಒತ್ತಾಯಿಸಿದ್ದೇವೆ.
-ಸಂಗಪ್ಪ ಹಲ್ಲಿ, ಧರೆಪ್ಪ ಸಾಂಗ್ಲಿಕರ ತಾಲೂಕು ಹೋರಾಟ ಸಮಿತಿ ಮುಖಂಡರು.