ಶಿವಮೊಗ್ಗ: ಅಲ್ಪಸಂಖ್ಯಾತರ ಓಲೈಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಇದರಿಂದ ಹಿಂದೂಗಳ ಆಕ್ರೋಶ ಭುಗಿಲೇಳುತ್ತದೆ ಎಂಬ ಕಲ್ಪನೆ ಅವರಿಗಿಲ್ಲ. ಈ ರಾಜ್ಯದ ಜನ ಕ್ಷಮಿಸಲ್ಲ. ಮುಸ್ಲಿಂ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಯಾರನ್ನೋ ತೃಪ್ತಿಪಡಿಸಲು ಈ ರೀತಿ ಹೇಳಿಕೆ ಕೊಡಬಾರದು. ಅಧಿವೇಶನದಲ್ಲಿ ಸಮಯದಲ್ಲಿ ಹೊರಗೆ ಹೇಳಿಕೆ ಕೊಟ್ಟಿರುವುದನ್ನು ಖಂಡಿಸುತ್ತೇನೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಇದನ್ನು ಖಂಡಿಸುತ್ತೇನೆ. ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ತನ್ವೀರ್ ಪೀರಾ ಜೊತೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಿಎಂ ಎನು ಉತ್ತರ ಕೊಡುತ್ತಾರೆ ನೋಡೋಣ ಎಂದರು.
ಬರಗಾಲದ ವಿಚಾರವಾಗಿ ಮಾತನಾಡಿದ ಅವರು, ಬರಗಾಲದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಕೇಂದ್ರದಿಂದ ಪರಿಹಾರ ಕೊಡುವ ಬಗ್ಗೆ ನಾವು ಮನವಿ ಮಾಡುತ್ತೇವೆ. ರಾಜ್ಯ ಸರಕಾರ ಕೊಡುವ ಪರಿಹಾರವನ್ನು ಬೇಗ ಕೊಡಬೇಕು. ಕೇಂದ್ರ ಸರಕಾರ ಪರಿಹಾರ ಕೊಡುವವರೆಗೆ ಕಾಯಬಾರದು ಎಂದರು.
ಇದನ್ನೂ ಓದಿ:LLC; ಮೈದಾನದಲ್ಲಿ ಗಂಭೀರ್- ಶ್ರೀಶಾಂತ್ ಜಗಳ; ಆರೋಪಗಳ ಸುರಿಮಳೆಗೈದ ವೇಗಿ
ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯಬೇಕು. ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ಸಿಗಬೇಕು. ಅಧಿವೇಶನದಲ್ಲಿ ಇನ್ನು ಸಾಕಷ್ಟು ಸಮಯ ಇದೆ. ಈ ಬಗ್ಗೆ ಸಮಗ್ರ ಚರ್ಚೆ ಆಗಬೇಕು ಎಂದರು.
ಲೋಕಸಭೆ ಚುನಾವಣೆ ಸಿದ್ದತೆ ನಡೆದಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನೋಡೋಣ ಜನ ಏನು ತೀರ್ಮಾನ ಮಾಡುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.