ಬೆಂಗಳೂರು:ಕೋಮುವಾದ ಹಾಗೂ ಜಾತಿವಾದ ಸೇರಿದಂತೆ ವಿವಿಧ ರೀತಿಯ ಫ್ಯಾಸಿಸ್ಟ್ ಮನೋಭಾವ ಇತ್ತೀಚೆಗೆ ಎಲ್ಲೆಡೆ ಹಬ್ಬುತ್ತಿದೆ. ಇದು ಜಾತಿ ಹಾಗೂ ಧರ್ಮದ ಭೇದವಿಲ್ಲದೆ ಬೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ 71ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಕೌಶಲ್ಯ ಕರ್ನಾಟಕ ಕಾರ್ಯಕ್ರಮ ರೂಪಿಸಿದ್ದು, ಈ ಯೋಜನೆಯಡಿ ಪ್ರತಿ ವರ್ಷ 5 ಲಕ್ಷ ಯುವಜನತೆಗೆ ತರಬೇತಿ. ಹೈ ಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಅಂತೆಯೇ 2016ನೇ ಸಾಲಿನಲ್ಲಿ 1.6 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಅಡುಗೆ ಅನಿಲ ಇಲ್ಲದ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್, ಸೀಮೆಎಣ್ಣೆ ಮುಕ್ತ ರಾಜ್ಯ ನಿರ್ಮಾಣಕ್ಕೆ ಯೋಜನೆ ಶುರುವಾಗಿದೆ ಎಂದು ತಿಳಿಸಿದರು.
ನಮ್ಮದು ಸರ್ವರನ್ನು ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಸರ್ವೋದಯ ತತ್ವದ ಅಭಿವೃದ್ಧಿ ಮಾದರಿ ಆಡಳಿತ ಸಿದ್ಧಾಂತವಾಗಿದೆ. ಈ ಅಭಿವೃದ್ಧಿ ಮಾದರಿಗೆ ಬಸವಣ್ಣ, ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ಸ್ಫೂರ್ತಿಯಾಗಿವೆ ಎಂದು ಹೇಳಿದರು.
ಯೋಧರ ಕುಟುಂಬಕ್ಕೆ ಉದ್ಯೋಗ:
ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಬಗೆಗೆ ನಮ್ಮ ಕಾಳಜಿ ಬರೇ ಬಾಯಿ ಮಾತಿನದ್ದಲ್ಲ, ಈ ನಿಟ್ಟಿನಲ್ಲಿ ಯುದ್ಧದಲ್ಲಿ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ ಓರ್ವ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.