Advertisement

ಸಿಎಂ ವಿರುದ್ಧ ಬಿಜೆಪಿ ಭೂಚಕ್ರ

07:55 AM Oct 11, 2017 | |

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮೂರು ದಿನಕ್ಕೊಮ್ಮೆ ಹಗರಣದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಬಿಜೆಪಿ, ತನ್ನ ಎರಡನೇ ಪ್ರಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭೂ ಡಿನೋಟಿಫಿಕೇಷನ್‌ನ ಗಂಭೀರ ಆರೋಪ ಮಾಡಿದೆ.

Advertisement

ಸುಮಾರು 300 ಕೋಟಿ ರೂ. ಮೌಲ್ಯದ ಜಮೀನನ್ನು ಸುಪ್ರೀಂ ಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಹೈಕೋರ್ಟ್‌ ಏಕಸದಸ್ಯ
ಪೀಠದ ಆದೇಶದಂತೆ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದೆ.ಅಲ್ಲದೆ, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ ಎಂದೂ ಬಿಜೆಪಿ ಆರೋಪಿಸಿದೆ. ಮಂಗಳವಾರ ದಾಖಲೆಗಳನ್ನು ಬಿಡುಗಡೆ ಮಾಡಿದ ಬಿಜೆಪಿ ಹಿಂದುಳಿದ
ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟ ಸ್ವಾಮಿ, ಬೆಂಗಳೂರು ಉತ್ತರ ತಾಲೂಕು, ಕಸಬಾ ಹೋಬಳಿ ಭೂಪಸಂದ್ರದಲ್ಲಿ ರಾಜಮಹಲ್‌ ವಿಲಾಸ್‌ 2ನೇ ಹಂತದ ಮುಂದುವರಿದ ಬಡಾವಣೆ ನಿರ್ಮಾಣಕ್ಕೆ 6.26 ಎಕರೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿ ಕೊಂಡು ನಿವೇಶನ ಹಂಚಿಕೆ ಮಾಡಿತ್ತು. ಬಳಿಕ ಸರ್ಕಾರ ಈ ಭೂಮಿಯನ್ನು ಡಿನೋ ಟಿಫೈ ಮಾಡಿತ್ತಾದರೂ ಅದನ್ನು ಸುಪ್ರೀಂ ರದ್ದು ಗೊಳಿಸಿತ್ತು. ಆದರೆ, ಸಿಎಂ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತವಾಗಿ ಭೂಸ್ವಾಧೀನ ಪ್ರಕ್ರಿಯೆ ಯನ್ನೇ ರದ್ದುಗೊಳಿ ಸುವ ಆದೇಶ ವನ್ನು ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಪಡೆಯಲಾಗಿದೆ. 

ಇದಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದ್ದು, ಆ ಕುರಿತು ಮೇಲ್ಮನವಿ ಸಲ್ಲಿಸಲೂ ಬಿಡಿಎಗೆ ಸರ್ಕಾರ ಅವಕಾಶ ನೀಡಿಲ್ಲ. ಇದರಲ್ಲಿ ಮುಖ್ಯಮಂತ್ರಿ ಸ್ವಜನ ಪಕ್ಷಪಾತ ಮಾಡಿದ್ದಾರೆ  ಎಂದು ಬಿ.ಜೆ.ಪುಟ್ಟಸ್ವಾಮಿ ಆಪಾದಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇನ್ನೆರಡು ದಿನಗಳಲ್ಲಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಲಾಗುವುದು. ಜತೆಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರಲ್ಲದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದರು.

ಏನಿದು ವಿವಾದ?: ರಾಜಮಹಲ್‌ ವಿಲಾಸ್‌ 2ನೇ ಹಂತದ ಮುಂದುವರಿದ ಬಡಾವಣೆ ನಿರ್ಮಾಣಕ್ಕಾಗಿ ಭೂಪಸಂದ್ರದ ಸರ್ವೇ ನಂ. 20 ಮತ್ತು 21ರಲ್ಲಿ ಸೈಯದ್‌ ಬಾಷೀದ್‌, ಕೆ.ವಿ.ಜಯಲಕ್ಷ್ಮಮ್ಮ, ದೋಬಿ ಮುನಿಸ್ವಾಮಿ ಮತ್ತಿತರರಿಗೆ ಸೇರಿದ್ದ 6.26 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 1978ರಲ್ಲಿ ಪ್ರಾಥಮಿಕ ಅಧಿಸೂಚನೆಯಾದ ಭೂಮಿಯನ್ನು 1987ರಲ್ಲಿ ಭೂಮಿ ಸ್ವಾಧೀನಕ್ಕೆ ಪಡೆದ ಬಿಡಿಎ ಅದರಲ್ಲಿ ಬಡಾವಣೆ ನಿರ್ಮಿಸಿ 22 ನಿವೇಶನಗಳನ್ನು ಹಂಚಿಕೆ ಮಾಡಿ, ಸಂಪೂರ್ಣ ಹಣವನ್ನೂ ಪಡೆದಿತ್ತು. ಆದರೆ, ರಾಜ್ಯ ಸರ್ಕಾರ 1992ರಲ್ಲಿ 6.26 ಎಕರೆಯನ್ನು ಡಿನೋಟಿಫೈ ಮಾಡಿತ್ತು. ಇದನ್ನು ಪ್ರಶ್ನಿಸಿ ನಿವೇಶನದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ 1996ರಲ್ಲಿ ಸರ್ಕಾರದ ಡಿನೋಟಿಫಿಕೇಷನ್‌ ಆದೇಶ ರದ್ದುಗೊಳಿಸಿತ್ತು.ಈ ಆದೇಶ ಪ್ರಶ್ನಿಸಿ ಸೈಯದ್‌ ಬಾಷಿದ್‌ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರಾದರೂ ಕೋರ್ಟ್‌ ಅದನ್ನು ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲೂ 2015ರಲ್ಲಿ ಇದೇ ಆದೇಶ ಪುನರಾವರ್ತನೆಯಾಗಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ
ಹಂತದಲ್ಲಿರುವಾಗಲೇ ಕಾಂಗ್ರೆಸ್‌ ಶಾಸಕ ವಸಂತ ಬಂಗೇರ ಅವರು 2013ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಆಧರಿಸಿ, ಈ ಭೂಮಿ ಪೈಕಿ ಮೂರು ನಿವೇಶನಗಳ ಕುರಿತು ಪರಿಶೀಲಿಸಿ ಚರ್ಚಿಸುವಂತೆ ಬಿಡಿಎ ಆಯುಕ್ತರಿಗೆ ಶರಾ ಬರೆದಿದ್ದರು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಮುಗಿದಿರುವುದರಿಂದ ಅರ್ಜಿದಾರರ ಮನವಿ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ನಂತರ
ವಸಂತ ಬಂಗೇರ ಅವರು 2014ರ ಮೇ ತಿಂಗಳಲ್ಲಿ ಇದೇ ವಿಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ಮತ್ತೆ ಮನವಿ ಸಲ್ಲಿಸಿದ್ದು, ಆಗಲೂ ಮುಖ್ಯಮಂತ್ರಿಗಳು, ಪರಿಶೀಲಿಸಿ ಕೂಡಲೇ ಚರ್ಚಿಸಿ ಎಂದು ಬಿಡಿಎ ಆಯುಕ್ತರಿಗೆ ಶರಾ ಬರೆದಿದ್ದರು.

Advertisement

ಈ ಮಧ್ಯೆ, 1978ರಲ್ಲಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆ ಪ್ರಶ್ನಿಸಿ ಜಯಲಕ್ಷ್ಮಮ್ಮ ಅವರು 2015ರ ನ. 30ರಂದು ಹೈಕೋರ್ಟ್‌ ಏಕಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, 2016ರ ಫೆಬ್ರವರಿಯಲ್ಲಿ ಪ್ರಾಥಮಿಕ ಅಧಿಸೂಚನೆ ರದ್ದುಗೊಳಿಸಿತ್ತು. 

ಕೀರ್ತಿರಾಜ ಶೆಟ್ಟಿವಕೀಲರಿಂದ ಸ್ಪಷ್ಟನೆ
ಬೆಂಗಳೂರು:
ಭೂಪಸಂದ್ರದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೀರ್ತಿರಾಜ್‌ ಶೆಟ್ಟಿ ಅವರ ಹೆಸರು ಪ್ರಸ್ತಾಪಿಸಿರುವ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದು ಸೇರಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರ ವಕೀಲ ಎಸ್‌. ಸುನೀಲ್‌ ದತ್ತಿ ಯಾದವ್‌ ಹೇಳಿದ್ದಾರೆ. ಸೈಯದ್‌ ಬಾಸಿತ್‌ ಪ್ರಕರಣದಲ್ಲಿ ಸರ್ಕಾರ
ಡಿನೋಟಿಫಿಕೇಷನ್‌ ಮಾಡಿ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಆದರೆ, ಭೂಸ್ವಾಧೀನ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಅವಧಿ ಮುಗಿದಿದ್ದರೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಅದನ್ನು ಪ್ರಶ್ನಿಸಿ ಕೆ.ವಿ.ಜಯಲಕ್ಷ್ಮಮ್ಮ ಮತ್ತಿತರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ ಹೈಕೋರ್ಟ್‌ ಆದೇಶಿಸಿತ್ತು. ಪುಟ್ಟಸ್ವಾಮಿ ಅವರು ಆರೋಪಿಸಿದಂತೆ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪ್ರಶ್ನೆಗಳು
„ ಭೂಪಸಂದ್ರದ 6.26 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡಿದ ಸರ್ಕಾರದ ಆದೇಶ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರಿಂದ ಸದರಿ ಭೂಮಿ ಬಿಡಿಎ ಸ್ವತ್ತಾಗಿದೆ ಎಂದು ಆಯು ಕ್ತರು ಹೇಳಿದ ಬಳಿಕವೂ ಈ ಕುರಿತು ಪರಿ ಶೀಲಿಸಿ ಕೂಡಲೇ ಚರ್ಚಿಸಿ ಎಂದು ಸಿದ್ದರಾ ಮಯ್ಯ ಆಯುಕ್ತರಿಗೆ ಸೂಚಿಸಿದ್ದೇಕೆ?

„ ನಿವೇಶನದಾರರಿಗೆ ಹಂಚಿಕೆ ಮಾಡಿ ಅವರ ಸ್ವಾಧೀನದಲ್ಲಿರುವ ಭೂಮಿ ಡಿನೋಟಿಫೈ ಮಾಡಿದ್ದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ 2015ರ ನ. 18 ರಂದು ಆದೇಶಿಸಿತ್ತು. ಇದಾ¨ ‌ ಕೆಲವೇ ದಿನಗಳಲ್ಲಿ ಅಂದರೆ 2015ರ ನ. 30ರಂದು ಕೆ.ವಿ.ಜಯಲಕ್ಷ್ಮಮ್ಮ ಅವರು ಹೈಕೋರ್ಟ್‌ ನಲ್ಲಿ ಪ್ರಾಥಮಿಕ ಅಧಿಸೂಚನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದೇಕೆ. 1978ರಿಂದ ಅದುವರೆಗೆ ಪ್ರಕರಣದಲ್ಲಿ ಮೌನವಾಗಿದ್ದ ಜಯಲಕ್ಷ್ಮಮ್ಮ 2015ರಲ್ಲಿ ಅರ್ಜಿ ಸಲ್ಲಿಸಲು ಕಾರಣವೇನು?

„ ಜಯಲಕ್ಷ್ಮಮ್ಮ ಅವರಿಗೆ 90 ವರ್ಷ ವಯಸ್ಸಾಗಿದ್ದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ 2015ರ ನ. 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೀರ್ತಿರಾಜ ಶೆಟ್ಟಿ ಅವರ ಹೆಸರಿಗೆ ಜಿಪಿಎ ಮಾಡಲಾಗಿತ್ತು. ನಂತರ ಹೈಕೋರ್ಟ್‌ ಏಕಸದಸ್ಯ ಪೀಠ ಭೂಸ್ವಾಧೀನ ಕುರಿತ ಪ್ರಾಥಮಿಕ ಅಧಿಸೂಚನೆ ರದ್ದುಗೊಳಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿರುವುದನ್ನು ಏಕೆ ನ್ಯಾಯಾಲಯದ ಗಮನಕ್ಕೆ ತರಲಿಲ್ಲ?

„ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಡಿಎ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಕಾನೂನು ಇಲಾಖೆ, ಕಾನೂನು ಕೋಶ ಮತ್ತು ಸರ್ಕಾರಿ ವಕೀಲರ ಮೂಲಕ ಇದು ಮೇಲ್ಮನವಿಗೆ ಸೂಕ್ತ ಪ್ರಕರಣ ಅಲ್ಲ ಎಂದು ಹೇಳಿಸಿ ಬಿಡಿಎ ಮೇಲ್ಮನವಿಯನ್ನು ವಾಪಸ್‌ ಪಡೆಯುವಂತೆ ಮಾಡಿದ್ದೇಕೆ?

ನಾವೂ ದಾಖಲೆ ಬಿಡ್ತೀವಿ!
ಬಿಎಸ್‌ವೈ ವಿರುದ್ಧ ನಮ್ಮ ಹತ್ತಿರವೂ ದಾಖಲೆ ಇದ್ದು, 10 ದಿನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿ.ವಿ. ರಾಮನ್‌ ನಗರ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಡಿನೋಟಿಫಿಕೇಶನ್‌ ಮಾಡಿರುವ ದಾಖಲೆ ತಮ್ಮ ಬಳಿ ಇದೆ ಎಂದಿದ್ದಾರೆ. 

ನಾನು ಯಾವುದೇ ಡಿನೋಟಿಫಿಕೇಷನ್‌ ಮಾಡಿಲ್ಲ. ಅಂದ ಮೇಲೆ ಆರೋಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣೆ
ಹತ್ತಿರ ಬರುತ್ತಿದ್ದಂತೆ ಬಿಜೆಪಿ ವೃಥಾ ಆರೋಪ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ವಕೀಲರೊಂದಿಗೆ ಚರ್ಚಿಸುತ್ತೇನೆ.

 ●ಸಿದ್ದರಾಮಯ್ಯ, ಮುಖ್ಯಮಂತಿ

“ನಾಲ್ಕುವರೇ ವರ್ಷ ಏನೂ ಮಾಡದ ಬಿಜೆಪಿಯವರು ರಾಷ್ಟ್ರೀಯ ನಾಯಕರು ಬಂದು ಹೋದ ಮೇಲೆ ಹಳೆ ವಿಷಯಗಳನ್ನು ಹೊಸ ರೀತಿಯಲ್ಲಿ ಹೇಳುತ್ತಿದ್ದಾರೆ. ಯಾವುದೇ ಡಿನೋಟಿಫಿಕೇಷನ್‌ ಮಾಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅರ್ಜಿ ಮೇಲೆ ಪರಿಶೀಲಿಸಿ ಎಂದು ಬರೆದಾಕ್ಷಣ ಡಿನೋಟಿಫಿಕೇಷನ್‌ ಆಗುವುದಿಲ್ಲ. ಅದಕ್ಕೆ ಅದರದೇ ಆದ ಪ್ರಕ್ರಿಯೆಗಳು ಇರುತ್ತವೆ. ರಾಜ್ಯದ ಹಿತಕ್ಕೆ ಧಕ್ಕೆ ತರುವ ಯಾವ ಕೆಲಸವೂ ನಮ್ಮ ಸರ್ಕಾರ ಮಾಡಿಲ್ಲ. ನಾವು ಶುದ್ಧ ಆಡಳಿತ ನೀಡಿದ್ದೇವೆ. ಇದನ್ನು ಸಹಿಸಿಕೊಳ್ಳಲು ಆಗದ ಬಿಜೆಪಿಯವರು ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅವರಿಗೆ ಯಶಸ್ಸು ಸಿಗುವುದಿಲ್ಲ.’
 ●ಡಿ.ಕೆ. ಶಿವಕುಮಾರ್‌, ಇಂಧನ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next