Advertisement

CM Siddaramaiah: “ಮನುಷ್ಯರನ್ನು ಪ್ರೀತಿಸಿ, ದ್ವೇಷಿಸಬೇಡಿ’

12:16 AM Oct 26, 2024 | Team Udayavani |

ಕಿತ್ತೂರು: ನಾವೆಲ್ಲರೂ ಭಾರತವನ್ನು ಪ್ರೀತಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆ ಯಾವುದೇ ಜಾತಿ, ಧರ್ಮ, ಭಾಷೆಯವರಾಗಿ
ದ್ದರೂ ಪ್ರೀತಿಸಬೇಕು. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕೇ ಹೊರತು ದ್ವೇಷ ಮಾಡಬಾರದು. ದ್ವೇಷದ ಬೀಜ ಬಿತ್ತುವವರನ್ನು ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿ ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆಯುತ್ತ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಹೇಳಿದ್ದಾರೆ. ನಾವು ವಿಶ್ವ ಮಾನವರಾಗಬೇಕೇ ಹೊರತು ಅಲ್ಪಮಾನವರಾಗಬಾರದು. ಅನೇಕರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯ ಉಳಿಸಿ ಸಮ ಸಮಾಜ ನಿರ್ಮಿಸಬೇಕು. ಮೌಡ್ಯ, ಕಂದಾಚಾರಗಳನ್ನು ತಿರಸ್ಕರಿಸುವ ಮೂಲಕ ಬಸವಣ್ಣನವರನ್ನು ಗೌರವಿಸಿದಂತಾಗುತ್ತದೆ. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ಬಸವಣ್ಣ ಹೇಳಿದಂತೆ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ, ಕರ್ಮ ಸಿದ್ಧಾಂತ, ಕಂದಾಚಾರಗಳನ್ನು ನಾವು ತಿರಸ್ಕರಿಸಬೇಕು. ಅದೇ ನಾವು ಬಸವಣ್ಣನವರಿಗೆ ಸಲ್ಲಿಸಬೇಕಾದ ಗೌರವ. ಹೀಗಾಗಿಯೇ ನಾವು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಹಿಂದೆ ಯಾರೂ ಇದನ್ನು ಮಾಡಿರಲಿಲ್ಲ ಎಂದರು.

ನಾವು ಕಿತ್ತೂರನ್ನು ವೈಭವೀಕರಿಸಲು ಉತ್ಸವ ಮಾಡಲಿಲ್ಲ. ಇತಿಹಾಸ ಹೊಸ ಪೀಳಿಗೆಗೆ ತಿಳಿಯಬೇಕು. ಯಾರು ಇತಿಹಾಸ ತಿಳಿದಿಲ್ಲವೋ ಅಂಥವರಿಂದ ಭವಿಷ್ಯ ನಿರ್ಮಾಣ ಆಗುವುದಿಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಹೀಗಾಗಿ ಇತಿಹಾಸ ಎಲ್ಲರೂ ತಿಳಿಯಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಚನ್ನಮ್ಮನ ಸ್ವಾಭಿಮಾನ ಹೋರಾಟದ ಕುರಿತು ಯುವ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

Advertisement

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಹಾಗೂ ಅವನ ಸಹಚರರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಕಿತ್ತೂರು ಉತ್ಸವ ಕರ್ನಾಟಕದ ನಾಡಹಬ್ಬವಾಗಬೇಕು. ಚನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲ ರಾಷ್ಟ್ರೀಯ ಸ್ಮಾರಕವಾಗಬೇಕು ಎಂದು ಮನವಿ ಮಾಡಿದರು. ಶಾಸಕ ಬಾಬಾಸಾಹೇಬ ಪಾಟೀಲ, ಮುಖಂಡರು, ಇತರರು ಇದ್ದರು.

ನಮ್ಮದು ಜನಪರ ಸರಕಾರ: ಸಿದ್ದರಾಮಯ್ಯ
ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಇದನ್ನು ನಾವು ಯಾವುದೇ ಸಮಾಜವನ್ನು ಮೆಚ್ಚಿಸಲು ಮಾಡಿದ್ದಲ್ಲ, ಅವರು ಮಾಡಿರುವ ಕಾಯಕದಿಂದಾಗಿ ನಾವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಕಿತ್ತೂರು ರಾಣಿ ಚನ್ನಮ ಜಯಂತಿಯನ್ನು ಸರಕಾರದಿಂದ ಆಚರಿಸಲು ಆದೇಶ ಮಾಡಿದ್ದು ಸಿದ್ದರಾಮಯ್ಯ ಸರಕಾರ. ಅಲ್ಲಿಯವರೆಗೂ ಹಿಂದಿನ ಯಾವ ಸರಕಾರಗಳೂ ಇದರ ಬಗ್ಗೆ ಯೋಚಿಸಿರಲಿಲ್ಲ. ನಮ್ಮದು ಜನಪರ ಸರಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next