ವಿಧಾನಸಭೆ: ರಾಜ್ಯದ ಜಿಡಿಪಿ ಪ್ರಮಾಣ 2024-25ಕ್ಕೆ 28,09063 ಕೋಟಿ ರೂ.ಗೆ ಏರಿಕೆಯಾಗಲಿದ್ದು ಅಭಿವೃದ್ಧಿಯಿಲ್ಲದೆ ಇದ್ದರೆ ಬಜೆಟ್ ಗಾತ್ರ ಹಾಗೂ ಜಿಡಿಪಿ ಹೆಚ್ಚಳವಾಗುವುದಕ್ಕೆ ಸಾಧ್ಯವೇ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಸುಳ್ಳೇ ಬಿಜೆಪಿಯ ಮನೆ ದೇವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ಸದನದಲ್ಲಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ ಸದಸ್ಯರ ಅನುಪಸ್ಥಿತಿಯ ನಡುವೆ ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ವಿಧಾನಮಂಡಲದ ಉಭಯ ಸದನದಲ್ಲಿ ಸುದೀರ್ಘ ಉತ್ತರ ನೀಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಸಮರ್ಥಿಸಿಕೊಂಡರು.
ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ. 2023-24ರಲ್ಲಿ ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. 2,41,723 ಕೋಟಿ ರೂ. ಒಂದು ವರ್ಷದಲ್ಲಿ ಹೆಚ್ಚಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯೇ ಆಗಿಲ್ಲ ಎಂಬ ಆರೋಪ ಸುಳ್ಳು ಎಂದು ಹೇಳಿದರು.
2024-25ನೇ ಆಯವ್ಯಯದಲ್ಲಿ ಒಟ್ಟು ಬಜೆಟ್ ಗಾತ್ರ 3,71,343 ಕೋಟಿ ರೂ. ಗಳಾಗಿದ್ದು ಇದರಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ ರೂಪಾಯಿ. ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,20,000 ಕೋಟಿ ರೂ. ಹಂಚಿಕೆ ಮಾಡಿದ್ದೇವೆ. 52,009 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದು ಉಳಿದ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 36,000 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ – ಈ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಬಳಸಲಾಗಿದೆ. ಮುಂದಿನ ಬಜೆಟ್‌ನಲ್ಲಿ 52,009 ಕೋಟಿ ಒದಗಿಸಿದ್ದು ಇದರೊಂದಿಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಶಾಂತಿ ಸುವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ತಾಯೇ ನಿರ್ಮಲಾ ಸೀತಾರಾಮನ್ :
ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ತೆರಿಗೆ ವಂಚನೆ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಸಿದ್ದರಾಮಯ್ಯ “ತಾಯೇ ನಿರ್ಮಲಾ ಸೀತಾರಾಮನ್, ಕನ್ನಡಿಗರಿಗೇಕೆ ಅನ್ಯಾಯ ಮಾಡ್ತೀಯಾ ಎಂದು ವ್ಯಂಗ್ಯವಾಡಿದರು. ಇಷ್ಟೆಲ್ಲ ಆದರೂ ಬಿಜೆಪಿಯವರು ತಮ್ಮ ಭಾಷಣದಲ್ಲಿ ಶೇ.30 ಭಾಗವನ್ನು ಕೇಂದ್ರ ಸರ್ಕಾರದ ಶ್ಲಾಘನೆಗೆ ಮೀಸಲಿಟ್ಟಿದ್ದಾರೆ. ನೀವು ಕನ್ನಡಿಗರಾ, ಕನ್ನಡದ ದ್ರೋಹಿಗಳು. ಮೋದಿಯವರಿಂದ ಹಿಡಿದು ಇಲ್ಲಿಯವರೆಗೆ ಬರೇ ಸುಳ್ಳು. ಸುಳ್ಳು ಅವರ ಮನೆ ದೇವರು. ಸುಳ್ಳಿನ ಫ್ಯಾಕ್ಟ್ರಿಯನ್ನೇ ಇಟ್ಟುಕೊಂಡಿದ್ದಾರೆ ಎಂದು ಛೇಡಿಸಿದರು.