Advertisement

Karnataka ನುಡಿದಂತೆ ನಡೆದೆವು ಅಧಿಕಾರದಲ್ಲಿ 6 ತಿಂಗಳು ಪೂರೈಸಿ ಸಿಎಂ ಸಿದ್ದರಾಮಯ್ಯ ಹರ್ಷ

12:40 AM Nov 21, 2023 | Team Udayavani |

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ತಮ್ಮ ನೇತೃತ್ವದ ಸರಕಾರ ಆರು ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸೋಮವಾರ ಅವರು “ಆರು ತಿಂಗಳ ಅನನ್ಯ ಸಾಧನೆ’ ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ ಮಾಡಿ ವಿವಿಧ ಇಲಾಖೆಗಳ ಸಾಧನೆಯನ್ನು ಮೆಲುಕು ಹಾಕಿದ್ದಾರೆ.

Advertisement

ಆರು ತಿಂಗಳ ಅವಧಿಯಲ್ಲಿ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಪ್ರತಿಫ‌ಲವು ಮಹಿಳೆಯರು, ಮಕ್ಕಳು, ಯುವಜನರು, ರೈತರು, ಕಾರ್ಮಿಕರು, ಶೋಷಿತರನ್ನು ತಲುಪಿದೆ. ಎಲ್ಲರಿಗೂ ಒಂದಲ್ಲ ಒಂದು ರೀತಿಯ ಪ್ರಯೋಜನ ಸಿಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಎಲ್ಲ ಯೋಜನೆಗಳ ಜಾರಿ ಮೂಲಕ ಸಮಾಜದ ಶಾಂತಿ ಮತ್ತು ಸಾಮರಸ್ಯದ ರಕ್ಷಣೆ ನಮ್ಮ ಸರಕಾರದ ಪ್ರಮುಖ ಉದ್ದೇಶ. ಸಾಧಿಸಿದ್ದು ಹಲವು, ಸವೆಸಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜತೆಯಾಗಿ ಸಾಗೋಣ. ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿಸೋಣ ಎಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ.

2,303 ಕೋಟಿ ರೂ. ಮೊತ್ತದ ಶಕ್ತಿ ಟಿಕೆಟ್‌
ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷ ರೂ.ಗಳಂತೆ ಒಟ್ಟು 97.2 ಕೋಟಿ ರೂ.ಗೂ ಅಧಿಕ ಮೊತ್ತದ ಉಚಿತ ಪ್ರಯಾಣ ನಡೆಸಿದ್ದಾರೆ. ಈವರೆಗೆ ಒಟ್ಟು 2,303 ಕೋಟಿ ರೂ. ಮೊತ್ತದ ಉಚಿತ ಪ್ರಯಾಣದ ಟಿಕೆಟ್‌ ವಿತರಿಸಲಾಗಿದೆ.

99.52 ಲಕ್ಷ ಗೃಹಲಕ್ಷ್ಮಿಯರಿಗೆ 11,200 ಕೋ.ರೂ.
ಗೃಹಲಕ್ಷ್ಮಿ ಯೋಜನೆ ಮೂಲಕ ಬಿಪಿಎಲ್‌ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ಧನಸಹಾಯ ನೀಡಲಾಗುತ್ತಿದ್ದು, ನೋಂದಾಯಿತ 99.52 ಲಕ್ಷ ಗೃಹಲಕ್ಷ್ಮಿಯರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 17,500 ಕೋಟಿ ರೂ. ಮೀಸಲಿಟ್ಟು, ಈವರೆಗೆ 11,200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

Advertisement

ಮನೆ ಬೆಳಗುತ್ತಿರುವ ಗೃಹಜ್ಯೋತಿ
ರಾಜ್ಯದ ಪ್ರತೀ ಕುಟುಂಬಕ್ಕೆ ಗರಿಷ್ಟ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಯಡಿ 1.56 ಕೋಟಿ ಕುಟುಂಬಗಳು ನೋಂದಾಯಿಸಿಕೊಂಡಿವೆ. ಕಳೆದ ಮೂರು ತಿಂಗಳುಗಳಲ್ಲಿ ಇದಕ್ಕಾಗಿ 2,152 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

4.5 ಲಕ್ಷ ನಿರುದ್ಯೋಗಿಗಳಿಗೆ ಯುವನಿಧಿ
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪದವೀಧರ ನಿರುದ್ಯೋಗಿಗಳಿಗೆ ತಿಂಗಳಿಗೆ 1,500 ರೂ. ನಿರುದ್ಯೋಗ ಭತ್ತೆ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್‌ ಅಥವಾ ಜನವರಿಯಿಂದ ಜಾರಿಗೊಳಿಸಲು ನಿರ್ಧರಿಸಿದ್ದು, ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವಜನರಿಗೆ ಅನುಕೂಲ ಆಗುವ ನಿರೀಕ್ಷೆಯಿದೆ ಎಂದು ಅಂಕಿ-ಅಂಶಗಳನ್ನು ನೀಡಿದ್ದಾರೆ.

6 ತಿಂಗಳ ಅವಧಿಯಲ್ಲಿ ಸರಕಾರದ ಯೋಜನೆಗಳ ಮೂಲಕ ನಾಡಿನ ಪ್ರತಿಯೊಬ್ಬರನ್ನೂ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನು ಸಮಾನವಾಗಿ ಮುನ್ನಡೆಸುವ ನಮ್ಮ ಕರ್ನಾಟಕ ಮಾದರಿ ಆಡಳಿತವೆಂಬ ನವ ಕಲ್ಪನೆ ದೇಶಾದ್ಯಂತ ಮನ್ನಣೆ ಗಳಿಸಿದೆ. ಇತರ ರಾಜ್ಯಗಳು ಕೂಡ ನಮ್ಮನ್ನು ಅನುಸರಿಸುತ್ತಿರುವುದು ಹೆಮ್ಮೆ ಮೂಡಿಸಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಾಧನೆ ಮಾಡಿದೆ ಎಂದು ಸಿಎಂ ಹೇಳಿಕೊಂಡಿದ್ದರೆ ರೈತರ ಆತ್ಮಹತ್ಯೆ ಪ್ರಕರಣ ಏಕೆ ಹೆಚ್ಚಾಗಿದೆ? 2 ಸಾವಿರ ರೂ. ಸಿಕ್ಕಿಲ್ಲ ಎಂದು ಲಕ್ಷಾಂತರ ಜನರು ಏಕೆ ಸರತಿಯಲ್ಲಿ ನಿಂತಿದ್ದಾರೆ? 2 ತಿಂಗಳು ಕೊಟ್ಟು, 4 ತಿಂಗಳು ಕೊಟ್ಟೇ ಇಲ್ಲ. 5 ತಾಸು ವಿದ್ಯುತ್‌ ಕೊಡುವುದಾಗಿ ಹೇಳಿ 2 ತಾಸು ಕೂಡ ಕೊಡುತ್ತಿಲ್ಲ. ಅಧಿವೇಶನದಲ್ಲಿ ಎಲ್ಲವನ್ನೂ ಚರ್ಚಿಸುತ್ತೇವೆ.
-ಆರ್‌. ಅಶೋಕ್‌, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next